ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನದಿಂದ ಮತಕ್ಷೇತ್ರದ ಶೇ.96 ರಷ್ಟು ನೀರಾವರಿಯಾಗಿದೆ. ಸದ್ಯ ಪ್ರಗತಿ ಹಂತದಲ್ಲಿರುವ ಕೊಟ್ಟಲಗಿ-ಅಮ್ಮಾಜೇಶ್ವರಿ ಏತ ನೀರಾವರಿ ಕಾಮಗಾರಿಯನ್ನು 2026 ಜನವರಿ ತಿಂಗಳಲ್ಲಿ ಪೂರ್ಣಗೊಳಿಸಿ ಪ್ರಾಯೋಗಿಕ ರೈತರ ಜಮೀನುಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಚಿಕ್ಕ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಯಲ್ಲಮ್ಮವಾಡಿ ಕೆರೆಯ ಮೂಲಕ 8 ಕೆರೆಗಳಿಗೆ ನೀರು ತುಂಬಿಸುವ ₹95 ಕೋಟಿ ವೆಚ್ಚದ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಿ ಮಾತನಾಡಿದ ಅವರು, ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಪ್ರಮುಖವಾಗಿ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ರೈತರ ಬದುಕು ಸಮೃದ್ಧಿಗೊಳಿಸುವುದೇ ನನ್ನ ಗುರಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ನನ್ನ ಮತಕ್ಷೇತ್ರಕ್ಕೆ ಹಂತ, ಹಂತವಾಗಿ ಅನುದಾನ ಬಿಡುಗಡೆ ಮಾಡುವ ಮೂಲಕ ನೀರಾವರಿ ಯೋಜನೆ ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಸಹಕರಿಸಿದ್ದಾರೆ ಎಂದರು.ಕೊಟ್ಟಲಗಿ-ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿ ಈಗಾಗಲೇ ಶೇ.70 ರಷ್ಟು ಮುಗಿದಿದ್ದು, ಜನವರಿ ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಅಮ್ಮಾಜೇಶ್ಚರಿ ಏತ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆಯ ಲೋಕಾರ್ಪಣೆ ಹಾಗೂ ಕೃಷಿ ಮಹಾವಿದ್ಯಾಲಯದ ಕಾಮಗಾರಿಯ ಉದ್ಘಾಟನೆಗೆ ಸಿಎಂ ಮತ್ತು ಡಿಸಿಎಂ ಅವರನ್ನು ಬರುವ ಜನವರಿ ತಿಂಗಳಲ್ಲಿ ಆಮಂತ್ರಿಸಲಾಗುವುದು ಎಂದು ತಿಳಿಸಿದರು.ಕರಿ ಮಸೂತಿ ನೀರಾವರಿ ಯೋಜನೆಯಿಂದ ಹೊರಗುಳಿದ 12 ಸಾವಿರ ಎಕರೆ ಭೂಮಿ ಸೇರಿದಂತೆ 75 ಸಾವಿರ ಎಕರೆ ಭೂಮಿ ಈ ಯೋಜನೆಗಳಿಂದ ನೀರಾವರಿಗೆ ಒಳಪಡುತ್ತದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕುವ ನಿಟ್ಟಿನಲ್ಲಿ ಮಾರುಕಟ್ಟೆ ವ್ಯವಸ್ಥೆ, ಗುಣಮಟ್ಟದ ವಿದ್ಯುತ್ ಶಕ್ತಿ ಒದಗಿಸುವ ಉದ್ದೇಶದಿಂದ ಹೆಚ್ಚುವರಿ ವಿದ್ಯುತ್ ಘಟಕಗಳನ್ನು ಆರಂಭಿಸುವುದಲ್ಲದೇ ಸೋಲಾರ್ ವಿದ್ಯುತ್ ಪಾರ್ಕ್ ನಿರ್ಮಿಸುವ ಸಂಕಲ್ಪ ಹೊಂದಲಾಗಿದೆ. ರೈತರು ಬೆಳೆದ ಬೆಳೆಗಳನ್ನು ಸಾಗಿಸಲು ಉತ್ತಮವಾದ ರಸ್ತೆಗಳ ಸುಧಾರಣೆ, ರೈತರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕುವ ನಿಟ್ಟಿನಲ್ಲಿ ಕೇಂದ್ರೀಯ ಮಹಾವಿದ್ಯಾಲಯ, ಕೃಷಿ ಮಹಾವಿದ್ಯಾಲಯ ಸ್ಥಾಪನೆ ಸೇರಿದಂತೆ ಅಥಣಿ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಅಧಿಕಾರಿಗಳ ಕಾರ್ಯಕ್ಕೆ ಪ್ರಸಂಶೆ: ಮತಕ್ಷೇತ್ರದಲ್ಲಿನ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಚಿಕ್ಕ ನೀರಾವರಿ ಇಲಾಖೆಯ ಹಿಂದಿನ ಸಹಾಯಕ ಅಭಿಯಂತರ ಶ್ರೀಕಾಂತ ಮಾಕಾಣಿ, ಸದ್ಯದ ಅಭಿಯಂತರ ಪ್ರವೀಣ ಪಾಟೀಲ, ಅಮ್ಮಾಜಿಶ್ವರಿ ಏತ ನೀರಾವರಿ ಯೋಜನೆಗೆ ಶ್ರಮಿಸುತ್ತಿರುವ ಅಭಿಯಂತರು ಪ್ರವೀಣ ಹುಣಸಿಕಟ್ಟಿ, ಗುತ್ತಿಗೆದಾರ ಸಂತೋಷ ಗಾಣಿಗೇರ ಸೇರಿದಂತೆ ಎಲ್ಲ ಹಿರಿಯ ಕಿರಿಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಅವರ ನಿರಂತರ ಮತ್ತು ಉತ್ತಮ ಕಾರ್ಯಕ್ಷಮತೆಯಿಂದ ಕಾಮಗಾರಿಗಳು ಬರದಿಂದ ಪ್ರಗತಿ ಹಂತದಲ್ಲಿ ಸಾಗುತ್ತಿವೆ ಎಂದು ಅಧಿಕಾರಿಗಳ ಶ್ರಮವನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದರಾಯ ಯಲ್ಲಡಗಿ, ಶೇಖರ ನೇಮಗೌಡ, ರಾಜಶೇಖರ ಗುಡೋಡಗಿ, ಸಂತೋಷ ಸಾವಡಕರ, ಸಯ್ಯದ್ ಅಮಿನ್ ಗದ್ಯಾಳ, ಬಸವರಾಜ ಸಿಂಧನೂರ, ಶಿವಾನಂದ ದಿವಾನಮಳ, ರಾಮಣ್ಣ ಧರಿಗೌಡ, ಗುರು ದಾಸ್ಯಾಳ, ಅಮೋಘಸಿದ್ದ ಕೊಬ್ರಿ, ಅರ್ಜುನ್ ಪೂಜಾರಿ, ಬಸವರಾಜ ಸಿಂಧೂರ, ನೂರಅಹಮದ್ ಡೊಂಗರಗಾಂವ, ರಾಮನಗೌಡ ಪಾಟಿಲ, ಮಹಾಂತೇಶ ಠಕ್ಕಣವರ, ಮಲ್ಲು ಕುಳ್ಳೋಳಿ, ಮಹಾಂತೇಶ ಬಾಡಗಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಲವ್ವ ಪೂಜಾರಿ, ಗುತ್ತಿಗೆದಾರ ಸಂತೋಷ ಗಾಣಿಗೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ವಿರೋಧ ಪಕ್ಷದ ಕೆಲ ನಾಯಕರು ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ವಿಫಲವಾಗಿದೆಂದು ಹೇಳಿಕೆ ಕೊಡುವ ಮೂಲಕ ರೈತರಲ್ಲಿ ಆತಂಕ ಮೂಡಿಸುತ್ತಿದ್ದು, ಈ ಯೋಜನೆ ಪೂರ್ಣಗೊಂಡ ನಂತರ ವಿಫಲಯೋ ಅಥವಾ ಸಫಲವಾಗುತ್ತದೆಯೋ ಎನ್ನುವುದರ ಕುರಿತು ಚರ್ಚೆಯಾಗಬೇಕು. ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಪಂಚ್ ಗ್ಯಾರಂಟಿ ಅನುಷ್ಠಾನದಿಂದ ಆರ್ಥಿಕ ಅಡತಡೆ ಆಗಬಾರದು ಎನ್ನುವ ಕಾರಣದಿಂದ ನಬಾರ್ಡ್ ಯೋಜನೆಯಡಿ ಸೇರ್ಪಡೆಗೊಳಿಸಲಾಗಿದೆ. ಇದರಿಂದ ಕಾಮಗಾರಿ ಅನುಷ್ಠಾನಕ್ಕೆ ಯಾವುದೇ ಆರ್ಥಿಕ ತೊಂದರೆ ಉಂಟಾಗುವುದಿಲ್ಲ.
-ಲಕ್ಷ್ಮಣ ಸವದಿ, ಶಾಸಕರು.