ಬೆಲೆ ಏರುವ ಆಸೆಯಲ್ಲಿ ಕಾಫಿ ಇಟ್ಟು ಕೆಟ್ಟ ಬೆಳೆಗಾರ

KannadaprabhaNewsNetwork |  
Published : Jun 18, 2025, 11:49 PM IST
18ಎಚ್ಎಸ್ಎನ್6 :  | Kannada Prabha

ಸಾರಾಂಶ

ಕಾಫಿ ಮಾರಾಟ ಮಾಡದ ಬೆಳೆಗಾರರ ಸ್ಥಿತಿ ಈಗ ಬಾಣಲೆಯಿಂದ ಬೆಂಕಿಗೆಬಿದ್ದಂತಾಗಿದೆ. ಧಾರಣೆ ಇದ್ದ ಕಾಲದಲ್ಲಿ ಮಾರಾಟ ಮಾಡದೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದ ಬೆಳೆಗಾರರು ಈಗ ಬೆಲೆ ಇಳಿಕೆಯಿಂದ ಸೃಷ್ಟಿಯಾಗಿರುವ ನಷ್ಟದೊಂದಿಗೆ ಗುಣಮಟ್ಟದೊಂದಿಗೂ ರಾಜಿ ಮಾಡಿಕೊಳ್ಳಬೇಕಾದ ಕಡುಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ಬೆಲೆ ಇಳಿಕೆಯಿಂದ ಬೆಳೆಗಾರರಿಗೆ ಭಾರಿ ನಷ್ಟ ಕಣ್ಮುಂದೆ ಕಾಣುತ್ತಿದ್ದರು. ಗುಣಮಟ್ಟ ಹಾಳಾಗುವುದರಿಂದ ಬೆಳೆಗಾರರು ಕಾಫಿ ಮಾರಾಟ ಮಾಡಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕಾಫಿ ಮಾರಾಟ ಮಾಡದ ಬೆಳೆಗಾರರ ಸ್ಥಿತಿ ಈಗ ಬಾಣಲೆಯಿಂದ ಬೆಂಕಿಗೆಬಿದ್ದಂತಾಗಿದೆ. ಧಾರಣೆ ಇದ್ದ ಕಾಲದಲ್ಲಿ ಮಾರಾಟ ಮಾಡದೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದ ಬೆಳೆಗಾರರು ಈಗ ಬೆಲೆ ಇಳಿಕೆಯಿಂದ ಸೃಷ್ಟಿಯಾಗಿರುವ ನಷ್ಟದೊಂದಿಗೆ ಗುಣಮಟ್ಟದೊಂದಿಗೂ ರಾಜಿ ಮಾಡಿಕೊಳ್ಳಬೇಕಾದ ಕಡುಕಷ್ಟಕ್ಕೆ ಸಿಲುಕಿದ್ದಾರೆ.

ಧಾರಣೆ ಮತ್ತಷ್ಟು ಬೇಕು ಎಂಬ ಆಸೆಗೆ ಬಿದ್ದ ಬೆಳೆಗಾರರು ಕಾಫಿ ಕೊಯ್ಲು ನಡೆಸುವ ವೇಳೆಯೆ ಸರ್ವಕಾಲಿಕ ದಾಖಲೆ ಬೆಲೆ ಕಂಡರೂ ಮಾರಾಟ ಮಾಡದೇ ಇಂದು ತಮ್ಮ ಉತ್ಪನ್ನ ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೆ, ಕೊಳ್ಳುವವರ ಸಂಖ್ಯೆ ತೀರ ಕಡಿಮೆಯಾಗಿರುವುದು ಸಮಸ್ಯೆಯ ಮೂಲವಾಗಿದೆ.

ಮಾರಾಟ ಮಾಡಲೇಬೇಕು:

ಈಗಾಗಲೇ ಕಾಫಿ ಕೊಯ್ಲು ಮುಗಿದು ನಾಲ್ಕು ತಿಂಗಳು ಕಳೆಯುತ್ತಿದ್ದು ಕಾಫಿಯನ್ನು ಇನ್ನೂ ಹೆಚ್ಚು ದಿನ ಶೇಖರಿಸಿ ಇಡುವಂತಿಲ್ಲ. ಶೇಖರಿಸಿಟ್ಟರೆ ಮಳೆಯಿಂದಾಗಿ ಕಾಫಿ ಶೀತಾಂಶ ಹೀರಿಕೊಳ್ಳುವುದರಿಂದ ಕಾಫಿಯಲ್ಲಿ ಹುಳುಗಳು ಉತ್ಪತ್ತಿಯಾಗುವುದು ನಿಶ್ಚಿತ. ಇದರಿಂದ ಕಾಫಿ ಬೀಜಗಳು ಗುಣಮಟ್ಟ ಕಳೆದುಕೊಳ್ಳುವುದರಿಂದ ಮಾರುಕಟ್ಟೆಯಲ್ಲಿ ಧಾರಣೆ ಇಲ್ಲದಂತಾಗುವುದು ಖಂಡಿತ. ಭಾರಿ ಜಾಗ್ರತೆಯಲ್ಲಿ ಕಾಫಿ ಶೇಖರಿಸಿಟ್ಟರೂ ಹಳೇ ಕಾಫಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿರುವ ಕಾರಣ ಕಾಫಿಯನ್ನು ಮಾರಾಟ ಮಾಡಲೇಬೇಕಾದ ಅನಿವಾರ್ಯತೆಗೆ ಬೆಳಗಾರರು ಸಿಲುಕಿದ್ದಾರೆ.

ಮಾರುಕಟ್ಟೆ ಕುಸಿತ:

ಇತ್ತ ಮಾರುಕಟ್ಟೆಯಲ್ಲಿ ನಿತ್ಯ ಬೆಲೆ ಇಳಿಕೆಯಾಗುತ್ತಿದ್ದು, ಮಾರ್ಚ್ ತಿಂಗಳಿನಲ್ಲಿ ೫೦೫ ರು.ಗಳಿದ್ದ ಓಟಿ ಧಾರಣೆ ೩೮೦ಕ್ಕೆ ಕುಸಿದಿದೆ. ಈ ಪ್ರಕಾರ ಓಟಿ ಧಾರಣೆ ೫೦೫ ರು. ಗಳಿದ್ದ ವೇಳೆ ೨೮ ಓಟಿ ಇದ್ದ ೫೦ ಕೆ.ಜಿ ರೋಬಸ್ಟ್ ಕಾಫಿಗೆ ೧೪ ಸಾವಿರಕ್ಕೂ ಅಧಿಕ ಧಾರಣೆ ದೊರಕಿದರೆ ಇಂದು ಇದೇ ಓಟಿ ಧಾರಣೆ ಇರುವ ಕಾಫಿಗೆ ೧೦೫೦೦ ರು. ಗಳಾಗಿದೆ. ನಿರಂತರ ಬೆಲೆ ಇಳಿಕೆಯಿಂದ ಬೆಳೆಗಾರರಿಗೆ ಭಾರಿ ನಷ್ಟ ಕಣ್ಮುಂದೆ ಕಾಣುತ್ತಿದ್ದರು. ಗುಣಮಟ್ಟ ಹಾಳಾಗುವುದರಿಂದ ಬೆಳೆಗಾರರು ಕಾಫಿ ಮಾರಾಟ ಮಾಡಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ವ್ಯಾಪಾರಿಗಳಲ್ಲಿ ನಿರುತ್ಸಾಹ:

ಮಾರುಕಟ್ಟೆಯಲ್ಲಿ ನಿರಂತರ ಬೆಲೆ ಇಳಿಕೆ ದಾಖಲೆಯಾಗುತ್ತಿರುವುದರಿಂದ ಸ್ಥಳೀಯ ವ್ಯಾಪಾರಿಗಳಲ್ಲಿ ನಷ್ಟದ ಭಯ ಕಾಡುತ್ತಿರುವುದರಿಂದ ಸಾಕಷ್ಟು ವರ್ತಕರು ಕಾಫಿ ಕೊಳ್ಳುವುದನ್ನೇ ಸ್ಥಗಿತಗೊಳಿಸಿದ್ದಾರೆ. ಅಲ್ಲದೆ ಶೇಖರಿಸಿಟ್ಟಿರುವ ಕಾಫಿ ಈಗಾಗಲೇ ತೇವಾಂಶ ಹಿರಿದ್ದು ಕ್ಯೂರಿಂಗ್ ವರ್ಕ್ಸ್‌ಗಳಲ್ಲಿ ಭಾರಿ ಪ್ರಮಾಣದ ಬೆಲೆ ಕಡಿತ ಮಾಡುವುದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೂ ವ್ಯಾಪಾರಗಾರರು ಕಾಫಿ ಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಒಮ್ಮೆ ಕಾಫಿ ಮಾರಾಟ ಮಾಡಿದರೆ ಸಾಕು ಎಂಬ ಮನಸ್ಥಿತಿಗೆ ಬಂದಿರುವ ಸಾಕಷ್ಟು ಬೆಳೆಗಾರರು ಈಗ ಒತ್ತಾಯಪೂರ್ವಕವಾಗಿ ವರ್ತಕರು ವಿಧಿಸಿದ ಎಲ್ಲ ಷರತ್ತುಗಳಿಗೆ ಬದ್ಧರಾಗಿ ಕಾಫಿ ಮಾರಾಟ ಮಾಡುತ್ತಿರುವ ಕಾರಣ ಮಾರುಕಟ್ಟೆಯ ನಿಖರ ಬೆಲೆಯೂ ಬೆಳೆಗಾರರಿಗೆ ದೊರೆಯದಾಗಿದೆ.

ವರ್ಷವಿಡೀ ವ್ಯಾಪಾರ

ಕಾಫಿ ಮುಕ್ತ ಮಾರುಕಟ್ಟೆಗೆ ತೆರದುಕೊಂಡ ಮೂವತ್ತು ವರ್ಷಗಳಿಂದ ಕಾಫಿ ಮಾರುಕಟ್ಟೆ ಸ್ಥಳೀಯವಾಗಿ ಮೂರು ತಿಂಗಳು ಮಾತ್ರ ವಹಿವಾಟು ನಡೆಯುತ್ತಾ ಬಂದಿದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಿಂದ ಏಪ್ರೀಲ್ ತಿಂಗಳ ಅವಧಿಯಲ್ಲಿ ಶೇ. ೯೦ರಷ್ಟು ಕಾಫಿ ಮಾರುಕಟ್ಟೆ ಸೇರುತ್ತಿತ್ತು. ಆದರೆ, ಕಳೆದ ಎರಡು ವರ್ಷದ ಮಾರುಕಟ್ಟೆ ಏರಿಳಿತ ಗಮನಿಸಿದ್ದ ಬೆಳೆಗಾರ, ಈ ಬಾರಿ ಇಟ್ಟು ನೋಡುವ ತಂತ್ರ ಅನುಸರಿಸಿದ್ದರಿಂದ ಮಾರುಕಟ್ಟೆ ನಡೆಯುವ ಈ ಮೂರು ತಿಂಗಳ ಅವಧಿಯಲ್ಲಿ ಶೇ. ೪೦ರಷ್ಟು ಕಾಫಿ ಮಾತ್ರ ಮಾರುಕಟ್ಟೆ ಪ್ರವೇಶಿಸಿದ್ದು ಉಳಿಕೆ ಫಸಲನ್ನು ಸಂಗ್ರಹಿಸಲಾಗಿತ್ತು. ಆದರೆ, ತಿಂಗಳುಗಳು ಉರುಳಿದರು ಬೆಲೆ ಏರಿಕೆಯಾಗದ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿ ಕಾಫಿಯನ್ನು ಮಾರುಕಟ್ಟೆಗೆ ಬೆಳೆಗಾರರು ಬಿಡಲಾರಂಭಿಸಿರುವುದರಿಂದ ಮೂರು ತಿಂಗಳ ಕಾಫಿ ವಹಿವಾಟು ವರ್ಷಪೂರ್ಣ ನಡೆಯುವಂತಾಗಿದೆ.

ಮೇಲೇರದ ಕರಿಮೆಣಸು ಧಾರಣೆ:

ಮೆಣಸು ಕೊಯ್ಲು ನಡೆಯುವ ಸಂದರ್ಭದಲ್ಲಿ ಕೆ.ಜಿ ಮೆಣಸು ೭೫೦ ರು. ಗಳಿಗೆ ತಲುಪಿತ್ತು. ಈ ಬಾರಿ ಮೆಣಸಿನ ಇಳುವರಿ ಕುಂಠಿತ ಎಂಬ ಕಾರಣಕ್ಕೆ ಮತ್ತಷ್ಟು ಬೆಲೆ ಏರಿಕೆಯಾಗಲಿದೆ ಎಂಬ ನಂಬಿಕೆ ಮಾರುಕಟ್ಟೆಯಲ್ಲಿ ನೆಲೆಸಿತ್ತು. ಆದರೆ, ಮಾರುಕಟ್ಟೆ ನಂಬಿಕೆಗೆ ವಿರುದ್ಧವಾಗಿ ಬೆಲೆ ಇಳಿಮುಖದತ್ತ ಸಾಗಿದ್ದು ಕಳೆದ ಮೂರು ತಿಂಗಳಿನಿಂದ ಬೆಲೆ ಮೇಲೇರುತ್ತಿಲ್ಲ. ಸದ್ಯ ೬೫೦ ರು.ಗಳ ಆಸುಪಾಸಿನಲ್ಲೆ ಕರಿಮೆಣಸಿನ ಧಾರಣೆ ಇದೆ.

----------------------------------------------------------------

ಹೇಳಿಕೆ1

ಇದೇ ಮೊದಲ ಬಾರಿಗೆ ಮಳೆಗಾಲದಲ್ಲೂ ಕಾಫಿ ಮಾರುಕಟ್ಟೆಗೆ ಬರುತ್ತಿದ್ದು, ಗುಣಮಟ್ಟದ ಕಾಫಿ ಆಯ್ಕೆಯೇ ಕಷ್ಟಕರವಾಗಿದೆ. ಇದರಿಂದಾಗಿ ನಷ್ಟದ ಸಾಧ್ಯತೆ ಹೆಚ್ಚಿರಲಿದೆ.

ಸಂದೇಶ್, ಕಾಫಿ ವರ್ತಕ ಹೇಳಿಕೆ2

ಮತ್ತಷ್ಟು ಕಾಫಿ ಧಾರಣೆ ಏರಿಕೆಯಾಗುವ ನಿರೀಕ್ಷೆಯಲ್ಲಿ ಕಾಫಿ ಶೇಖರಿಸಿಟ್ಟು ತಪ್ಪು ಮಾಡಿದ್ದು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

ದೇವರಾಜ್, ಕಾಫಿ ಬೆಳೆಗಾರ ಮಲ್ಲೆಗದ್ದೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ