ಕನ್ನಡಪ್ರಭ ವಾರ್ತೆ ಮದ್ದೂರು
ಪುರಸಭೆ ಉದ್ಯಾನವನದಲ್ಲಿ ಹಲವು ವರ್ಷಗಳಿಂದ ಶಿಥಿಲಗೊಂಡ ಮರಗಳನ್ನು ತೆರವುಗೊಳಿಸಲು ಪುರಸಭೆ ಅಧಿಕಾರಿಗಳ ಹಾಗೂ ಉದ್ಯಾನವನ ನಿರ್ವಹಣೆ ಮಾಡುವ ಸಿಬ್ಬಂದಿ ನಿರ್ಲಕ್ಷವೇ ಈ ಘಟನೆಗೆ ಕಾರಣವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸಂಜೆ ಬಿರುಸಿನಿಂದ ಬೀಸಿದ ಗಾಳಿಗೆ ಉದ್ಯಾನವನದಲ್ಲಿದ್ದ ತೆಂಗಿನ ಮರ ಒಂದು ಬುಡ ಸಮೇತ ಉರುಳಿ ಆಟದ ಉಪಕರಣಗಳ ಮೇಲೆ ಬಿದ್ದಿದೆ. ಇದರಿಂದ ಉಪಕರಣಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಗೊಂಡಿವೆ. ಇದೇ ವೇಳೆ ಉಪಕರಣಗಳೊಂದಿಗೆ ಆಟವಾಡುತ್ತಿದ್ದ ಕೆಲ ಮಕ್ಕಳು ಗಾಳಿಗೆ ಹೆದರಿ ದೂರ ಸರಿದ ಪರಿಣಾಮ ಯಾವುದೇ ಅನಾಹುತ ಉಂಟಾಗಲಿಲ್ಲ.ಈ ಬಗ್ಗೆ ಸಾರ್ವಜನಿಕರು ಪುರಸಭೆಗೆ ದೂರು ನೀಡಿದ್ದರೂ ಸಹ ಮರವನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿಲ್ಲ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಶಿಥಿಲಗೊಂಡ ಮರಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಬೇಕು ಹಾಗೂ ಉದ್ಯಾನವನದ ಮುಂಭಾಗದ ಪಾದಚಾರಿ ರಸ್ತೆಯಲ್ಲಿ ಅಕ್ರಮವಾಗಿ ತಲೆಯುತ್ತಿರುವ ಪಾನಿಪುರಿ, ಗೋಬಿ ಮತ್ತಿತರ ಅಂಗಡಿಗಳನ್ನು ತೆರುವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಉದ್ಯಾನವನದ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಉದ್ಯಾನವನದ ಸುತ್ತಮುತ್ತಲಿನ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.