ಶಿರಸಿ:
ಕಂದಾಯ ಇಲಾಖೆ ಅಧಿಕಾರಿಗಳು ಅತಿಕ್ರಮಣ ಖುಲ್ಲಾಪಡಿಸಲು ಆಗಮಿಸಿದ್ದರಿಂದ ರೈತನೋರ್ವ ಎಲ್ಲರ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ತನಾದ ಘಟನೆ ತಾಲೂಕಿನ ದೊಡ್ನಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಈ ಘಟನೆ ಬಳಿಕ ಅಧಿಕಾರಿಗಳು ತೆರವು ಕಾರ್ಯಾಚರಣೆ ಮೊಟಕುಗೊಳಿಸಿದ್ದಾರೆ.ಸೋಮಯ್ಯ ಮಂಜ್ಯಾ ಜೋಗಿ ಆತ್ಮಹತ್ಯೆಗೆ ಪ್ರಯತ್ನಿಸಿದ ರೈತನಾಗಿದ್ದಾನೆ. ಸೋಮಯ್ಯನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರೋಟರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸೋಮಯ್ಯ ಕಳೆದ ೪೦ ವರ್ಷಗಳ ಹಿಂದೆ ದೊಡ್ನಳ್ಳಿಯಲ್ಲಿ ಸ.ನಂ. ೨೧ ಸರ್ಕಾರಿ ಪಡದಲ್ಲಿ ಒಂದು ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿ ಕೃಷಿ ಮಾಡುತ್ತಿದ್ದನೆಂದು ಹೇಳಲಾಗಿದೆ. ಅತಿಕ್ರಮಣ ಮಾಡಿದ ಭೂಮಿ ತೆರೆವುಗೊಳಿಸಲು ಕಂದಾಯ ಅಧಿಕಾರಿಗಳು ಪೊಲೀಸರ ರಕ್ಷಣೆಯಲ್ಲಿ ದೊಡ್ನಳ್ಳಿಗೆ ಆಗಮಿಸಿದ್ದರು. ತೆರವುಗೊಳಿಸಲು ಜೆಸಿಬಿ ಸದ್ದು ಮಾಡುತ್ತಿದ್ದಂತೆ ಸೋಮಯ್ಯ ತಡೆಯಲು ಪ್ರಯತ್ನಿಸಿದ್ದಾನೆ. ನಾನು ೪೦ ವರ್ಷದಿಂದ ಇಲ್ಲಿ ಕೃಷಿ ಮಾಡುತ್ತಿದ್ದೇನೆ. ಅತಿಕ್ರಮಣ ಸಕ್ರಮಕ್ಕಾಗಿ ಎರಡು ಬಾರಿ ಅರ್ಜಿ ಸಲ್ಲಿಸಿದ್ದೇನೆ. ನನಗಿರುವುದು ಇದೊಂದು ಭೂಮಿ ಬಿಟ್ಟರೇ ಮತ್ತೆಲ್ಲಿಯೂ ಜಾಗವಿಲ್ಲವೆಂದು ಬೇಡಿಕೊಂಡಿದ್ದಾನೆ. ಸೋಮಯ್ಯ ಮಾತಿಗೆ ದೊಡ್ನಳ್ಳಿ ಸಹಕಾರಿ ಸಂಘದ ಅಧಕ್ಷ ಎಸ್.ಎನ್. ಹೆಗಡೆ ಸೇರಿದಂತೆ ಅನೇಕ ಗ್ರಾಮಸ್ಥರು ತೆರವುಗೊಳಿಸದಂತೆ ಅಡ್ಡಪಡಿಸಿದರು. ಭಯಭೀತನಾದ ಸೋಮಯ್ಯ ಎಲ್ಲರ ಎದುರಿಗೆ ಕ್ರಿಮಿನಾಶಕ ಔಷಧ ಸೇವಿಸಿದ್ದಾನೆ. ಸ್ಥಳೀಯರು ಸೋಮಯ್ಯನ್ನನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ತಂದು ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರೊಟರಿ ಆಸ್ಪತ್ರೆಗೆ ಸೇರಿಸಿದ್ದಾರೆ.ಪ್ರವಾಸ ಮೊಟಕುಗೊಳಿಸಿದ ಭೀಮಣ್ಣಬೆಂಗಳೂರು ಪ್ರವಾಸದಲ್ಲಿರುವ ಶಾಸಕ ಭೀಮಣ್ಣ ನಾಯ್ಕ ಕ್ಷೇತ್ರದಲ್ಲಿ ಇಂತಹದ್ದೊಂದು ಘಟನೆ ನಡೆದಿರುವುದು ತಿಳಿಯುತ್ತಿದ್ದಂತೆಯೇ ತಮ್ಮ ಕಾರ್ಯಕ್ರಮ ಮೊಟಕುಗೊಳಿಸಿ ಶಿರಸಿಗೆ ಪ್ರಯಾಣ ಬೆಳೆಸಿದ್ದಾರೆ. ರೋಟರಿ ಆಸ್ಪತ್ರೆಯಲ್ಲಿರುವ ಸೋಮಯ್ಯನನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಘಟನೆಗೆ ಅರಣ್ಯ ಹಕ್ಕು ಹೋರಾಟಗಾರ ರವೀಂದ್ರನಾಥ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.ಅತಿಕ್ರಮಣ ತೆರವುಗೊಳಿಸದಂತೆ ಅಧಿಕಾರಿಗಳಿಗೆ ಹೇಳಿದರೂ ನಮ್ಮ ಮಾತು ಕೇಳಲಿಲ್ಲ. ಕೊನೆಗೆ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಕರೆ ಮಾಡಿದಾಗ ಕಂದಾಯ ಇಲಾಖೆ ಅಧಿಕಾರಿ ವಿಜಯಕುಮಾರಗೆ ಕೊಡುವಂತೆ ಹೇಳಿದರು. ಆದರೆ, ವಿಜಯಕುಮಾರ ಅವರು ತೆಗೆದುಕೊಳ್ಳಲಿಲ್ಲ. ತೆರವಿಗೆ ಮುಂದಾದಾಗ ಸೋಮಯ್ಯ ವಿಷ ಸೇವಿಸಿದರು ಎಂದು ದೊಡ್ನಳ್ಲಿ,ಗ್ರಾಮಸ್ಥ ಎಸ್.ಎನ್. ಹೆಗಡೆ ಹೇಳಿದರು.ತೆರೆವು ಕಾರ್ಯಾಚರಣೆ ನಿಲ್ಲಿಸಲು ಗ್ರಾಮಸ್ಥರೊಬ್ಬರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮೊಬೈಲ್ ನೀಡಲು ಹೇಳಿದೆ. ಆದರೆ ಅವರು ತೆಗೆದುಕೊಳ್ಳದೇ ತಮ್ಮ ದರ್ಪ ಮೆರೆದಿದ್ದಾರೆ. ಈ ಘಟನೆ ಪರಿಶೀಲನೆ ನಡೆಸಿ ಕ್ತಮಕೈಗೊಳ್ಳುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.