ಕನ್ನಡಪ್ರಭ ವಾರ್ತೆ ಹೊಸಪೇಟೆ ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯಲ್ಲಿ ಸ್ಮಾರಕಗಳ ಸಂರಕ್ಷಣೆಗಾಗಿ ಜೀರ್ಣೋದ್ಧಾರದ ಕಾರ್ಯ ಭರದಿಂದ ನಡೆಯುತ್ತಿದೆ. ಆದರೆ, ಈ ಕಾಮಗಾರಿ ವೇಳೆ ಐತಿಹಾಸಿಕ ವಿಗ್ರಹಗಳನ್ನು ಸುರಕ್ಷತೆ ಕ್ರಮ ಕೈಗೊಳ್ಳದೇ ಕ್ರೇನ್‌ಗಳನ್ನು ಬಳಸಿ ಭಾರಿ ಕಲ್ಲುಗಳನ್ನು ಎತ್ತಲಾಗುತ್ತಿದೆ ಎಂದು ಸ್ಮಾರಕಪ್ರಿಯರು ಆರೋಪಿಸಿದ್ದಾರೆ. ಹಂಪಿಯ ರಥಬೀದಿಯಲ್ಲಿ ಆದಿ ಶಂಕರಾಚಾರ್ಯರ ಹಾಗೂ ಶಿವಲಿಂಗ ವಿಗ್ರಹಗಳಿಗೆ ಸುರಕ್ಷತಾ ಕ್ರಮ ಕೈಗೊಳ್ಳದೇ ಕ್ರೇನ್‌ಗಳನ್ನು ಬಳಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕಾಳಿಕಾದೇವಿ ದೇವಾಲಯದಲ್ಲಿ ಮರಳಿನ ಚೀಲಗಳನ್ನಿಡಲಾಗಿದ್ದು, ಯಾವುದೇ ಸುರಕ್ಷತಾ ಕ್ರಮ ವಹಿಸಿಲ್ಲ. ಕೇಂದ್ರ ಪುರಾತತ್ವ ಇಲಾಖೆ ಹಾಗೂ ಗುತ್ತಿಗೆದಾರರು ಈ ಬಗ್ಗೆ ಕ್ರಮ ವಹಿಸಬೇಕು. ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಂಪಿಯ ರಥಬೀದಿಯಲ್ಲಿ ಆದಿ ಶಂಕರಾಚಾರ್ಯರ ಹಾಗೂ ಶಿವಲಿಂಗ ವಿಗ್ರಹಗಳಿಗೆ ಸುರಕ್ಷತಾ ಕ್ರಮ ಕೈಗೊಳ್ಳದೇ ಕ್ರೇನ್‌ಗಳನ್ನು ಬಳಸಿ ಭಾರಿ ಕಲ್ಲುಗಳನ್ನು ಎತ್ತಲಾಗುತ್ತಿದೆ. ಈ ವೇಳೆ ವಿಗ್ರಹಗಳ ಮೇಲೆ ಬಿದ್ದರೆ ಯಾರು ಹೊಣೆ. ಈ ಕೂಡಲೇ ಸುರಕ್ಷತಾ ಕ್ರಮವಹಿಸಬೇಕು. ಐತಿಹಾಸಿಕ ವಿಗ್ರಹಗಳ ಸುರಕ್ಷತೆಗೆ ಮೊದಲು ಕ್ರಮವಹಿಸಬೇಕು ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯ ಡಾ. ವಿಶ್ವನಾಥ ಮಾಳಗಿ ಒತ್ತಾಯಿಸಿದ್ದಾರೆ.