ಇಂದಿನಿಂದ ಒಂದು ಮುಷ್ಟಿ ಅಕ್ಕಿ ಅಭಿಯಾನಕ್ಕೆ ಚಾಲನೆ

KannadaprabhaNewsNetwork | Published : Dec 18, 2024 12:46 AM

ಸಾರಾಂಶ

ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ವತಿಯಿಂದ ಡಿ.18 ರಂದು ಬೆಳಗ್ಗೆ 9 ಗಂಟೆಗೆ ಬೊಮ್ಮನಕಟ್ಟೆಯ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಒಂದು ಮುಷ್ಟಿ ಅಕ್ಕಿ ಅಭಿಯಾನ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಈ. ವಿಶ್ವಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ವತಿಯಿಂದ ಡಿ.18 ರಂದು ಬೆಳಗ್ಗೆ 9 ಗಂಟೆಗೆ ಬೊಮ್ಮನಕಟ್ಟೆಯ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಒಂದು ಮುಷ್ಟಿ ಅಕ್ಕಿ ಅಭಿಯಾನ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಈ. ವಿಶ್ವಾಸ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಅಯ್ಯಪ್ಪ ಮಾಲಾಧಾರಿ ಭಕ್ತರುಗಳಿಗೆ ಅನ್ನದಾನ ನಡೆಸಲು ಅನುಕೂಲವಾಗುವಂತೆ ಮತ್ತು ಅದಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದಾಗಿ ಪ್ರತಿ ಮನೆಯಿಂದ ಒಂದು ಮುಷ್ಟಿ ಅಕ್ಕಿ ಹಾಗೂ ಇತರ ಸಾಮಾಗ್ರಿ ಸಂಗ್ರಹ ಅಭಿಯಾನ ಯೋಜನೆಗೆ ಅಂದು ಆದಿಚುಂಚನಗಿರಿ ಶಾಖಾಮಠದ ಶ್ರೀ ಸಾಯಿನಾಥ ಸ್ವಾಮಿಗಳು ಚಾಲನೆ ನೀಡಲಿದ್ದು, ಕೆ.ಎಸ್. ಈಶ್ವರಪ್ಪ, ಕೆ.ಈ. ಕಾಂತೇಶ್ ಉಪಸ್ಥಿತರಿರಲಿದ್ದಾರೆ ಎಂದರು.ಡಿ.24 ರಂದು ಸಂಜೆ 6 ಗಂಟೆಗೆ ನಗರದ ಶುಭಮಂಗಳದಲ್ಲಿ ಮಾಲಧಾರಿಗಳನ್ನು ಒಟ್ಟಿಗೆ ಸೇರಿಸಿ ಪಡಿಪೂಜೆ ಹಾಗೂ ಶಕ್ತಿಪೂಜೆ ನೆರವೇರಲಿದೆ. ಅಂದು ಪ್ರಸಾದ ವ್ಯವಸ್ಥೆ ಕೂಡಾ ಇರಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದರು.ಸತತವಾಗಿ ನಾಲ್ಕು ವರ್ಷಗಳಿಂದ ಈ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಕಳೆದ ಬಾರಿ 2 ಲಾರಿಯಷ್ಟು ಅಕ್ಕಿಯನ್ನು ಶಬರಿಮಲೈಗೆ ಕಳುಹಿಸಿಕೊಡಲಾಗಿದೆ. ಈ ಬಾರಿಯೂ ಕೂಡಾ ಅದೇ ರೀತಿಯಾಗಿ ಪ್ರತಿ ಮನೆಯಿಂದ ಒಂದು ಮುಷ್ಟಿ ಅಕ್ಕಿ ಸಂಗ್ರಹಿಸಿ ಶಬರಿಮಲೈಗೆ ಕಳುಹಿಸಿಕೊಡಲಾಗುವುದು ಎಂದ ಅವರು, ಹಿಂದುತ್ವದ ಪ್ರತಿಪಾದಕರಾಗಿ ಹಿಂದುತ್ವವನ್ನು ಬಹು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಿರುವ ಕೆ.ಎಸ್. ಈಶ್ವರಪ್ಪ ಅವರು ನಿರಂತರವಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.ಪ್ರತಿದಿನ 6 ವಾರ್ಡ್‌ಗಳಲ್ಲಿ 6 ಆಟೋಗಳ ಮೂಲಕ ಡಿ. 18ರಿಂದ 24ರವರೆಗೆ ಅಭಿಯಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.ಮಾಲಧಾರಿ ಗಣೇಶ್ ಸ್ವಾಮಿಗಳು ಮಾತನಾಡಿ, ಸುಮಾರು 27 ವರ್ಷ ಶಬರಿ ಮಲೆ ಯಾತ್ರೆ ಮಾಡಿದ್ದೇವೆ. ಅಯ್ಯಪ್ಪ ಸ್ವಾಮಿಯನ್ನು ಧರೆಗಿಳಿಸುವ ರೀತಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಹಾಗಾಗಿ ಎಲ್ಲಾ ಭಕ್ತಾದಿಗಳು ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಿ ಪಾವನರಾಗಬೇಕು ಎಂದರು.ಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತ್ರಿ, ಮಾಜಿ ನಗರಸಭೆ ಅಧ್ಯಕ್ಷ ಎಂ.ಶಂಕರ್, ಶ್ರೀಕಾಂತ್, ಪ್ರದೀಪ್ ಸ್ವಾಮಿ, ಕುಬೇರಪ್ಪ, ಪ್ರಕಾಶ್, ಶಿವಕುಮಾರ್, ಮಂಜುನಾಥ್, ಶಂಕರ್, ಜಾಧವ್ ಮೊದಲಾದವರಿದ್ದರು.

Share this article