ಪೂರ್ಣ ಪ್ರಮಾಣದ ತಾಲೂಕು ಆಡಳಿತ ಮರೀಚಿಕೆ

KannadaprabhaNewsNetwork | Published : Mar 7, 2025 12:47 AM

ಸಾರಾಂಶ

ಸುಮಾರು ೧೦ ಕೋಟಿ ರೂಗಳ ವೆಚ್ಚದಲ್ಲಿ ಭವ್ಯವಾದ ತಾಲೂಕು ಆಡಳಿತ ಸೌಧ ನಿರ್ಮಾಣವಾಗಿದ್ದರೂ ಜನರಿಗೆ ಮುಖ್ಯವಾಗಿ ಬೇಕಾಗಿರುವ ಸರ್ವೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ, ಸಣ್ಣ ನೀರಾವರಿ ಇಲಾಖೆ, ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಅರಣ್ಯ ಇಲಾಖೆ, ಸರ್ವೇ ಕಚೇರಿ, ಅಬಕಾರಿ ಇಲಾಖೆ ಕಚೇರಿ ತೆರೆದಿಲ್ಲ

ಕನ್ನಡಪ್ರಭವಾರ್ತೆ ಕೆಜಿಎಫ್ ಕೆಜಿಎಫ್ ೨೦೧೮ ರಲ್ಲಿ ಬಂಗಾರಪೇಟೆಯಿಂದ ವಿಭಜನೆಗೊಂಡು ಕೆಜಿಎಫ್ ಹೊಸ ತಾಲೂಕಿನ ಮಾನ್ಯತೆ ಪಡೆದುಕೊಂಡಿದ್ದರೂ ಶೇ ೫೦ ರಿಂದ ೬೦ ರಷ್ಟು ಇಲಾಖೆಗಳು ಮಾತ್ರ ಹೊಸ ತಾಲೂಕಿನಲ್ಲಿ ಕಾರ್ಯಾರಂಭ ಮಾಡಿವೆ. ಉಳಿದ ಇಲಾಖೆಗಳು ಬಂಗಾರಪೇಟೆಯಲ್ಲೇ ಇರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಹೊಸ ತಾಲೂಕು ರಚನೆಯಾದ ಬಳಿಕ ತಾಲೂಕು ಆಡಳಿತ ಸೌಧದ ನಿರ್ಮಾಣವನ್ನು ಸವಾಲಾಗಿ ಸ್ವೀಕರಿಸಿದ ಸ್ಥಳೀಯ ಶಾಸಕಿ ರೂಪಕಲಾ ಶಶಿಧರ್ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಕಿದ್ದರ ಫಲವಾಗಿ ಸುಮಾರು ೧೦ ಕೋಟಿ ರು.ಗಳ ವೆಚ್ಚದಲ್ಲಿ ಸುಸಜ್ಜಿತ ತಾಲೂಕು ಆಡಳಿತ ಸೌಧವನ್ನು ನಿರ್ಮಾಣ ಮಾಡಿಸುವಲ್ಲಿ ಯಶಸ್ವಿಯಾಗಿ ೨೦೨೨ರ ಅಕ್ಟೋಬರ್ ೨೭ ರಂದು ಅಂದಿನ ಕಂದಾಯ ಸಚಿವ ಆರ್.ಅಶೋಕ್ ರವರಿಂದ ಲೋಕಾರ್ಪಣೆಗೊಳಿಸಿದ್ದರು.ಪ್ರಮುಖ ಕಚೇರಿಗಳಿಗೆ ಅಲೆದಾಟ

ಸುಮಾರು ೧೦ ಕೋಟಿ ರೂಗಳ ವೆಚ್ಚದಲ್ಲಿ ಭವ್ಯವಾದ ತಾಲೂಕು ಆಡಳಿತ ಸೌಧ ನಿರ್ಮಾಣವಾಗಿದ್ದರೂ ಜನರಿಗೆ ಮುಖ್ಯವಾಗಿ ಬೇಕಾಗಿರುವ ಸರ್ವೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ, ಸಣ್ಣ ನೀರಾವರಿ ಇಲಾಖೆ, ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಅರಣ್ಯ ಇಲಾಖೆ, ಸರ್ವೇ ಕಚೇರಿ, ಅಬಕಾರಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳು ಸಂಪೂರ್ಣವಾಗಿ ಬಂಗಾರಪೇಟೆಯಿಂದ ಇನ್ನೂ ವಿಭಜನೆಯಾಗದೇ ಇರುವುದರಿಂದ ಈ ಇಲಾಖೆಗಳ ಸೇವೆಯನ್ನು ಪಡೆದುಕೊಳ್ಳಲು ತಾಲೂಕಿನ ಜನರು ಇಂದಿಗೂ ದೂರದ ಬಂಗಾರಪೇಟೆಗೆ ಅಲೆದಾಡುವುದು ತಪ್ಪಿಲ್ಲ. ಕಾರ್ಮಿಕ ಇಲಾಖೆಯ ನಿರೀಕ್ಷಕರಿಗೆ ಕೆಜಿಎಫ್, ಬಂಗಾರಪೇಟೆ ಮತ್ತು ಕೋಲಾರ ಮೂರು ತಾಲೂಕುಗಳ ಪ್ರಭಾರ ವಹಿಸಿರುವುದರಿಂದ ಲೇಬರ್ ಕಾರ್ಡ್, ಲೇಬರ್ ಕಾರ್ಡ್ ನವೀಕರಣ ಮತ್ತಿತರ ಕೆಲಸಗಳಿಗೆಂದು ಸಾರ್ವಜನಿಕರು ಕಚೇರಿಗೆ ಬಂದಾಗ ಇವರು ಜನರ ಕೈಗೆ ಸಿಗುವುದೇ ಇಲ್ಲ. ಇತ್ತೀಚೆಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ರವರು ಕಾರ್ಮಿಕ ಇಲಾಖೆ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದಾಗಲೂ ಕಾರ್ಮಿಕ ನಿರೀಕ್ಷಕರು ಕಚೇರಿಯಲ್ಲಿ ಹಾಜರಿಲಿಲ್ಲ.

ಇನ್ನು ಸಾಮಾಜಿಕ ಅರಣ್ಯ ಇಲಾಖೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ವಲಯ ಅರಣ್ಯಾಧಿಕಾರಿಗೆ ಕೆಜಿಎಫ್ ಜೊತೆಗೆ ಮುಳಬಾಗಿಲು, ಬಂಗಾರಪೇಟೆ ಮತ್ತು ಮಾಲೂರು ತಾಲೂಕುಗಳ ಪ್ರಭಾರವನ್ನು ವಹಿಸಿರುವುದರಿಂದ ಇವರೂ ಸಹ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ. ಇಲ್ಲಿ ಗುತ್ತಿಗೆ ಆಧಾರದ ಮೇಲೆ ನೌಕರರೊಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಟ್‌......................................

ಸರ್ವೆ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳು ಬಂಗಾರಪೇಟೆಯಿAದ ಕೆಜಿಎಫ್ ತಾಲೂಕಿಗೆ ಸಂಪೂರ್ಣವಾಗಿ ವರ್ಗಾವಣೆಯಾಗದೇ ಇರುವ ಬಗ್ಗೆ ಇದೇ ಶುಕ್ರವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು.

-ನಾಗವೇಣಿ, ತಹಸೀಲ್ದಾರ್, ಕೆಜಿಎಫ್

Share this article