ರಾಷ್ಟ್ರೀಯ ಹೆದ್ದಾರಿ ಮುಖ್ಯವಾಗಿದೆ. ರೈಲ್ವೇ ಇಲಾಖೆಗೆ ಸೇರಿದ ಜಾಗ ಎಂದು ರೈಲ್ವೇ ಇಲಾಖೆ ಹೇಳುತ್ತಿದೆ. ಹಾಗಾಗಿ ಕಂದಾಯ ಇಲಾಖೆ ಬಳಿ ಇರುವ ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ 69 ತುಮಕೂರಿನ ಮಧುಗಿರಿಯಿಂದ ಕೋಲಾರದ ಮುಳಬಾಗಿಲು ವರೆಗೆ ಇದೆ. ನಂತರ ಆಂಧ್ರಕ್ಕೆ ಸಂಪರ್ಕ ಕಲ್ಪಿಸಲಾಗುತ್ತೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಗೆ ಸಂಪರ್ಕ ಕಲ್ಪಿಸುವ ನೂತನ ರೈಲು ಮಾರ್ಗಗಳ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದರ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಗೌರಿಬಿದನೂರು, ಯಶವಂತಪುರ ಸೇರಿ ಹಲವು ರೈಲು ಮಾರ್ಗಗಳು ಮುಂದಿನ ದಿನಗಳಲ್ಲಿ ಬರಲಿವೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 69 ರ ರಸ್ತೆ ಅಗಲೀಕರಣಕ್ಕಾಗಿ ನಗರದ ಸರ್ ಎಂವಿ ಶಾಲೆ ಬಳಿಯಿಂದ ಅಣಕನೂರಿನ ವರೆಗೆ ರೈಲ್ವೆ ಇಲಾಖೆಗೆ ರಸ್ತೆಯಿರುವ ಜಮೀನು ಇದ್ದು ಈ ಕುರಿತು ಅಧಿಕಾರಿಗಳೊಂದಿಗೆ ರಸ್ತೆ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಸಂಸದರು ಮಾತನಾಡಿದರು.
ದಾಖಲೆ ಪರಿಶೀಲಿಸಿ ಕ್ರಮ
ಅದೇ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮುಖ್ಯವಾಗಿದೆ. ರೈಲ್ವೇ ಇಲಾಖೆಗೆ ಸೇರಿದ ಜಾಗ ಎಂದು ರೈಲ್ವೇ ಇಲಾಖೆ ಹೇಳುತ್ತಿದೆ. ಹಾಗಾಗಿ ಕಂದಾಯ ಇಲಾಖೆ ಬಳಿ ಇರುವ ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ 69 ತುಮಕೂರಿನ ಮಧುಗಿರಿಯಿಂದ ಕೋಲಾರದ ಮುಳಬಾಗಿಲು ವರೆಗೆ ಇದೆ. ನಂತರ ಆಂಧ್ರಕ್ಕೆ ಸಂಪರ್ಕ ಕಲ್ಪಿಸಲಾಗುತ್ತೆ. ಈ ರಸ್ತೆಯ ಅಭಿವೃದ್ಧಿಗಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಳಿ ಚರ್ಚೆ ನಡೆಸಿ 330 ಕೋಟಿ ಅನುದಾನ ಈ ಹಿಂದೆಯೇ ಮಂಜೂರು ಮಾಡಿಸಲಾಗಿದೆ ಎಂದರು.
ಇನ್ನು ರೈಲ್ವೇ ಇಲಾಖೆ ವಿಶ್ವೇಶ್ವರಯ್ಯ ಶಾಲೆ ಮುಂಭಾಗದ 31ನೇ ವಾರ್ಡಿನ ಅಂಬೇಡ್ಕರ್ ಕಾಲೋನಿಯ ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ಈ ಹಿಂದೆಯೇ ನೋಟಿಸ್ ನೀಡಿದೆ. ರೈಲ್ವೇ ಇಲಾಖೆಗೆ ಸೇರಿದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಕಾರಣ ಕೂಡಲೇ ಮನೆಗಳನ್ನು ಖಾಲಿ ಮಾಡುವಂತೆ ರೈಲ್ವೇ ಇಲಾಖೆ ಸೂಚನೆ ನೀಡಿದೆ ಎಂದರು.
ಜಾಗದ ಬಗ್ಗೆ ವಿವಾದ
ರಸ್ತೆ ಮತ್ತು ರೈಲು ಸಾರಿಗೆ ನಡುವೆ ಪ್ರಸ್ತುತ ಸಮಸ್ಯೆ ಎದುರಾಗಿದೆ. ಎರಡು ಇಲಾಖೆಗಳೂ ಸಮಾಜಕ್ಕೆ ಮುಖ್ಯವಾದ ಇಲಾಖೆಗಳೇ ಆಗಿದ್ದು, ಉಭಯ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಸ್ಥಳವೀಕ್ಷಣೆ ಮಾಡಲು ಆಹ್ವಾನಿಸಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳೂ ಸೇರಿ ಈ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ರೈಲ್ವೇ ಹಳಿ ಜೊತೆಗೆ ರಾಷ್ಟ್ರೀಯ ಹೆದ್ದಾರಿಯೂ ಬೇಕು, ಪ್ರಸ್ತುತ ಇರುವ ಜಾಗ ಸಾಲದು, ಹಾಗಾಗಿ ಮತ್ತೆ ಖಾಸಗಿ ಜಮೀನು ವಶಕ್ಕೆ ಪಡೆಯಬೇಕು. ಇದಕ್ಕೆ ಹಣ ರೈಲ್ವೇ ಇಲಾಖೆ ನೀಡುತ್ತಾ, ಇಲ್ಲವೇ ಇತರೆ ಇಲಾಖೆ ನೀಡಲಿದೆಯಾ ಎಂಬುದರ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗುತ್ತದೆ. ರಸ್ತೆ ಮತ್ತು ರೈಲು ಸೇವೆಗಳು ಸಾರ್ವಜನಿಕರಿಗೆ ಅತ್ಯಗತ್ಯವಾಗಿದ್ದು, ಇವೆರಡರ ಸಮಸ್ಯೆ ಬಗೆಹರಿಸಲು ದೃಢ ಸಂಕಲ್ಪ ಮಾಡಿ, ಸ್ಥಳ ವೀಕ್ಷಣೆ ಮತ್ತು ಸಭೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್, ನಗರಸಭೆ ಅಧ್ಯಕ್ಷ ಎ.ಗಜೇಂದ್ರ,ಉಪಾಧ್ಯಕ್ಷ ಜೆ.ನಾಗರಾಜ್, ಪೌರಾಯುಕ್ತ ಮನ್ಸೂರ್ ಅಲಿ, ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.