ರಾಮನಗರ: ಅರಣ್ಯದಂಚಿನಲ್ಲಿ ಬದುಕುತ್ತಿರುವ ಮೂಲ ಆದಿವಾಸಿಗಳಿಗೆ ಸರ್ಕಾರಿ ಯೋಜನೆಗಳು ಇಂದಿಗೂ ಸರಿಯಾಗಿ ತಲುಪುತ್ತಿಲ್ಲ. ಆದಿವಾಸಿಗಗಳನ್ನು ಒಳಗೊಳ್ಳುವ ರೀತಿಯಲ್ಲಿ ಯೋಜನೆಗಳು ರೂಪುಗೊಳ್ಳುತ್ತಿಲ್ಲ. ಇವರಿಗೆ ಏನು ಬೇಕು ಏನು ಬೇಡ ಎಂಬುದನ್ನು ಅವರ ಅಭಿಪ್ರಾಯದ ಮೇಲೆ ನಿರ್ಧರಿಸಬೇಕಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಿಶೇಷ ಕರ್ತವ್ಯ ಅಧಿಕಾರಿ ಪ್ರೊ. ವೆಂಕಟಗಿರಿ ದಳವಾಯಿ ಹೇಳಿದರು.
ಜಾನಪದ ಲೋಕದಲ್ಲಿ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ, ಮೂಲ ಆದಿವಾಸಿ ಸಮುದಾಯಗಳ ಸಮಸ್ಯೆಗಳ ನಿವಾರಣೆ ಮತ್ತು ಸರ್ಕಾರದ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸರ್ಕಾರ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಒಂದು ಪ್ರತ್ಯೇಕ ಘಟಕವಾಗಿ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರವನ್ನು ಆರಂಭಿಸಿ ಅಲ್ಲಿಗೆ ಮೂಲ ಆದಿವಾಸಿ ಇರುಳಿಗ ಸಮುದಾಯದ ಡಾ.ಕೃಷ್ಣಮೂರ್ತಿ ಕೆವಿ ಇವರನ್ನು ನೇಮಕ ಮಾಡಿದೆ. ಹೀಗಾಗಿ ಇಂದು ಮೂಲ ಆದಿವಾಸಿಗಳು ಹಾಗೂ ಸರ್ಕಾರಕ್ಕೆ ಕೊಂಡಿಯಾಗಿ ಈ ಅಧ್ಯಯನ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಇದರ ಭಾಗವೇ ಈ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಎಂದು ತಿಳಿಸಿದರು.ಇದುವರೆಗೆ ಆದಿವಾಸಿಗಳ ಕುರಿತು ಎಷ್ಟೋ ಆಯೋಗಗಳು ಮತ್ತು ಕಾಯ್ದೆಗಳು ಬಂದರೂ, ಅವರ ಜೀವನಮಟ್ಟ ಬದಲಾಗಿಲ್ಲ. ಬ್ರಿಟಿಷರ ಕಾಲದಿಂದಲೂ ಪ್ರಭುತ್ವ ಮತ್ತು ಆದಿವಾಸಿಗಳ ನಡುವೆ ಸಂಘರ್ಷ ನಡೆಯುತ್ತಲೆ ಇದೆ. ಬ್ರಿಟಿಷರು ತಮ್ಮ ಹಿತಾಸಕ್ತಿಗಾಗಿ ರೂಪಿಸಿಕೊಂಡಿದ್ದ ಕಾಯ್ದೆಗಳನ್ನೇ ಇಂದಿಗೂ ಮುಂದುವರೆಸಿಕೊಂಡು ಬಂದಿರುವುದು ಈ ಸಂಘರ್ಷಕ್ಕೆ ಕಾರಣ ಎಂದು ಹೇಳಿದರು.
ದೇಶದಲ್ಲಿ ಶೇ.8ರಷ್ಟಿರುವ ಈ ಜನರ ಹಕ್ಕು ಮತ್ತು ಅಧಿಕಾರವನ್ನು ಪ್ರತಿಪಾದಿಸಿ ಮುಂಚೂಣೆಗೆ ತರುವ ನಿಟ್ಟಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರಂತಹ ನಾಯಕ ಇವರಿಗೆ ಸಿಗದಿರುವುದು ದುರಾದೃಷ್ಟ. ಬುಡಕಟ್ಟು ಸಮುದಾಯದವರು ಸಮಾನ ಹಂಚಿಕೆಯ ಸುಸ್ಥಿರ ಅಭಿವೃದ್ಧಿ ಪರವಾಗಿರುವವರು. ಅಗತ್ಯಕ್ಕೆ ತಕ್ಕ ಆಹಾರ, ಭೂಮಿ ಬಳಕೆ ಸೇರಿದಂತೆ ಅವರ ಅಗತ್ಯಗಳಿಗೆ ಮಿತಿ ಇದೆ. ಕಾಡು ಅವರಿಗೆ ತಾಯಿ ಇದ್ದಂತೆ. ಇತ್ತೀಚೆಗೆ ಕಾಡಿನ ಜನರಲ್ಲಿ ಬಂಜೆತನ ಹೆಚ್ಚುತ್ತಿದೆ. ಮೂಲ ಆದಿವಾಸಿಗಳು ಅಲ್ಪಾಯುಷಿಗಳಾಗುತ್ತಿದ್ದಾರೆ. ಇವೆಲ್ಲದಕ್ಕೂ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.ರಾಷ್ಟ್ರೀಯ ಕಾನೂನು ಶಾಲೆಯ ತಳಸಮುದಾಯಗಳ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಆರ್.ಚಂದ್ರಶೇಖರ್ ಮಾತನಾಡಿ, ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರವು ಮೂಲ ಆದಿವಾಸಿಗಳ ಪರಂಪರೆ, ಸಂಸ್ಕೃತಿ, ಆಹಾರ ಸೇರಿದಂತೆ ವಿವಿಧ ವಿಷಯಗಳನ್ನು ಅಧ್ಯಯನ ಮಾಡುವ ಜೊತೆಗೆ ಅವರ ಮನೆ, ನೀರು, ರಸ್ತೆ, ಆರೋಗ್ಯ ಸೇರಿದಂತೆ ಬದುಕಿಗೆ ಬೇಕಾದ ಮೂಲ ಸೌಕರ್ಯಗಳ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿ ಸರ್ಕಾರದ ಗಮನಕ್ಕೆ ತರಬೇಕು. ಸರ್ಕಾರ ಮತ್ತು ಸಮುದಾಯದ ನಡುವೆ ಸೇತುವೆಯಾಗಿ ಕೇಂದ್ರ ಕೆಲಸ ಮಾಡಬೇಕು. ಆದಿವಾಸಿಗಳ ಕುರಿತು ನಡೆಯುವ ಸಂಶೋಧನೆಗಳು ಅವರ ಅಭಿವೃದ್ಧಿಗೆ ಪೂರಕವಾಗಿರಬೇಕು. ಜಿಲ್ಲಾಡಳಿತ, ಅರಣ್ಯ, ಕಂದಾಯ ಮತ್ತು ಪರಿಶಿಷ್ಟ ವರ್ಗಗಳ ಇಲಾಖೆ ಒಂದಾಗಿ ಕೆಲಸ ಮಾಡಿದರೆ ಆದಿವಾಸಿಗಳ ಸಮಸ್ಯೆಗಳು ಬಗೆಹರಿಯಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಡಾ. ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗವೇಣಿ, ಜಾನಪದ ಲೋಕದ ಕ್ಯೂರೇಟರ್ ಡಾ. ರವಿ ಯು.ಎಂ, ಉಪನ್ಯಾಸಕ ಡಾ. ಸಂದೀಪ್ ಕೆ.ಎಸ್, ಆರೋಗ್ಯ ಇಲಾಖೆಯ ಗಂಗಾಧರ್, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಸಯ್ಯದ್ ನಿಜಾಮುದ್ದೀನ್, ಶಿವು ಇತರರಿದ್ದರು.ಪೊಟೋ೨೮ಸಿಪಿಟಿ೬:ರಾಮನಗರದ ಜಾನಪದ ಲೋಕದಲ್ಲಿ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಮೂಲ ಆದಿವಾಸಿ ಸಮುದಾಯಗಳ ಸಮಸ್ಯೆಗಳ ನಿವಾರಣೆ ಮತ್ತು ಸರ್ಕಾರದ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಪ್ರೊ.ವೆಂಕಟಗಿರಿ ದಳವಾಯಿ ಉದ್ಘಾಟಿಸಿದರು.