ಸಹಕಾರಿ ಸಂಸ್ಥೆಗಳಲ್ಲಿ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ-ಸಚಿವ ಎಚ್‌.ಕೆ. ಪಾಟೀಲ್

KannadaprabhaNewsNetwork |  
Published : Nov 19, 2025, 01:15 AM IST
18ಎಚ್‌ವಿಆರ್5, 5ಎ | Kannada Prabha

ಸಾರಾಂಶ

ಸಹಕಾರಿ ಸಂಸ್ಥೆಗಳು ಪ್ರಜಾಪ್ರಭುತ್ವದ ಶಾಲೆಗಳಿದ್ದಂತೆ. ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಸಹಕಾರಿ ಸಂಸ್ಥೆಯಲ್ಲಿ ಕಾಣುತ್ತದೆ. ಸರ್ಕಾರಕ್ಕಿಂತಲೂ ಸಹಕಾರ ಚಳವಳಿ ಪ್ರಬಲವಾಗಿ ಬೆಳೆಯುತ್ತಿದೆ. ಬರುವ ದಿನಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಹಾವೇರಿ: ಸಹಕಾರಿ ಸಂಸ್ಥೆಗಳು ಪ್ರಜಾಪ್ರಭುತ್ವದ ಶಾಲೆಗಳಿದ್ದಂತೆ. ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಸಹಕಾರಿ ಸಂಸ್ಥೆಯಲ್ಲಿ ಕಾಣುತ್ತದೆ. ಸರ್ಕಾರಕ್ಕಿಂತಲೂ ಸಹಕಾರ ಚಳವಳಿ ಪ್ರಬಲವಾಗಿ ಬೆಳೆಯುತ್ತಿದೆ. ಬರುವ ದಿನಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.ನಗರದ ರಜನಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025 ಉದ್ಘಾಟಿಸಿ ಅವರು ಮಾತನಾಡಿದರು. ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು ಎಂಬುದು ಈ ವರ್ಷದ ಧ್ಯೇಯವಾಗಿದೆ. ದೇಶವನ್ನು ಸ್ವಾವಲಂಬಿಯಾಗಿ ಮಾಡಬೇಕಾದರೆ ಸಹಕಾರಿ ಸಂಸ್ಥೆ, ಸಹಕಾರಿ ಚಳವಳಿ ಎನ್ನುವ ಅರಿವು ಎಲ್ಲರಲ್ಲೂ ಮೂಡಿರುವುದು ಸಂತೋಷದ ಸಂಗತಿ. ರಾಷ್ಟ್ರದ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಪ್ರಬಲ ಅಸ್ತ್ರವಾಗಿ ಬೆಳೆಯುತ್ತಿದೆ. ಸಹಕಾರ ಕ್ಷೇತ್ರ ಆರಂಭದಲ್ಲಿ ಮುಂಬೈ ಪ್ರಾಂತದ ತುಂಬೆಲ್ಲ ವ್ಯಾಪಿಸಿ ಮಹಾರಾಷ್ಟ್ರ, ಗುಜರಾತ, ಕರ್ನಾಟಕದಲ್ಲಿ ಹೆಚ್ಚು ಬೆಳವಣಿಗೆ ಕಂಡಿತು. ಸಹಕಾರ ಕ್ಷೇತ್ರದಲ್ಲಿ ಶೇ. 80ರಷ್ಟು ಸಹಕಾರಿ, ಜವಳಿ, ಆಹಾರ ಸಂಸ್ಕರಣ ಕಟ್ಟಡಗಳು ಸ್ಥಾಪನೆಯಾಗಿವೆ. ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಯಾಗಿದ್ದರೆ ಅದು ಸಹಕಾರಿ ಕ್ಷೇತ್ರದಿಂದ ಮಾತ್ರವೇ ಸಾಧ್ಯ ಎಂದರು.ಸಹಕಾರಿ ರಂಗ ಜನರಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ ತುಂಬಿದೆ. ಚರ್ಚೆ, ಭಿನ್ನಾಭಿಪ್ರಾಯ, ಚುನಾವಣೆ, ಅಭಿವೃದ್ಧಿ ಅನೇಕ ವಿಷಯಗಳು ಸಹಕಾರಿ ಸಂಸ್ಥೆಗಳಲ್ಲಿ ಚರ್ಚೆಯಾಗುತ್ತವೆ. ಹಾಲು ಸಂಗ್ರಹಣೆಯಲ್ಲಿ ಕೋಟ್ಯಂತರ ರು. ಸಂಗ್ರಹವಾಗುತ್ತದೆ. ಜನಸಾಮಾನ್ಯರ ಕುಟುಂಬದ ಆದಾಯ ಹಂತಹಂತವಾಗಿ ದ್ವಿಗುಣವಾಗಿ, ಬದುಕಿನಲ್ಲಿ ಬದಲಾವಣೆಯಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಸಮಾಲೋಚನೆ, ಪ್ರೇರಕರಾಗಿ ನಿರ್ಣಯ ಕೈಗೊಳ್ಳಲು ಅನುಕೂಲ ಆಗುತ್ತದೆ. ಸಹಕಾರಿ ಕ್ಷೇತ್ರದಲ್ಲಿ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ರೈತರು, ಬಡವರು, ಮಹಿಳೆಯರ ಪರವಾಗಿ ಸಹಕಾರಿ ಸಂಸ್ಥೆಗಳು ಸೇವೆ ಒದಗಿಸುತ್ತವೆ. ಹಾಗಾಗಿ ನಾವೆಲ್ಲ ಆತ್ಮನಿರ್ಭರ ಭಾರತ ನಿರ್ಮಾಣದ ಜತೆಗೆ ಸ್ವಾವಲಂಬಿ ಭಾರತ ಕಟ್ಟಬೇಕಾಗಿದೆ ಎಂದರು. ಸಹಕಾರ ಕ್ಷೇತ್ರದಲ್ಲಿ ಅಖಂಡ ಧಾರವಾಡ ಜಿಲ್ಲೆಯ ಕೊಡುಗೆ ಬಹಳಷ್ಟಿದೆ. ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಂಕಲ್ಪ ಮಾಡಬೇಕಿದೆ. ಇತ್ತೀಚೆಗೆ ಸಹಕಾರ ಸಂಸ್ಥೆಗಳು ಕೆಲವರ ಹಿಡಿತದಲ್ಲಿವೆ. ಎಥೇನಾಲ್ ಸರಿಯಾಗಿ ಹಂಚಿಕೆ ಮಾಡಿದರೆ ಕಬ್ಬು ಬೆಳೆಗಾರರಿಗೆ ಸಹಾಯವಾಗುತ್ತದೆ. ಇವತ್ತು ಕೇಂದ್ರ ಸರ್ಕಾರ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಕೇಂದ್ರೀಕೃತ ಆಗಿರುವುದನ್ನು ಸಹಕಾರಿ ಕ್ಷೇತ್ರಕ್ಕೆ ಕೊಟ್ಟರೆ ಜನಸಾಮಾನ್ಯರಿಗೆ ಅನುಕೂಲ ಆಗುತ್ತದೆ. ಸಹಕಾರ ಸಂಸ್ಥೆ, ಸಹಕಾರ ಚಳವಳಿಯನ್ನು ಸ್ವಾವಲಂಬಿ ಮಾಡಬೇಕಿದೆ. ಸರ್ಕಾರದ ಜತೆಗೆ ಸಹಕಾರ ಕ್ಷೇತ್ರದ ಮಾದರಿಯು ದೇಶದ ತುಂಬೆಲ್ಲ ಪಸರಿಸಬೇಕಿದೆ ಎಂದರು.ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರು ಪ್ರದರ್ಶನ ಮಳಿಗೆ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ವಲಯದಲ್ಲಿ ಸಹಕಾರಿ ಕ್ಷೇತ್ರದ ಹಸ್ತಕ್ಷೇಪವಿದೆ. ನಾವೆಲ್ಲ ಸಹಕಾರಿಗಳು ಪಕ್ಷಾತೀತ, ಜಾತ್ಯತೀತವಾಗಿ ಇರಬೇಕು. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬರಬಾರದು. ಸಹಕಾರಿ ಧರ್ಮದ ಅಡಿಯಲ್ಲಿ ಕೆಲಸ ಮಾಡಬೇಕು. ಮಾನವ ಧರ್ಮ ಅಪೂರ್ವವಾಗಿ ಬಂದಿದೆ. ಎಲ್ಲರಿಗೂ ಪುಣ್ಯದ ಕೆಲಸ ಮಾಡಬೇಕು. ಯುವಕರಿಗೆ, ಮಹಿಳೆಯರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸಬೇಕು. ಶಿಸ್ತು, ಶಾಂತಿಯಿಂದ ಸಹಕಾರಿ ಕ್ಷೇತ್ರವನ್ನು ಬೆಳೆಸಬೇಕು. ಸಹಕಾರಿ ಸದಸ್ಯರ, ಜನಸಾಮಾನ್ಯರ ಹಣ ತಿಂದರೆ ಸರ್ವನಾಶ ಆಗುತ್ತೀರಿ. ಹೀಗಾಗಿ ಈ ಕ್ಷೇತ್ರದಲ್ಲಿ ಪುಣ್ಯದ ಕೆಲಸ ಮಾಡಬೇಕು ಎಂದ ಅವರು, ಇತ್ತೀಚೆಗೆ ಬೆಳಗಾವಿ, ಮಂಡ್ಯದಲ್ಲಿ ನಡೆದ ಸಹಕಾರಿ ಚುನಾವಣೆಯಲ್ಲಿ ಹಣ ಕೆಲಸ ಮಾಡಿರುವುದನ್ನು ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನಮ್ಮ ದೇಶದಲ್ಲಿ ಸಹಕಾರ ಕ್ಷೇತ್ರ ಹುಟ್ಟು ಹಾಕಿದವರು ಶಿದ್ದನಗೌಡ ಪಾಟೀಲ. ಅವರು ನಮ್ಮ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ. ಶ್ರೇಷ್ಠ, ಗಟ್ಟಿ ಧುರೀಣ ಹಾಗೂ ಮಂತ್ರಿಗಳಾಗಿದ್ದ ಕೆ.ಎಚ್. ಪಾಟೀಲ ಅವರು ಸಹಕಾರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಹಕಾರಿ ಸಂಸ್ಥೆಗಳಿಂದ ಹಲವರು ಬದುಕು ಕಟ್ಟಿಕೊಂಡಿದ್ದಾರೆ. ಅದೇ ರೀತಿ ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ಇಂದು ಜಾತಿ ಆಧಾರಿತ ಸಹಕಾರ ಕ್ಷೇತ್ರ ನಡೆಯುತ್ತಿದೆ. ಸಂಘಗಳು ಬೆಳೆಯಬೇಕು, ನಾವು ಬೆಳೆಯುವುದಲ್ಲ, ವೈಯಕ್ತಿಕ ಸ್ವಾರ್ಥ ಬಿಟ್ಟು ಸಂಸ್ಥೆ ಬೆಳೆಸಬೇಕು. ಸಹಕಾರ ತತ್ವ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಹಕಾರ ರತ್ನ-2025 ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಉತ್ತಮ ಸಹಕಾರಿ ಸಂಘಗಳಿಗೆ ಸನ್ಮಾನ, ಇ-ಫ್ಯಾಕ್ಸ್‌ಗಳ ಪ್ರಮಾಣಪತ್ರ ವಿತರಣೆ ಹಾಗೂ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ವಾರ ಪತ್ರಿಕೆ ಅನಾವರಣ ಕಾರ್ಯಕ್ರಮ ಜರುಗಿತು. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯ ಪ್ರಸಾದ, ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಇ.ಎಸ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ. ಹಿರೇಮಠ, ಎಂ.ಎಂ. ಮೈದೂರ, ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ, ಹಾವೇರಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಿವಾನಂದ ಸಂಗಾಪುರ, ಸಹಕಾರ ಮಹಾಮಂಡಳ ನಿರ್ದೇಶಕ ಬಸವರಾಜ ಅರಬಗೊಂಡ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ನಿರ್ದೇಶಕ ಎಂ.ಡಿ. ಮಲ್ಲೂರು, ಸಹಕಾರಿ ಸಂಘಗಳ ಸಂಯುಕ್ತ ನಿಬಂಧಕ ಕಲ್ಲಪ್ಪ ಓಬಣ್ಣಗೋಳ, ಅಜ್ಮತ್ ಉಲ್ಲಾಖಾನ್, ಸುನಿತಾ ಸಿದ್ರಾಮ್, ವಿದ್ಯಾ ಹೊನ್ನಶೆಟ್ಟಿ, ಎಸ್.ಜಿ. ಸುಣಗಾರ, ವಿಕ್ರಂ ಕುಲಕರ್ಣಿ, ಸಹಕಾರ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ನವೀನ ಇತರರು ಇದ್ದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಯುವಜನತೆ ತಂಬಾಕು ಸೇವನೆಯಿಂದ ದೂರವಿರಿ
ಪ್ರತ್ಯೇಕ ರಾಜ್ಯಕ್ಕೆ ನನ್ನ ಸಹಮತವಿಲ್ಲ: ಬಸವರಾಜ ಹೊರಟ್ಟಿ