ಪ್ರಧಾನಿ ಆಡಳಿತ ಟೀಕಿಸಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ

KannadaprabhaNewsNetwork |  
Published : May 26, 2024, 01:35 AM IST
25ಕೆಪಿಎಲ್28 ಕೊಪ್ಪಳದಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನದಲ್ಲಿ ರೈತ ಹೋರಾಟಗಾರ ರಾಕೇಶ ಟಿಕಾಯತ್ ಮಾತನಾಡುತ್ತಿರುವುದು  | Kannada Prabha

ಸಾರಾಂಶ

ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರ ಬರಿ ಸುಳ್ಳನ್ನೇ ಹೇಳುತ್ತಾ ಬಂದಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರ ಬರಿ ಸುಳ್ಳನ್ನೇ ಹೇಳುತ್ತಾ ಬಂದಿದೆ. ಇನ್ನು ಆ ಸುಳ್ಳನ್ನು ಯಾರೂ ಕೇಳುವುದಿಲ್ಲ ಮತ್ತು ಸಹಿಸಿಕೊಳ್ಳುವುದು ಇಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ನಗರದಲ್ಲಿ ನಡೆದ 10ನೇ ಮೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಉಳಿಸಲು ಮತ್ತು ರಕ್ಷಣೆ ಮಾಡಲು ಮತ್ತೊಂದು ಸ್ವಾತಂತ್ರ್ಯ ಹೋರಾಟವಾಗುವ ಅಗತ್ಯವಿದೆ. ಕವಿ, ಸಾಹಿತಿಗಳು ಕೇವಲ ಬರೆದರೆ ಸಾಲದು, ಬರೆದಂತೆ ತಾವು ಇರಬೇಕು ಮತ್ತು ಅದರಂತೆಯೇ ನಡೆಯಬೇಕು ಎಂದರು.

ಗೋಮುಖ ವ್ಯಾಘ್ರಗಳಾಗಿರುವವರ ಮುಖವಾಡ ಕಳಚುವ ಕಾಲ ಬಂದಿದೆ. ಇನ್ನು ಸುಮ್ಮನೇ ಕುಳಿತುಕೊಳ್ಳಲು ಆಗುವುದಿಲ್ಲ. ಸಂವಿಧಾನ ರಚಿಸಿ, ನಮಗೆ ಶಕ್ತಿ ಕೊಟ್ಟಿರುವ ಬಾಬಾ ಸಾಹೇಬ ಅಂಬೇಡ್ಕರ್ ಅವರ ಆಶಯದಂತೆ ನಡೆಯಬೇಕಾಗಿದೆ. ಅದೇ ಸಂವಿಧಾನ ಅಪಾಯದಲ್ಲಿರುವುದರಿಂದ ಎಲ್ಲರೂ ಜಾಗೃತರಾಗಿ, ಹೋರಾಟ ಮಾಡಬೇಕಾಗಿದೆ ಎಂದರು.

ಹತ್ತು ವರ್ಷಗಳ ಕಾಲ ಮಹಿಳಾ ಮೀಸಲಾತಿಯನ್ನು ನೀಡದವರು ಈಗ ಸರ್ಕಾರ ಮುಗಿಯುವ ವೇಳೆಗೆ ಮುಂದಿನ ಚುನಾವಣೆಗೆ ಮೀಸಲಾತಿ ಪ್ರಕಟ ಮಾಡುತ್ತಾರೆ. ಇವರು ಮಹಿಳೆಗೆ ಮೀಸಲಾತಿ ನೀಡುವ ನಿಜವಾದ ಕಾಳಜಿ ಇದ್ದವರಾ ಎಂದು ಪ್ರಶ್ನೆ ಮಾಡಿದರು.

ಮಹಿಳೆಯರ ವೋಟು ಪಡೆಯಬೇಕೆಂದು ಹೀಗೆಲ್ಲ ಮಾಡಿದ್ದಾರೆ. ಇದೆಲ್ಲವೂ ಪ್ರಸಕ್ತ ಚುನಾವಣೆಯ ಫಲಿತಾಂಶದಲ್ಲಿ ಗೊತ್ತಾಗುತ್ತದೆ. ಈಗಿನ ಭಾರತ ಸರ್ಕಾರವು ದೇಶದ ವಿಮಾನ ನಿಲ್ದಾಣಗಳು, ಬಂದರುಗಳನ್ನು, ಜೀವ ವಿಮಾ ನಿಗಮಗಳು ಸೇರಿದಂತೆ ಸಾರ್ವಜನಿಕ ವಲಯದ ಉದ್ಯಮಗಳನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು, ಇದಕ್ಕೆ ತುರ್ತಾಗಿ ಬ್ರೇಕ್ ಹಾಕಬೇಕಾಗಿದೆ ಎಂದರು.

ಎಲ್ಲ ಧರ್ಮಗಳಿಗೂ ಸಮಾನ ಹಕ್ಕು, ಅವಕಾಶಗಳಿವೆ ಎಂದು ಸುಪ್ರೀಂ ಕೋರ್ಟು ಈ ದಿಸೆಯಲ್ಲಿ ಹಲವಾರು ತೀರ್ಪುಗಳನ್ನು ನೀಡಿದೆ. ಚುನಾವಣಾ ಬಾಂಡ್ ಕುರಿತು ಸುಪ್ರೀಂ ಕೋರ್ಟ್ ಹೇಳಿದ್ದೇನು ಎಂದು ಪ್ರಶ್ನೆ ಮಾಡಿದ ಅವರು, ಕಾರ್ಪೋರೇಟ್ ವಲಯದಿಂದ ರಾಜಕೀಯ ಪಕ್ಷಗಳಿಗೆ ಹಣ ನೀಡುವುದು ಭ್ರಷ್ಟ ವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದರು.

ವಿಶೇಷ ಉದ್ಘಾಟನೆ:

ಸಮಾಜದ ವಿವಿಧ ಅಲೆಮಾರಿ ಸಮುದಾಯಗಳಿಗೆ ಸೇರಿದ ಜನಸಾಮಾನ್ಯರಾದ ಬಸಮ್ಮ, ಜಂಬವ್ವ, ದುರ್ಗವ್ವ, ಶೋಭಾ ಮಠ , ಫಕೀರಜ್ಜ ಮತ್ತು ಮಕ್ಕಳು ಸಂವಿಧಾನದ ಪ್ರಸ್ತಾವನೆಯನ್ನು ಅತಿಥಿಗಳಿಗೆ ಸಲ್ಲಿಸಿ, ರಮೇಶ ಗಬ್ಬೂರ ನೇತೃತ್ವದಲ್ಲಿ ಎಲ್ಲರೂ ಸಂವಿಧಾನ ರಕ್ಷಣೆಯ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಮೇ ಸಾಹಿತ್ಯ ಸಮ್ಮೇಳಕ್ಕೆ ಚಾಲನೆ ನೀಡಲಾಯಿತು.

ಬಸವರಾಜ ಹೂಗಾರ ಪ್ರಾಸ್ತಾವಿಕ ಮಾತನಾಡಿದರು. ಜೆ. ಭಾರದ್ವಾಜ, ಕೆ. ವೆಂಕಟರಾಜು, ಮಹ್ಮದ್ ಬೇಗಂ, ಬಸವರಾಜ ಸೂಳಿಬಾವಿ, ಪ್ರೊ‌. ಅಲ್ಲಮಪ್ರಭು ಬೆಟ್ಟದೂರ, ಟಿ. ರತ್ನಾಕರ, ಎ.ವಿ. ಕಣವಿ ಉಪಸ್ಥಿತರಿದ್ದರು.

ಡಿ.ಎಂ. ಬಡಿಗೇರ ಸ್ವಾಗತಿಸಿ, ಸಂಗಮೇಶ ಮೆಣಸಿನಕಾಯಿ, ಅಖಿಲಾ ವಿದ್ಯಾಸಂದ್ರ ನಿರೂಪಿಸಿದರು.

ಆರ್‌ಸಿಎಫ್ ಕಲಾತಂಡ ಸಿಂಧನೂರು, ದಲಿತ ಕಲಾ ಮಂಡಳಿ, ಇಪ್ಟಾ ಕರ್ನಾಟಕ, ಅರುಣೋದಯ ಕಲಾ ತಂಡ ಕೊತಬಾಳ, ಶರಣ ಕಲಾಬಳಗ ಗಂಗಾವತಿ, ಸಾಂಬಯ್ಯ ಹಿರೇಮಠ ಮತ್ತು ತಂಡ ಹರ್ಲಾಪುರ-ಕುಂದಗೋಳ, ಡಿಂಗ್ರಿ ಭರತ್, ಮರಿಯಮ್ಮ ಚೂಡಿ, ಗೌರಿ ಗೋನಾಳ, ನಾದ ಮಣಿನಾಲ್ಕೂರು ಮತ್ತಿತರ ಕಲಾವಿದರಿಂದ ಹೋರಾಟದ ಹಾಡುಗಳು, ಜನಪರ ಗೀತೆಗಳು ಮೊಳಗಿದವು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ