ಹೈಟೆಕ್ ಮಾಡುವ ಕನಸಿಗೆ ಕೈಜೋಡಿಸಿದ ದಾನಿಗಳು । ಕ್ಯೂಆರ್‌ಕೋಡ್ ಮೂಲಕ ದಾನ ಸಂಗ್ರಹ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಒಂದೂವರೆ ಶತಮಾನದ ಶಾಲೆಗೆ ಈಗ ಅಭಿವೃದ್ಧಿಯ ಸ್ಪರ್ಶ ಸಿಗುತ್ತಿದೆ. ಶಾಲೆ ಹೈಟೆಕ್ ಮಾಡುವ ಕನಸಿಗೆ ದಾನಿಗಳು ಕೈ ಜೋಡಿಸಿದ್ದು, ಕ್ಯೂಆರ್‌ಕೋಡ್ ಮೂಲಕ ದಾನ ಪಡೆಯುತ್ತಿರುವುದು ರಾಜ್ಯದಲ್ಲಿಯೇ ಇದು ಮೊದಲು ಮತ್ತು ವಿಶೇಷವಾಗಿದೆ.ಇಲ್ಲಿನ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಶಾಲೆ ನೂರೆಂಬತ್ತು ವರ್ಷಗಳ ಇತಿಹಾಸ ಹೊಂದಿದೆ. ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದ ಲಿಂ. ಸದಾಶಿವ ಮಹಾಸ್ವಾಮಿಗಳನ್ನು ಸರ್ಕಾರದ ಕಚೇರಿಗಳಿಗೆ ಮಠದ ಜಾಗೆ ಬಿಟ್ಟು ಕೊಡಲು ಕೇಳಿದಾಗ ಅದರಲ್ಲಿ ೨.೩೦ ಎಕರೆ ಶಾಲೆಗೆ ಕೊಡುವುದಾದರೆ ಜಾಗೆ ಕೊಡುವುದಾಗಿ ಹೇಳಿ ಈ ಜಾಗೆ ನೀಡಿದ್ದರು. ಹಾನಗಲ್ಲಿನ ಬಹುತೇಕ ಹಿರಿಯರು, ಗಣ್ಯರು ಓದಿದ ಶಾಲೆ ಇದು. ದಿ. ಸಿ.ಎಂ. ಉದಾಸಿ, ಸಂಸದ ಶಿವಕುಮಾರ ಉದಾಸಿ ಓದಿದ ಶಾಲೆ ಇದು. ಇಲ್ಲಿ ಓದಿದವರು ಹೊರ ದೇಶಗಳಲ್ಲಿ ದೊಡ್ಡ ಹುದ್ದೆ ಉದ್ಯೋಗದಲ್ಲಿದ್ದಾರೆ. ಹಿರಿಯರು ಜನ್ಮ ದಾಖಲೆಗಾಗಿ ಈಗಲೂ ಈ ಶಾಲೆಗೆ ಬರುತ್ತಾರೆ.
ಕ್ಯೂಆರ್‌ಕೋಡ್: ಈ ಶಾಲೆಯಲ್ಲಿ ಓದಿದ ಹೃದಯವಂತರನ್ನು ಸಂಪರ್ಕಿಸಲು ಶಾಲೆಯ ಕ್ಯೂಆರ್ ಕೋಡ್ ಬ್ಯಾಂಕಿನಿಂದ ಪಡೆದರು. ಇದು ರಾಜ್ಯದಲ್ಲಿಯೇ ಮೊದಲು. ಈ ಮೂಲಕ ದಾನಿಗಳಿಗೆ ಮೊರೆ ಹೋದ ಪರಿಣಾಮವಾಗಿ ನಿರೀಕ್ಷೆಗಿಂತ ಹೆಚ್ಚು ದಾನಿಗಳು ಧನಸಹಾಯಕ್ಕೆ ಮುಂದಾಗಿದ್ದಾರೆ. ಅಭಿವೃದ್ಧಿ ಮಾಡಬೇಕೆಂಬ ಕನಸು ಕಂಡವರಿಗೆ ಈಗ ಹೊಸ ನಿರೀಕ್ಷೆ ಮೂಡಿದೆ.
ಈಗ ಎಲ್ಲ ಕೊಠಡಿಗಳನ್ನು ಸುಸಜ್ಜಿತವಾಗಿರಿಸಲು ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಭದ್ರತೆಗೂ ಆದ್ಯತೆ ನೀಡಲಾಗಿದೆ. ಎಲ್ಲ ಕೊಠಡಿಗಳಿಗೆ ವಿದ್ಯುತ್ ಸಂಪರ್ಕ, ಸಿಸಿ ಕ್ಯಾಮರಾ, ಎಲ್ಲ ಕೊಠಡಿಗಳಿಗೆ ಗ್ರೀನ್ ಬೋರ್ಡ್, ಫ್ಯಾನ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ವಿಜ್ಞಾನ, ಗಣಿತ ಬೋಧನಾ ಸಾಮಗ್ರಿ ಖರೀದಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಆವರಣ ಗೋಡೆ ಎತ್ತರಗೊಳಿಸಲಾಗುತ್ತಿದೆ.
ಸದ್ಯ ಶಾಲೆಯಲ್ಲಿ ೪೮೧ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕರ ಕೊರತೆ ಇದೆ. ಈಗ ಇಂಗ್ಲಿಷ್ ಮಾಧ್ಯಮವೂ ಇದ್ದು ಕನ್ನಡ ಶಿಕ್ಷಕರಿಗೆ ತರಬೇತಿ ನೀಡಿ ಇಂಗ್ಲಿಷ್ ಮಾಧ್ಯಮ ನಡೆಸಲಾಗುತ್ತಿದೆ. ಇದರಿಂದ ಕನ್ನಡ ಮಕ್ಕಳಿಗೆ ಶಿಕ್ಷಕರ ಕೊರತೆ ಇದೆ. ತಾಲೂಕಿನ ಶಾಸಕರ ಮಾದರಿ ಶಾಲೆ ಮಾದರಿಯಾಗಲು ಸರ್ಕಾರ ಕೃಪೆ ತೋರಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.