5 ಹೋಬಳಿ, ೪೧ ಗ್ರಾ.ಪಂ. ಜನರಿಗೆ ಸೊರಬದ ಉಪ ಅಂಚೆ ಕಚೇರಿಯಲ್ಲಿ ಮಾತ್ರ ಪರಿಷ್ಕರಣೆ । ಜನರ ಆಕ್ರೋಶ
ಕನ್ನಡಪ್ರಭ ವಾರ್ತೆ ಸೊರಬ
ಶುಕ್ರವಾರ ಬಂತೆಂದರೆ ಆಧಾರ್ ಕಾರ್ಡ್ ತಿದ್ದುಪಡಿಗೆ ಪಟ್ಟಣದ ಉಪ ಅಂಚೆ ಕಚೇರಿಯಲ್ಲಿ ಜನ ಸಾಗರ ಸಾಲುಗಟ್ಟಿ ನಿಂತಿರುತ್ತದೆ. ಆದರೆ ಅಂದು ಬರುವ ಎಲ್ಲರಿಗೂ ಆಧಾರ್ ತಿದ್ದುಪಡಿ ಭಾಗ್ಯ ದೊರೆಯುತ್ತದೆ ಎಂದಿಲ್ಲ. ಹಾಗೊಂದು ವೇಳೆ ಸಿಗದಿದ್ದರೆ ಮುಂದಿನ ಶುಕ್ರವಾರದವೆಗೆ ಕಾಯಬೇಕು. ಇದು ಗ್ರಾಮಸ್ಥರು ಆಕ್ರೋಶಕ್ಕೆ ಕಾರಣವಾಗಿದೆ.ಕೆಲವರ ಆಧಾರ್ ಕಾರ್ಡ್‌ನಲ್ಲಿ ಹೆಸರು ತಪ್ಪಾಗಿರುವುದು, ಮೊಬೈಲ್ ಸಂಖ್ಯೆ ಬದಲಾವಣೆ, ಹುಟ್ಟಿದ ದಿನಾಂಕ ಹಾಗೂ ಊರಿನ ಹೆಸರು ತಪ್ಪಾಗಿ ಮುದ್ರಿತವಾಗಿರುವುದು, ಗಂಡ ಅಥವಾ ತಂದೆಯ ಹೆಸರಿನಲ್ಲಿ ಇನಿಷಿಯಲ್ ಇಲ್ಲದಿರುವುದು, ಹೀಗೆ ಹಲವು ಸಮಸ್ಯೆಗಳನ್ನು ಹೊತ್ತು ಸರಿಪಡಿಸಲು ಬರುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಪ್ರತೀ ಶುಕ್ರವಾರ ತಾಲೂಕು ಕಚೇರಿಯಿಂದ ಅವಕಾಶ ಕಲ್ಪಿಸಲಾಗಿದೆ. ಹಲವು ಪ್ರಮಾದಗಳಿರುವ ತಾಲೂಕಿನ ಲಕ್ಷಾಂತರ ಆಧಾರ್ ಕಾರ್ಡ್ ತಿದ್ದುಪಡಿಗೆ ಕೇವಲ ಒಂದು ಕೇಂದ್ರ ಮಾತ್ರ ಇದ್ದು, ವಾರದ ಒಂದು ದಿನ ಅವಕಾಶ ಕಲ್ಪಿಸಿರುವ ಕ್ರಮ ಯಾವುದೇ ರೀತಿಯಿಂದಲೂ ಸರಿಯಲ್ಲ ಎನ್ನುವುದು ಸಾರ್ವಜನಿಕರ ವಾದವಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಲ್ಲುವ ಎಲ್ಲರಿಗೂ ಅದೇ ದಿನ ಆಧಾರ್ ತಿದ್ದುಪಡಿ ಭಾಗ್ಯ ಲಭಿಸುವುದಿಲ್ಲ. ಒಂದು ದಿನಕ್ಕೆ ೫೦ ಜನರು ಮಾತ್ರ ತಿದ್ದುಪಡಿಯ ಅರ್ಹತೆಯನ್ನು ಪಡೆಯುತ್ತಾರೆ. ಉಳಿದವರು ನಿರಾಶೆಯ ಮಡುವಿನಲ್ಲಿ ಗ್ರಾಮಗಳಿಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಸರ್ವರ್ ಡೌನ್, ನೆಟ್‌ವರ್ಕ್‌ನಲ್ಲಿ ಅಡಚಣೆಯಾಗಿದೆ ಎನ್ನುವ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ತಾಲೂಕಿನಲ್ಲಿ ಲಕ್ಷಾಂತರ ಜನರ ಆಧಾರ ತಿದ್ದುಪಡಿಗೆ ಕೇವಲ ಒಂದೇ ಒಂದು ಕೇಂದ್ರವನ್ನು ನಿಗದಿಪಡಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಾರಣವಾಗಿದೆ.
ಈ ಹಿಂದೆ ತಾಲೂಕು ಕಚೇರಿಯಿಂದ ಹೋಬಳಿವಾರು ಗ್ರಾಮ-೧, ಸೊರಬ ಪಟ್ಟಣದಲ್ಲಿ ಕರ್ನಾಟಕ-೧ ಕೇಂದ್ರವನ್ನು ಆಧಾರ್ ಮತ್ತು ಪಡಿತರ ಚೀಟಿ ತಿದ್ದುಪಡಿಗಾಗಿ ಸ್ಥಾಪಿಸಲಾಗಿತ್ತು. ಇದರಿಂದ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಸಮಯ ಮತ್ತು ಖರ್ಚುವೆಚ್ಚ ಎಲ್ಲವೂ ಉಳಿತಾಯವಾಗಿ ಅನುಕೂಲವಾಗಿತ್ತು. ಆದರೆ ಗ್ರಾಮ-೧ ಕೇಂದ್ರದಲ್ಲಿ ಆಧಾರ್ ತಿದ್ದುಪಡಿಯ ಅವಕಾಶವನ್ನು ರದ್ದುಪಡಿಸಿ ಪಟ್ಟಣದ ಉಪ ಅಂಚೆ ಕಚೇರಿಯಲ್ಲಿ ಕಲ್ಪಿಸಲಾಗಿದೆ. ಇದರಿಂದ ರೈತರು, ವಿದ್ಯಾರ್ಥಿಗಳು, ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಹೋಬಳಿಮಟ್ಟದಲ್ಲಿ ಆಧಾರ್ ತಿದ್ದುಪಡಿ ಕೇಂದ್ರವನ್ನು ಸ್ಥಾಪಿಸುವಂತೆ ಜನ ಆಗ್ರಹಿಸಿದ್ದಾರೆ.
ಕೋಟ್...
- ಮಹೇಶ್ ಸಂಪಗೋಡು, ಕೃಷಿಕ
೦೯ಕೆಪಿಸೊರಬ-೦೧ :