ಹಡಿಲು ಜಮೀನಿನಲ್ಲಿ ಆಶೀರ್ವಾದ್ ಸಂಜೀವಿನಿ ಒಕ್ಕೂಟ ನೇಜಿ ನಾಟಿ

KannadaprabhaNewsNetwork |  
Published : Aug 05, 2025, 11:49 PM IST
ಹಡಿಲು ಬಿಟ್ಟ ಜಮೀನಿನಲ್ಲಿ  ನೇಜಿ ನಾಟಿ - ಸ್ವತಃ ಗದ್ದೆಗಿಳಿದು ನೇಜಿ ನಾಟಿ ಮಾಡುತ್ತಿರುವ  ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ | Kannada Prabha

ಸಾರಾಂಶ

ಗೋಳ್ತಮಜಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಬಲ್ಕಟ್ಟ ಎಂಬಲ್ಲಿ ಆಶೀರ್ವಾದ್‌ ಸಂಜೀವಿನೀ ಒಕ್ಕೂಟದ ಸದಸ್ಯರು ತಾವೇ ನೇಜಿ ನಾಟಿ ನೆಟ್ಟಿದ್ದು, ಇವರಿಗೆ ಸಂಘಟನೆಗಳು, ಸರ್ಕಾರಿ ಅಧಿಕಾರಿಗಳು ಸಾಥ್ ನೀಡಿದ್ದಾರೆ.

ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಕೃಷಿ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಸಾಥ್

ಕನ್ನಡಪ್ರಭ ವಾರ್ತೆ ಬಂಟ್ವಾಳ

ಹಡಿಲು ಬಿಟ್ಟ ಜಮೀನಿನಲ್ಲಿ ನಾವು ನಾಟಿ ಮಾಡುತ್ತೇವೆ ಎಂದು ಗದ್ದೆ ಯಜಮಾನನಿಗೆ ಧೈರ್ಯ ತುಂಬಿ ನೇಜಿ ನಾಟಿ ಮಾಡಿಕೊಟ್ಟು ಮಾದರಿಯಾಗಿದ್ದಾರೆ ಗೋಳ್ತಮಜಲು ಗ್ರಾ.ಪಂ.ಮಟ್ಟದ ಆಶೀರ್ವಾದ್‌ ಸಂಜೀವಿನಿ ಒಕ್ಕೂಟದ ಸದಸ್ಯರು.ಗೋಳ್ತಮಜಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಬಲ್ಕಟ್ಟ ಎಂಬಲ್ಲಿ ಕೊಗ್ಗು ಪೂಜಾರಿ ಮಕ್ಕಳು ಪ್ರತೀ ವರ್ಷ ಭತ್ತ ಬೇಸಾಯ ಮಾಡುತ್ತಿದ್ದರು. ಇವರ ಪೈಕಿ ಹರೀಶ್ ಬಲ್ಕಟ್ಟ ಎಂಬವರಿಗೆ ಸೇರಿದ ಜಮೀನಿನಲ್ಲಿ ಈ ಬಾರಿ ಖಾಸಗಿ ಕಾರಣಕ್ಕೆ ಗದ್ದೆ ಬೇಸಾಯ ಮಾಡಿರಲಿಲ್ಲ. ಈ ವಿಚಾರ ತಿಳಿದ ಆಶೀರ್ವಾದ್‌ ಸಂಜೀವಿನೀ ಒಕ್ಕೂಟದ ಸದಸ್ಯರು, ಹಾಗಾದರೆ ಈ ಬಾರಿ ನಾವೇ ನೇಜಿ ನಾಟಿ ಮಾಡುತ್ತೇವೆ ಎಂದು ಭರವಸೆ ನೀಡಿದರಲ್ಲದೆ, ಮಂಗಳವಾರ ೪೦ ಸೆಂಟ್ಸ್‌ ವಿಸ್ತೀರ್ಣದ ಗದ್ದೆಯಲ್ಲಿ ನೇಜಿ ನಾಟಿ ಮಾಡಿ ಗಮನ ಸೆಳೆದಿದ್ದಾರೆ.ದೀನ್‌ ದಯಾಳ್‌ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾಪಂಚಾಯಿತಿ, ಬಂಟ್ವಾಳ ತಾಲೂಕು ಪಂಚಾಯಿತಿ, ಕೃಷಿ ಇಲಾಖೆ ಹಾಗೂ ಗೋಳ್ತಮಜಲು ಗ್ರಾಮಪಂಚಾಯಿತಿ ಆಶ್ರಯದಲ್ಲಿ ಆಶೀರ್ವಾದ್‌ ಸಂಜೀವಿನಿ ಒಕ್ಕೂಟದ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ನೆರವೇರಿತು.ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್‌ ಕುಮಾರ್‌ ಕಲಶಕ್ಕೆ ಅಕ್ಕಿ ಹಾಕುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೇವಲ ಕೈಗಾರಿಕೆಗಳಿಂದ ಜೀವನ ಸಾಧ್ಯವಿಲ್ಲ, ಕೃಷಿಯೇ ಮಾನವನಿಗೆ ಜೀವನಾಧಾರ ಎಂದರು. ಕೃಷಿ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಕುಮುದಾ ತೆಂಗಿನ ಹೂ ಅರಳಿಸಿ ಮಾತನಾಡಿ, ಸಂಜೀವಿನಿ ಒಕ್ಕೂಟದ ಮೂಲಕ ಕೃಷಿ ಸಖಿಯರ ನೇತೃತ್ವದಲ್ಲಿ ಉತ್ಸಾಹದಿಂದ ಈ ಕೃಷಿ ಚಟುವಟಿಕೆ ನಡೆಯುತ್ತಿರುವುದು ಎಲ್ಲರಿಗೂ ಮಾದರಿ ಎಂದರು. ಗೋಳ್ತಮಜಲು ಗ್ರಾಮಪಂಚಾಯಿತಿ ಅಧ್ಯಕ್ಷೆ ಪ್ರೇಮ ಅಧ್ಯಕ್ಷತೆ ವಹಿಸಿದ್ದರು.ಬಳಿಕ ಗದ್ದೆಗಿಳಿದ ತಾ.ಪಂ.ಅಧಿಕಾರಿಗಳು,ಕೃಷಿ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ.ಅಧ್ಯಕ್ಷರು, ಪಿಡಿಓ, ಕೃಷಿ ಸಖಿಯರು, ಪಶು ಸಖಿಯರು ಸಹಿತ ಒಕ್ಕೂಟದ ಸದಸ್ಯರು ಮಧ್ಯಾಹ್ನದ ವರೆಗೆ ನೇಜಿ ನಾಟಿ ಮಾಡಿ, ಜೀವನೋತ್ಸಾಹ ಹೇಗಿರಬೇಕು ಎಂದು ತೋರಿಸಿಕೊಟ್ಟರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಚಿನ್‌ ಕುಮಾರ್‌ ಅವರು, ಗದ್ದೆಗಳಿದು ನಾಟಿ ಮಾಡಿರುವುದು ನನ್ನ ಜೀವನದ ಮೊದಲ ಅನುಭವ, ತುಂಬಾ ಖುಷಿಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು. ಗದ್ದೆನಾಟಿಯ ಬಗ್ಗೆ ಅರಿಯದ ಹಲವರು ಮಹಿಳೆಯರೂ ಕೆಸರಿಗೆ ಇಳಿದು ನಾಟಿ ಮಾಡಿ ಸಂಭ್ರಮಪಟ್ಟರು. ಪ್ರಗತಿಪರ ಕೃಷಿಕರಾದ ಕೊಗ್ಗುಪೂಜಾರಿ, ಕರುಣಾಕರ ಬಲ್ಕಟ್ಟ, ನಾರಾಯಣ ಬಲ್ಕಟ್ಟ, ಹರೀಶ್‌ ಬಲ್ಕಟ್ಟ, ಲಕ್ಷ್ಮಣ ಬಲ್ಕಟ್ಟ ಮಾರ್ಗದರ್ಶನ ನೀಡಿದರು.ಆಶೀರ್ವಾದ್‌ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಉಷಾ, ಕೃಷಿ ಅಧಿಕಾರಿ ನಂದನ್‌ ಶೆಣೈ, ತಾ.ಪಂ.ಸಹಾಯಕ ನಿರ್ದೇಶಕ ವಿಜಯ ಶಂಕರ ಆಳ್ವ, ಸಂಜೀವಿನಿ ಅಭಿಯಾನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಸುಧಾ, ಪ್ರದೀಪ್‌ ಕಾಮತ್‌, ಕು.ಸಾಂಘವಿ, ದೀಕ್ಷಿತಾ, ಪ್ರೀತಿಕಾ, ಹರ್ಷಿತಾ‌, ಎಂಕೆಪಿಸಿ ಸಿಬ್ಬಂದಿಗಳಾದ ನವ್ಯ ಹೊಳ್ಳ, ಗುಣವತಿ ಉಪಸ್ಥಿತರಿದ್ದರು. ಗಾಯತ್ರಿ ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕಿ ಕುಸುಮ ಸ್ವಾಗತಿಸಿದರು. ಎಂಬಿಕೆ ಭವಾನಿ ವಂದಿಸಿದರು. ಕೃಷಿ ಸಖಿ ಪುಷ್ಪಾವತಿ ನಿರೂಪಿಸಿದರು.

PREV

Recommended Stories

ಲಾಕ್‌ಡೌನ್‌ನಿಂದಾಗಿ ಪಂಚರ್ ಅಂಗಡಿ ಮುಚ್ಚಿ ಬೆಲ್ಲದ ಉದ್ಯಮಿಯಾದರು
ಇನ್ನೂ 2 ದಿನ ಮಳೆಯ ಅಬ್ಬರ: ಭಾನುವಾರದ ಬಳಿಕ ಇಳಿಮುಖ