ಕನ್ನಡಪ್ರಭ ವಾರ್ತೆ ದಾವಣಗೆರೆ ಹರಿಹರ ಪಂಚಮಸಾಲಿ ಪೀಠದಲ್ಲಿ ಇತ್ತೀಚೆಗೆ ನಡೆದ ಲೆಕ್ಕ ಕೊಡಿ ಚಳವಳಿ, ಲೆಕ್ಕ ಕೊಡುವ ಸಮಾವೇಶ ಕಾರ್ಯಕ್ರಮದ ಚಿತ್ರೀಕರಣ ವೇಳೆ ಮಾಧ್ಯಮ ಪ್ರತಿನಿಧಿಗಳ ಮೇಲೆ ದುರ್ವರ್ತನೆ ತೋರಿದ್ದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಪತ್ರಕರ್ತರಿಗೆ ಕ್ಷಮೆಯಾಚಿಸುವ ಮೂಲಕ ಇಡೀ ಪ್ರಕರಣ ಸುಖಾಂತ್ಯಗೊಂಡಿದೆ.
ಬುಧವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಟಿ.ಶೇಖರ್ ಅವರಿಗೆ ಪತ್ರಕರ್ತರು ಮನವಿ ಸಲ್ಲಿಸಲು ತೆರಳಿದ ಸಂದರ್ಭದಲ್ಲಿ, ಪರಮೇಶ್ವರ ಹೆಗಡೆ ಅವರು ದಿನೇಶ್ ಅವರಿಗೆ ಹಸ್ತಲಾಘವ ನೀಡಿ, ತಮ್ಮ ನಡವಳಿಕೆಗೆ ಪಶ್ಚಾತ್ತಾಪ ವ್ಯಕ್ತಪಡಿಸಿ ಕ್ಷಮೆ ಯಾಚಿಸಿದರು. ಅಧಿಕಾರಿ ಮತ್ತು ಮಾಧ್ಯಮಗಳ ನಡುವಿನ ಸೌಹಾರ್ದತೆಯ ಹಿತದೃಷ್ಟಿಯಿಂದ ಪತ್ರಕರ್ತರು ಈ ವಿವಾದವನ್ನು ಇಲ್ಲಿಗೆ ಕೈಬಿಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ಹಿರಿಯ ಪತ್ರಕರ್ತರಾದ ಕೆ. ಚಂದ್ರಣ್ಣ, ರಮೇಶ್ ಜಹಾಗೀರದಾರ್, ಟಿ.ಎಸ್. ತಿಪ್ಪೇಸ್ವಾಮಿ, ಸುರೇಶ್ ಕುಣಿಬೆಳಕೆರೆ, ರುದ್ರಮ್ಮ, ವಿಜಯಕುಮಾರ್, ರಾಜೇಶ್, ರಮೇಶ್, ದಿನೇಶ್, ಸಿಕಂದರ್, ಅಣ್ಣಪ್ಪ ಕುಂದುವಾಡ, ಮಹೇಶ್, ಅಣ್ಣೇಶ್ ಹಾಗೂ ಜಯಣ್ಣ ಉಪಸ್ಥಿತರಿದ್ದರು.- - -
ಮಾಧ್ಯಮ ಪ್ರತಿನಿಧಿಗಳ ಮೇಲೆ ದುರ್ವರ್ತನೆ ತೋರಿದ್ದ ಎಎಸ್‌ಪಿ ಪರಮೇಶ್ವರ ಹೆಗಡೆ ಅವರ ನಡೆ ಖಂಡಿಸಿ ದಾವಣಗೆರೆಯಲ್ಲಿ ಎಸ್‌ಪಿ ಎಚ್.ಟಿ.ಶೇಖರ್ ಅವರಿಗೆ ಜಿಲ್ಲಾ ವರದಿಗಾರರ ಕೂಟದಿಂದ ಮನವಿ ಸಲ್ಲಿಸಿದರು.