ಕನ್ನಡಪ್ರಭ ವಾರ್ತೆ ಮಂಡ್ಯ
ಪರಿಶ್ರಮವಿಲ್ಲದೆ ಸಾಧನೆ ಮಾಡಲು ಸಾಧ್ಯವಿಲ್ಲ. ಛಲ, ಧೈರ್ಯ, ಆತ್ಮವಿಶ್ವಾಸ ಹಾಗೂ ನಿರ್ದಿಷ್ಟ ಗುರಿಯನ್ನಿಟ್ಟುಕೊಂಡಾಗ ಮಾತ್ರ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.ನಗರದ ಹೊರವಲಯದಲ್ಲಿರುವ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ೨೦೨೫- ೨೬ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳ ಕಲಿಕೆ ಪಠ್ಯ ವಿಷಯಗಳಿಗಷ್ಟೇ ಸೀಮಿತವಾಗಬಾರದು. ಹೆಚ್ಚು ಅಂಕ ಗಳಿಸುವುದನ್ನೇ ಗುರಿಯಾಗಿಸಿಕೊಳ್ಳಬಾರದು. ಸಾಮಾನ್ಯ ಜ್ಞಾನವನ್ನೂ ಬೆಳೆಸಿಕೊಂಡು ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಜ್ಞಾನವನ್ನು ವಿಕಾಸಗೊಳಿಸಿಕೊಳ್ಳಬೇಕು. ಜಾಗತಿಕ ಯುಗದಲ್ಲಿ ಅವಕಾಶಗಳ ಬಾಗಿಲುಗಳು ಮುಕ್ತವಾಗಿ ತೆರೆದುಕೊಂಡಿವೆ. ಅವುಗಳನ್ನು ತಮ್ಮದಾಗಿಸಿಕೊಳ್ಳುವ ಕೌಶಲ್ಯವನ್ನು ಸಿದ್ಧಿಸಿಕೊಳ್ಳಬೇಕು. ಉತ್ತಮ ವ್ಯಾಸಂಗದೊಂದಿಗೆ ಉನ್ನತ ಹುದ್ದೆಗಳಿಗೇರಬೇಕು ಎಂದರು.ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ಅವಿರತ ಪ್ರಯತ್ನವಿರಬೇಕು. ಒಂದೇ ಪ್ರಯತ್ನಕ್ಕೆ ಯಾವುದೂ ಸಿಗುವುದಿಲ್ಲ ಮತ್ತು ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಒಂದು ಬಾಗಿಲು ಮುಚ್ಚಿದರೇನು, ಸಾವಿರಾರು ಬಾಗಿಲುಗಳು ಇರುತ್ತವೆ. ಮುಕ್ತವಾಗಿ ಯೋಚಿಸಿ ಮುಂದೆ ನಡೆದರೆ ಗುರಿ ಮುಟ್ಟಬಹುದು. ಆದ್ದರಿಂದ ವಿದ್ಯಾರ್ಥಿಗಳು ತಮ್ಮೆದುರು ದೊಡ್ಡಗುರಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.
ವಿದ್ಯಾರ್ಥಿನಿಯರು ದಿಟ್ಟ ಮಹಿಳೆಯಾಗಿ ದೃಢವಾಗಿ ಹೇಗೆ ನಿಂತುಕೊಳ್ಳಬೇಕೆಂದು ಯೋಚಿಸಿದರೆ ಒಬ್ಬ ಸದೃಢ ಮಹಿಳೆಯಾಗಿ ಬೆಳೆಯಬಹುದು. ಮುಟ್ಟಿನ ಬಗ್ಗೆ ಕೀಳರಿಮೆ ಬೇಡ. ಈ ಹಿನ್ನೆಲೆಯಲ್ಲಿ ‘ಮುಟ್ಟಿನ ಕಪ್’ ನೀಡುವ ಮೂಲಕ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚಲುವಯ್ಯ ಮಾತನಾಡಿ, ನಾನು ಕಂಡಂತೆ ಮಂಡ್ಯ ಜಿಲ್ಲೆ ಶೈಕ್ಷಣಿಕವಾಗಿ ಬಹಳ ಹಿಂದುಳಿದಿತ್ತು. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ದೂರದ ಬೆಂಗಳೂರು, ಮಂಗಳೂರು, ಮೂಡಬಿದರೆ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುತ್ತಿದ್ದರು. ಈ ಹಿಂದೆ ೧೩ ರಿಂದ ೧೪ ಸಾವಿರ ಮಕ್ಕಳು ಮಾತ್ರ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಒಳ್ಳೊಳ್ಳೆಯ ಶಿಕ್ಷಣ ಸಂಸ್ಥೆಗಳು ಬಂದಿರುವುದರಿಂದ ಪ್ರಸ್ತುತ ೨೫ ಸಾವಿರ ಮಕ್ಕಳು ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಸಾಲಿನಲ್ಲಿ ಮಂಡ್ಯ ಜಿಲ್ಲೆ ದ್ವಿತೀಯ ಪಿಯುಸಿಯಲ್ಲಿ ೧೪ನೇ ಸ್ಥಾನ ಪಡೆದಿದ್ದು, ಈ ವರ್ಷ ೧೦ನೇ ಸ್ಥಾನದೊಳಗೆ ಬರುವಂತೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕಳೆದ ಸಾಲಿನ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೇ ೮ನೇ ಸ್ಥಾನ ಪಡೆದ ಎಸ್.ಡಿ. ಹಿಮಾನಿ, ೯ನೇ ಸ್ಥಾನ ಪಡೆದ ಜೆ. ದೀಕ್ಷಾ, ೧೦ನೇ ಸ್ಥಾನ ಪಡೆದ ಎಂ.ಪಿ. ಪ್ರೀತಮ್ ಹಾಗೂ ಆರ್ಕಿಟೆಕ್ಚರ್ ಆಫ್ ಸಿಇಟಿಯಲ್ಲಿ ೨೯ನೇ ರ್‍ಯಾಂಕ್ ಪಡೆದ ಡಿ.ಸಿ. ದೀಪ್ತಿ ಅವರನ್ನು ಗಣ್ಯರು ಸನ್ಮಾನಿಸಿದರು.ವೇದಿಕೆಯಲ್ಲಿ ಎಸ್‌ಬಿಇಟಿ ಅಧ್ಯಕ್ಷ ಡಾ. ಬಿ.ಶಿವಲಿಂಗಯ್ಯ, ಸಂಸ್ಥೆಯ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಶೈಕ್ಷಣಿಕ ಪಾಲುದಾರರಾದ ಕೆ.ಚೇತನ್ ಕೃಷ್ಣ, ಎಂ.ಆರ್.ಮಂಜುನಾಥ್, ಪ್ರಾಂಶುಪಾಲ ಶ್ರೀನಿವಾಸ್, ಉಪನ್ಯಾಸಕ ಮುಜಾವುದ್ದೀನ್ ಉಪಸ್ಥಿತರಿದ್ದರು.