ಹುಣಸಘಟ್ಟ ಶ್ರೀ ಗುರು ಹಾಲುಸ್ವಾಮಿ ಮಠದಲ್ಲಿ ಕಾರ್ತಿಕ ದಿಪೋತ್ಸವ ದರ್ಮ ಜಾಗೃತಿ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆಕ್ರಿಯಾಶೀಲ ಬದುಕು ಜೀವನದ ಶ್ರೇಯಸ್ಸಿಗೆ ಅಡಿಪಾಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ತಾಲೂಕಿನ ಹುಣಸಘಟ್ಟ ಶ್ರೀಗುರು ಹಾಲುಸ್ವಾಮಿ ಮಠದಲ್ಲಿ ನಡೆದ ಕಾರ್ತಿಕ ದೀಪೋತ್ಸವ ಹಾಗೂ ಶ್ರೀ ಗುರುಮೂರ್ತಿ ಶಿವಾಚಾರ್ಯರ 62 ನೇ ಜನ್ಮ ದಿನೋತ್ಸವ ಹಿನ್ನೆಲೆಯಲ್ಲಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.ಮಾನವ ಜೀವನ ನಿಂತ ನೀರಾಗಬಾರದು. ಸದಾ ಹರಿಯುವ ಪವಿತ್ರ ಗಂಗಾಜಲವಾಗಬೇಕು. ಕಷ್ಟದ ಜೀವನ ಶಿಸ್ತನ್ನು ಕಲಿಸುವ ಪಾಠಶಾಲೆ. ಬದುಕಿಗೆ ಭಗವಂತ ಕೊಟ್ಟ ಕೊಡುಗೆ ಅಪಾರ. ಸಾರ್ಥಕ ಬದುಕಿಗೆ ಧರ್ಮಾಚರಣೆ ಮೌಲ್ಯಗಳು ಅವಶ್ಯಕ, ಧರ್ಮದ ದಿಕ್ಸೂಚಿ ಇಲ್ಲದಿದ್ದರೆ ಜೀವನ ಬೆಳೆಯಲಾಗದು, ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳಲ್ಲಿ ಒಂದನ್ನಾದರೂ ಸಾಧಿಸದಿದ್ದಲ್ಲಿ ಜೀವನ ಸಾರ್ಥಕಗೊಳ್ಳುವುದಿಲ್ಲ ಎಂದು ಹೇಳಿದರು.
ಜಗದ್ಗುರು ಶ್ರೀರೇಣುಕಾಚಾರ್ಯರು ಮಾನವ ಜೀವನ ವಿಕಾಸಕ್ಕೆ ನಿರೂಪಿಸಿದ ಅಹಿಂಸಾ ಸತ್ಯ ಅಸ್ತೇಯ ಬ್ರಹ್ಮಚರ್ಯ, ದಯಾ, ಕ್ಷಮಾ. ದಾನ, ಪೂಜಾ, ಜಪ ಮತ್ತು ಧ್ಯಾನ ಎಂಬ ದಶವಿಧ ಸೂತ್ರಗಳ ಪರಿಪಾಲನೆ ಬಹಳಷ್ಟು ಮುಖ್ಯ. ಬೆಳಕಿಲ್ಲದ ಬಾಳಲ್ಲಿ ಕತ್ತಲು ಆವರಿಸುತ್ತದೆ. ಹೊರಗಿನ ಕತ್ತಲೆಯನ್ನು ದೀಪದಿಂದ ಕಳೆಯಬಹುದು. ಒಳಗಿನ ಅಜ್ಞಾನವೆಂಬ ಕತ್ತಲೆ ಕಳೆಯಲು ಗುರು ಮಾತ್ರ ಸಮರ್ಥ ಎಂದರು.ಶ್ರೀ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿ 62ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಶ್ರೀಗಳ ಚಲನಶೀಲ ವ್ಯಕ್ತಿತ್ವ ಮಠದ ಅಭಿವೃದ್ಧಿಗೆ ಸಹಕಾರಿ. ಹಲವು ಅಭಿವೃದ್ಧಿ ಕಾರ್ಯ ಮಾಡಿ ಭಕ್ತ ಸಂಕುಲದ ಪ್ರೀತಿ ಆಧರಕ್ಕೆ ಪಾತ್ರರಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿ ಶ್ರೀರಂಭಾಪುರಿ ಮಠದಿಂದ ಮಡಿ ಸ್ಮರಣಿಕೆ ಫಲ ಪುಷ್ಪವಿತ್ತು ಶುಭ ಹಾರೈಸಿದರು.ಎಡೆಯೂರು ಕ್ಷೇತ್ರದ ಶ್ರೀರೇಣುಕ ಶಿವಾಚಾರ್ಯ ಸ್ವಾಮಿ ಮಾತನಾಡಿ, ಜೀವನ ಮೌಲ್ಯ ಸಂರಕ್ಷಿಸಿ ಬರುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ಧಾರ್ಮಿಕ ಮೌಲ್ಯ ನಿರ್ಲಕ್ಷ್ಯ ಮಾಡುವ ಕಾರಣ ಜನ ಸಮುದಾಯದಲ್ಲಿ ಹಲವಾರು ಸಮಸ್ಯೆ ತಲೆದೋರುತ್ತಿವೆ. ಗುರುಮೂರ್ತಿ ಶ್ರೀಗಳು ಶಿವಾಚಾರ್ಯ ರಿಗೆ ಭಗವಂತ ಆರೋಗ್ಯ ಭಾಗ್ಯ ಕರುಣಿಸಲಿ ಎಂದು ಆಶಿಸಿದರು.ಶ್ರೀಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರ ಬಾಳಿನಲ್ಲಿ ಜ್ಞಾನದ ಬೆಳಕು ಮೂಡಬೇಕು. ಇಂದು 62 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸುಸಂದರ್ಭದಲ್ಲಿ ರಂಭಾಪುರಿ ಶ್ರೀ ಆಶೀರ್ವದಿಸಿದ್ದು ನಮ್ಮ ಸೌಭಾಗ್ಯ ಎಂದು ನುಡಿದರು. ಸಮಾರಂಭದಲ್ಲಿ ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶ್ರೀಗಳು, ಹಣ್ಣೆ ಮಠದ ಮರುಳಸಿದ್ಧ ಪಂಡಿತಾರಾಧ್ಯ ಶ್ರೀ, ನಂದಿಪುರ ನಂದೀಶ್ವರ ಶ್ರೀ, ಬೀರೂರಿನ ರುದ್ರಮುನಿ ಶ್ರೀ, ಶಂಕರದೇವರ ಮಠದ ಚಂದ್ರಶೇಖರ ಶ್ರೀ, ಬಿಳಕಿ ಹಿರೇಮಠದ ರಾಚೋಟೇಶ್ವರ ಶ್ರೀ, ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶ್ರೀ, ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶ್ರೀ, ಹಾರನಹಳ್ಳಿ ಶಿವಯೋಗಿ ಶ್ರೀ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.ಶ್ರೀಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ 62ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮಂಗಲ ಸ್ನಾನದ ಬಳಿಕ ಶ್ರೀ ಜಗದ್ಗುರು ರೇಣುಕಾಚಾರ್ಯ-ಶ್ರೀವೀರಭದ್ರಸ್ವಾಮಿ ದೇಗುಲದಲ್ಲಿ ಕಾರ್ತೀಕ ದೀಪೋತ್ಸವ ಸಂಭ್ರಮದಿಂದ ಜರುಗಿತು.23ಕೆಟಿಆರ್.ಕೆ.10
ತಾಲೂಕಿನ ಹುಣಸಘಟ್ಟ ಶ್ರೀಗುರು ಹಾಲುಸ್ವಾಮಿ ಮಠದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಶ್ರೀಗುರುಮೂರ್ತಿ ಶಿವಾಚಾರ್ಯರ ಜನ್ಮ ದಿನೋತ್ಸವಕ್ಕೆ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು, ಶ್ರೀಗುರು ಹಾಲು ಮಠದ ಶ್ರೀಗಳಿಗೆ ಆಶೀರ್ವದಿಸಿದರು. ಡಾ.ಅಭಿನವ ಸಿದ್ಧಲಿಂಗ ಶ್ರೀ, ಹಾರನಹಳ್ಳಿ ಶಿವಯೋಗಿ ಶ್ರೀ, ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶ್ರೀ, ಹಣ್ಣೆ ಮಠದ ಮರುಳಸಿದ್ಧ ಪಂಡಿತಾರಾಧ್ಯ ಶ್ರೀ, ನಂದಿಪುರ ನಂದೀಶ್ವರ ಶ್ರೀ, ಬೀರೂರಿನ ರುದ್ರಮುನಿ ಶ್ರೀ ಇದ್ದರು.