ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದು, ಕಳೆದ ಎರಡು ದಿನಗಳಿಂದ ನಿದ್ರೆಯಿಲ್ಲದೆ ಒದ್ದಾಡಿದ್ದಾರೆ. ಆರೋಗ್ಯ ಸಮಸ್ಯೆ ಹೇಳಿಕೊಂಡ ನಟ ದರ್ಶನ್‌ಗೆ ಗುರುವಾರ ನಗರದ ಬಿಮ್ಸ್ ವೈದ್ಯರು ಜೈಲಿಗೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿದರು. ಬೆನ್ನಿನಲ್ಲಿ ಊತ ಕಾಣಿಸಿಕೊಂಡಿದೆ. ಸ್ಕ್ಯಾನಿಂಗ್ ನಡೆಸಿ, ಸೂಕ್ತ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ದಿನದಿಂದಲೂ ನಟ ದರ್ಶನ್ ಬೆನ್ನುನೋವಿನ ಸಮಸ್ಯೆ ಹೇಳಿಕೊಂಡಿದ್ದರು. ಹೀಗಾಗಿಯೇ ಸರ್ಜಿಕಲ್ ಚೇರ್‌ನ ಬೇಡಿಕೆ ಇಟ್ಟಿದ್ದರು. ಬಳಿಕ ಚೇರ್, ಬೆಡ್, ದಿಂಬು ಸೌಲಭ್ಯ ಒದಗಿಸುವಂತೆ ಕೋರಿದ್ದರು. ಆದರೆ, ಜೈಲು ಅಧಿಕಾರಿಗಳು ಈವರೆಗೆ ಸೌಲಭ್ಯ ಕಲ್ಪಿಸಿಲ್ಲ. ದರ್ಶನ್ ಬೆನ್ನು ನೋವಿನ ಬಗ್ಗೆ ವೈದ್ಯಕೀಯ ವರದಿ ಬಂದ ಬಳಿಕ ಅವರ ಮುಂದಿನ ಚಿಕಿತ್ಸೆ, ಸೆಲ್‌ಗೆ ಬೆಡ್, ದಿಂಬು ಸೌಲಭ್ಯ ಒದಗಿಸುವ ಕುರಿತು ಜೈಲಿನ ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿರುವ ಜೈಲಿನ ವೈದ್ಯರು ಎರಡು ದಿನಕ್ಕೊಮ್ಮೆ ಅವರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.ಪತ್ನಿ-ಪುತ್ರ ಜೈಲಿಗೆ ಭೇಟಿ:
ಪುತ್ರ, ಪತ್ನಿ ವಿಜಯಲಕ್ಷ್ಮಿ, ಸಂಬಂಧಿ ಸುಶಾಂತ್ ರೆಡ್ಡಿ, ಆಪ್ತರನ್ನು ಭೇಟಿಯಾಗಿ ಸುಮಾರು 40 ನಿಮಿಷಗಳ ಕಾಲ ನಟ ದರ್ಶನ್ ಮಾತುಕತೆ ನಡೆಸಿದರು.