ಕನ್ನಡಪ್ರಭ ವಾರ್ತೆ ಪಾಂಡವಪುರ
ಆದಿಚುಂಚನಗಿರಿ ಮಠ ಜಾತಿ ಹೊರತಾಗಿ ಕೆಲಸ ಮಾಡುತ್ತಿದೆ. ಮಠದ ಗುರುಗಳು ಎಂದೂ ಜಾತಿಭೇದ ಮಾಡದೆ ಸರ್ವಜನಾಂಗ ಶಾಂತಿಯ ತೋಟದಂತೆ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಮಗಿರಿ ಶಾಖಾ ಮಠದ ಕಾರ್‍ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.ತಾಲೂಕಿನ ಚಿನಕುರಳಿಯ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕನಕ ದಾಸರ ಜಯಂತಿ ಹಾಗೂ ಮಕ್ಕಳ ಸಂತೆ, ಆಹಾರ ಮೇಳ ಉದ್ಘಾಟಿಸಿ ಮಾತನಾಡಿ, ಮಠದ ಗುರುಗಳು ಎಲ್ಲಾ ಸಮುದಾಯವನ್ನು ಒಗ್ಗೂಟಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.
ಕನಕದಾಸರ ಜಯಂತಿ ನಿಮಿತ್ತ ಆ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಶಿಕ್ಷಣ ಸಂಸ್ಥೆಯಿಂದ ಅಭಿನಂದನೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರ ಮಾಡುವ ಎಲ್ಲಾ ಜಯಂತಿ ಕಾರ್‍ಯಕ್ರಮದಲ್ಲೂ ಆಯಾ ಸಮುದಾಯದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕೆಲಸ ಮಾಡುತ್ತೇನೆ ಎಂದರು.ಮಕ್ಕಳಿಗೆ ವ್ಯವಹಾರಿಕ ಜ್ಞಾನ, ವ್ಯಾಪಾರ ವಹಿವಾಟು, ಲಾಭ-ನಷ್ಟದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಸಂತೆ ಹಾಗೂ ಮಕ್ಕಳ ಆಹಾರ ಮೇಳೆ ಕಾರ್‍ಯಕ್ರಮ ನಡೆಸಿದ್ದೇವೆ. ಮಕ್ಕಳು ಸಂತೆಯಲ್ಲಿ ಭಾಗವಹಿಸಿ ತರಕಾರಿ, ಹಣ್ಣುಹಂಪಲುಗಳನ್ನು ಮಾರಾಟ ಮಾಡಿದ್ದಾರೆ. ಮಕ್ಕಳ ಸಂತೆ ಯಶಸ್ಸಿಗೆ ಪೋಷಕರು, ಶಾಲೆಯ ಶಿಕ್ಷಕರು ಸಹಕಾರ ಹೆಚ್ಚಾಗಿದೆ ಎಂದು ಬಣ್ಣಿಸಿದರು.
ಸಮಾಜ ಸೇವಕ ಕೆ.ಆರ್.ಪೇಟೆ ಮಲ್ಲಿಕಾರ್ಜುನ್ ಮಾತನಾಡಿ, ವಿದ್ಯಾರ್ಥಿಗಳು ಭಕ್ತ ಕನಕದಾಸರ ಕೀರ್ತನೆಗಳು, ಸಿದ್ಧಾಂತ ಮೈಗೂಡಿಸಿಕೊಂಡು ಜೀವನದಲ್ಲಿ ಮುನ್ನಡೆಯುವ ಕೆಲಸ ಮಾಡಬೇಕು ಎಂದರು.ಇದೇ ವೇಳೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿ.ಸ್ವಾಮೀಗೌಡ, ಶಿವೇಗೌಡ, ಚನ್ನಮಾದೇಗೌಡ, ಕರೀಗೌಡ, ಎಸ್. ರೇವಣ್ಣ, ಮಾಯಮ್ಮ, ಮಹದೇವಮ್ಮ, ಶಿವಣ್ಣ, ಗೋಪಾಲಗೌಡ, ಕಳಸಯ್ಯ, ನಿಂಗೇಗೌಡ, ಈ.ರಾಜು, ಕಾಂತರಾಜು, ಸುಚಿತ್ರ ಅವರನ್ನು ಗುರುತಿಸಿ ಅಭಿನಂದಿಸಿದರು.
ಸಮಾರಂಭದಲ್ಲಿ ಬಿ.ಎಸ್.ಜಯರಾಮು, ಸಿ.ಆರ್.ರಮೇಶ್, ಕುಮಾರಸ್ವಾಮಿ, ಎಸ್.ರಾಜು, ಎಸ್.ನಾಗಸುಂದರ್, ಕೃಷ್ಣೇಗೌಡ, ರವಿಕುಮಾರ್, ಪ್ರಕಾಶ್, ಪ್ರಾಂಶುಪಾಲ ಚಿದಂಬರ್ ಸೇರಿದಂತೆ ಹಲವರು ಹಾಜರಿದ್ದರು.