ಪಾವಂಜೆಯ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಮತ್ತು ಪಾವಂಜೆಯ ಶ್ರೀವಾಣಿ ಶಾಲೆಯ ಸಹಯೋಗದಲ್ಲಿ ನೀನಾದ ರಂಗಮಂದಿರ ವಠಾರದಲ್ಲಿ, ನಂದಿನಿ ನದಿ ತಟದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಕೃಷಿ ನಿನಾದ- ಕೆಸರಿನಿಂದ ಉಸಿರು ಕಾರ್ಯಕ್ರಮ
ಮೂಲ್ಕಿ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯುವ ಸಮುದಾಯ ಐಟಿ, ಬಿಟಿ ಕಂಪನಿ ಉದ್ಯೋಗದ ಜೊತೆಗೆ ನಮ್ಮ ಬದುಕಿನ ಜೀವನಾಡಿಯಾದ ಕೃಷಿ ಬದುಕಿನ ಅರಿವನ್ನು ಮೈಗೂಡಿಸಿಕೊಂಡರೆ ದೈಹಿಕ, ಮಾನಸಿಕ ಆರೋಗ್ಯ ಲಭ್ಯವಾಗುತ್ತದೆ ಎಂದು ಜಾನಪದ ವಿದ್ವಾಂಸ, ಸಂಶೋಧಕ, ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಹೇಳಿದರು.
ಪಾವಂಜೆಯ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಮತ್ತು ಪಾವಂಜೆಯ ಶ್ರೀವಾಣಿ ಶಾಲೆಯ ಸಹಯೋಗದಲ್ಲಿ ನೀನಾದ ರಂಗಮಂದಿರ ವಠಾರದಲ್ಲಿ, ನಂದಿನಿ ನದಿ ತಟದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಕೃಷಿ ನಿನಾದ- ಕೆಸರಿನಿಂದ ಉಸಿರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮೂಲ್ಕಿ ಸುವರ್ಣ ಆರ್ಟ್ಸ್ ನ ಮಾಲೀಕ ಚಂದ್ರಶೇಖರ ಸುವರ್ಣ ವಹಿಸಿದ್ದು, ಪಾವಂಜೆಯ ಶ್ರೀ ವಾಣಿ ಶಾಲೆ ಮುಖ್ಯೋಪಾಧ್ಯಾಯಿನಿ ವಿಮಲ್ ಕೆ. ಪ್ರಭು ಅವರು ಗದ್ದೆಗೆ ಹಾಲು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಮಣ್ಣಿನ ಸಂಬಂಧದಿಂದ ದೂರವಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬದುಕಿನ ದಾರಿಯನ್ನು ತೋರಿಸಿ ಕೊಡುತ್ತದೆ ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ನವೀನ್ ಶೆಟ್ಟಿ ಮಾತನಾಡಿ, ಕೃಷಿ ಎಂದರೆ ಕೇವಲ ಗದ್ದೆ ಕೃಷಿ ಮಾತ್ರವಲ್ಲ. ನಾವು ಹಸಿರನ್ನು ಪ್ರೀತಿಸಿದಾಗ ಮಾತ್ರ ನಮ್ಮ ಉಸಿರು ಶಾಶ್ವತವಾಗಿರುತ್ತದೆ ಎಂದು ಹೇಳಿದರು.
ಕೇಂದ್ರದ ಸಂಚಾಲಕ ಧೀರಜ್ ಪೂಜಾರಿ ಬೆಂಗಳೂರು ಗದ್ದೆಗೆ ಕಾಸರಕನ ಮರದ ಕೋಲು ನೆಡುವ ಮೂಲಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕೇಂದ್ರದ ಕಾರ್ಯದರ್ಶಿ ಜಯಂತಿ ಸಂಕಮಾರ್ ಮತ್ತು ಅಕ್ಷತಾ ನವೀನ್ ಶೆಟ್ಟಿ ಕಡೆಯುವ ಕಲ್ಲಿನಲ್ಲಿ ಹಾಳೆ ಮರದ ತೊಗಟೆಯ ರಸವನ್ನು ತೆಗೆಯುವ ಮೂಲಕ ವೇದಿಕೆಯಲ್ಲಿ ಆಟಿ ಅಮಾವಾಸ್ಯೆಯ ವಿಶಿಷ್ಟತೆಗೆ ಸಾಕ್ಷಿಯಾದರು. ಈ ಸಂದರ್ಭ ಪಾವಂಜೆಯ ಹಿರಿಯ ಕೃಷಿಕೆ ಗಂಗಕ್ಕ ದೇವಾಡಿಗ ಅವರನ್ನು ಗೌರವಿಸಲಾಯಿತು. ವಿಶೇಷ ಚೇತನ ಕೃಷಿ ಬದುಕಿನ ಒಡನಾಡಿ ದುರ್ಗಾ ದಾಸ್ ಅವರ 58ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಶ್ರೀವಾಣಿ ಶಾಲೆಯ 150 ವಿದ್ಯಾರ್ಥಿನಿಯರು ಶಿಕ್ಷಕ ವೃಂದದವರು ಭಾಗವಹಿಸಿದ್ದು, ಮುಖ್ಯ ಅತಿಥಿಗಳಾಗಿ ಕಾಟಿಪಳ್ಳ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅರುಣ್ ಕುಮಾರ್ ಪಿ., ಉದ್ಯಮಿ ಕಡಂಬೋಡಿ ಮಹಾಬಲ ಪೂಜಾರಿ, ಯಾದವ ದೇವಾಡಿಗ, ಯಶೋದರ ಸಾಲಿಯನ್, ಉದ್ಯಮಿ ರಾಜಾರಾಮ ಸಾಲ್ಯಾನ್, ಹಿರಿಯ ಕೃಷಿಕ ಬಾಲಚಂದ್ರ ಸನಿಲ್, ಗುಣವತಿ ರಮೇಶ ಭಾಗವಹಿಸಿದ್ದರು. ಕೇಂದ್ರದ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು, ಜಯಂತಿ ಸಂಕಮಾರ್ ವಂದಿಸಿದರು. ಅನು ಧೀರಜ್ ಮತ್ತು ಭವ ರುತ್ವಿಕ್ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.