ಪಿಂಚಣಿ ಸೌಲಭ್ಯಕ್ಕಾಗಿ ಅನುದಾನಿತ ನೌಕರರ ಪ್ರತಿಭಟನೆ

KannadaprabhaNewsNetwork |  
Published : Jul 05, 2026, 02:15 AM IST
ಮುಂಡರಗಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

2006ರ ಆನಂತರ ನೇಮಕಗೊಂಡು ಅನುದಾನಿತ ಸಂಸ್ಥೆ ನೌಕರರಿಗೂ ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮುಂಡರಗಿ: 2006ರ ಆನಂತರ ನೇಮಕಗೊಂಡು ಅನುದಾನಿತ ಸಂಸ್ಥೆ ನೌಕರರಿಗೂ ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಅನುದಾನಿತ ನೌಕರರಿಗೆ ಕೇಂದ್ರ ಸರ್ಕಾರ ನಿಗದಿಸಿರುವ ನೂತನ ಪಿಂಚಣಿ ಯೋಜನೆಯಾಗಲಿ ಅಥವಾ ಹಳೆಯ ಪಿಂಚಣಿಯಾಗಲಿ ಯಾವುದೂ ಜಾರಿ ಇಲ್ಲ. ಸರ್ಕಾರಿ ನೌಕರರಿಗೆ ನೂತನ ಪಿಂಚಣಿಯಾದರೂ ಇದೆ. ಆದರೆ ಅನುದಾನಿತ ನೌಕರರಿಗೆ ಯಾವುದೇ ಪಿಂಚಣಿ ವ್ಯವಸ್ಥೆ ಇಲ್ಲ. 2006ರ ನಂತರ ನೇಮಕಗೊಂಡು ನಂತರ ನಿವೃತ್ತಿಯಾಗುವ ನೌಕರರು ಪಿಂಚಣಿ ಇಲ್ಲದೇ ಜೀವನ ನಡೆಸುವುದು ಕಷ್ಟ. ಹೀಗಾಗಿ ನಮಗೂ ಪಿಂಚಣಿ ಸೌಲಭ್ಯ ಕಲ್ಪಿಸಿ ಎಂದು ಆಗ್ರಹಿಸಿದರು.

ಬೇಡಿಕೆ ಈಡೇರಿಕೆಗಾಗಿ ನಮ್ಮ ಸಂಘ ಹಲವಾರು ಬಾರಿ ಮನವಿ ಮಾಡಿದೆ. ಆದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ. ನೌಕರರ ಸ್ಥಿತಿ ಬೀದಿಪಾಲಾಗಿದೆ. ಕಾರಣ 2026 ಮೇ 23ರಂದು ಕೇಂದ್ರ ಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ 2006ರ ಏ. 1ರ ಪೂರ್ವದಲ್ಲಿ ನೇಮಕ ಅಧಿಸೂಚನೆ ಹೊರಡಿಸಿ ತದನಂತರ ನೇಮಕವಾದ ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯ ಆದೇಶ ಮಾಡಿದ್ದು, ಈ ಆದೇಶದಂತೆ 2006ರ ಏ. 1ರ ಪೂರ್ವದಲ್ಲಿ ನೇಮಕವಾಗಿ ತದನಂತರ ಅನುದಾನಕ್ಕೆ ಒಳಪಟ್ಟ ಅನುದಾನಿತ ನೌಕರರಿಗೂ ಪಿಂಚಣಿ ಸೌಲಭ್ಯ ಒಳಪಡಿಸಲು ಆಗ್ರಹಿಸಿದರು.

ಒಪಿಎಸ್ ಪಿಂಚಣಿ ಜಾರಿಯಾಗಬೇಕು, ಶೀಘ್ರವಾಗಿ ಖಾಲಿ ಹುದ್ದೆಯನ್ನು ಭರ್ತಿ ಮಾಡುವುದು, ಕಾಲ್ಪನಿಕ ವೇತನ ಜಾರಿಗೆ ತರುವುದು, ಕೆಪಿಎಸ್ ಮತ್ತು ಪಿಎಂಶ್ರೀ ಶಾಲೆಗಳನ್ನು ಅನುದಾನಿತ ಶಾಲೆಯಿಂದ 3 ಕಿಲೋಮೀಟರ್ ವ್ಯಾಪ್ತಿಯ ಹೊರಗೆ ಆರಂಭಿಸುವುದು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ವಿಸ್ತರಿಸುವುದು, ಸರ್ಕಾರಿ ಶಾಲೆಯ ಶಿಕ್ಷಕರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಾಲಾ ಶಿಕ್ಷಕರಿಗೂ ವಿಸ್ತರಿಸುವುದು. ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಚಿತ್ರಕಲಾ, ಸಂಗೀತ, ಹೊಲಿಗೆ, ನಾಟಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಿದರು.

ತಹಸೀಲ್ದಾರ್‌ ಎರ್ರಿಸ್ವಾಮಿ ಪಿ.ಎಸ್. ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಡಿ.ಜಿ. ಪೂಜಾರ, ಪ್ರಧಾನ ಕಾರ್ಯದರ್ಶಿ ಮಂಜುನಾಥ ತೆಗ್ಗಿನಮನಿ, ಎಸ್.ಎಸ್‌. ಗಡ್ಡದ, ಧನೇಶ ನಾಯಕ, ಅಶೋಕ್ ಭಜಂತ್ರಿ, ಶಿವಕುಮಾರ ಗಿಂಡಿಮಠ, ಕಾಶೀನಾಥ ಶಿರಬಡಗಿ, ಚಂದ್ರಪ್ಪ ಗದ್ದಿ, ಚಂದ್ರಪ್ಪ ಬಳ್ಳಾರಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತಾಪಂ ಸಿದ್ಧ
ಸಾಲಗಾರರ ಕಿರುಕುಳಕ್ಕೆ ಮೂವರು ಬಲಿ