ಕನ್ನಡಪ್ರಭ ವಾರ್ತೆ ಮೈಸೂರುಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ವಿಷಯದ ಬಗ್ಗೆ ಅಧ್ಯಯನ ಮಾಡಿ ಕೃತಿಯನ್ನು ರಚಿಸಬೇಕಾಗುತ್ತದೆ ಎಂದು ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಸ್. ಶಿವಾಜಿ ಜೋಯಿಸ್ ಅಭಿಪ್ರಾಯಪಟ್ಟರು.ನಗರದ ಸರಸ್ವತಿಪುರಂನ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ಪ್ರೊ.ಕೆ. ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್ ಹಾಗೂ ಹನ್ಯಾಳು ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಅಲಕೆರೆ ಜೆ. ರಾಮೇಗೌಡ ಅವರ ವಿಮಲಕೀರ್ತಿ ನಿರ್ದೇಶ ಮತ್ತು ಆಸ್ ವಿಟ್ನೆಸ್ ಆಫ್‌ಟೈಮ್ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ವಿಮರ್ಶಕ, ಅನುವಾದಕ ಅಥವಾ ಕೃತಿ ರಚಿಸುವವರು ಆಯಾ ವಿಚಾರಗಳ ಬಗ್ಗೆ ಮನಸೋ ಇಚ್ಛೆ ಅನುಭವಿಸಿ ಅಧ್ಯಯನ ಮಾಡಿ ಕೃತಿ ರಚಿಸಿದಲ್ಲಿ ಅದು ಜನರ ಮನಸ್ಸನ್ನು ಮುಟ್ಟುತ್ತದೆ. ಬೌದ್ಧ ಧರ್ಮದ ಮಹಾಕಾವ್ಯದಂತಿರುವ ರಾಮಲಿಂಗೇಗೌಡರ ಕೃತಿಯಲ್ಲಿ ಬುದ್ಧನ ಬಗೆಗಿನ ಚಿಂತನಾ ಲಹರಿ, ತಾತ್ವಿಕತೆಯ ಪ್ರಸ್ತಾಪವಿದೆ. ಬುದ್ಧನ ಕುರಿತಾದ ಅನೇಕ ಅಂಶಗಳು ಈ ಕೃತಿಯಲ್ಲಿ ಸ್ಪಷ್ಟವಾಗಿ ಸಿಗುತ್ತವೆ ಎಂದರು.ಒಂದು ಉತ್ತಮ ಕೃತಿಯನ್ನು ಜನರಿಗೆ ಮುಟ್ಟಿಸುವುದು ಸುಲಭದ ಕೆಲಸವಲ್ಲ. ಅಂತಹ ಕೆಲಸವನ್ನು ಜೆ. ರಾಮಲಿಂಗೇಗೌಡ ಅವರು ಮಾಡಿದ್ದಾರೆ. ವಿಮಲಕೀರ್ತಿ ನಿರ್ದೇಶ ಮೂಲ ಕೃತಿಯಲ್ಲಿ ಒಂದೊಂದು ವಾಕ್ಯಗಳಿಗೂ ಹತ್ತಾರು ಅರ್ಥಗಳಿರುವ ಕಾರಣ ಅದನ್ನು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಕೃತಿಯನ್ನು ತರುವ ಸವಾಲು ರಾಮಲಿಂಗೇಗೌಡರಿಗಿತ್ತು. ಹೀಗಾಗಿ ತಾವು ಬರೆದ ಕೃತಿಯನ್ನು ಅವರು ಮೂರು ಬಾರಿ ಪರಿಷ್ಕರಿಸುವ ಮೂಲಕ ಕೃತಿಯನ್ನು ಉತ್ತಮವಾಗಿ ಹೊರತಂದಿದ್ದಾರೆ ಎಂದರು.ವಿಮಲಕೀರ್ತಿ ನಿರ್ದೇಶ ಮತ್ತು ಆಸ್ ವಿಟ್ನೆಸ್ ಆಫ್ ಟೈಮ್ ಎಂಬ ಎರಡೂ ಕೃತಿಗಳನ್ನು ಜನರಿಗೆ ಧರ್ವಾರ್ಥವಾಗಿ ಹಾಗೂ ಉಚಿತವಾಗಿ ಜನರಿಗೆ ನೀಡುತ್ತಿದ್ದಾರೆ. ಓದುಗರು ಇದರ ಸದ್ಬಳಕೆ ವಾಡಿಕೊಳ್ಳಬೇಕು ಎಂದರು.ವ್ಯದ್ಯ ಸಾಹಿತಿ ಡಾ.ಎಸ್.ಪಿ. ಯೋಗಣ್ಣ ಅಧ್ಯಕ್ಷತೆವಹಿಸಿದ್ದರು. ಕಾರ್ಯದರ್ಶಿ ಎಸ್.ಸಿ. ತಮ್ಮಣ್ಣಗೌಡ ಆಶಯ ಭಾಷಣ ಮಾಡಿದರು. ವಿಸ್ಮಯಂ ಹಾಗೂ ನಿಸರ್ಗ ಪ್ರಾರ್ಥಿಸಿದರು. ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಬಿ.ಎಸ್. ದಿವ್ಯಾ, ಸಂಸ್ಥೆ ಕಾರ್ಯದರ್ಶಿ ಎಸ್.ಸಿ. ತಮ್ಮಣ್ಣಗೌಡ, ಪ್ರಕಾಶಕ ಎಚ್.ಎಸ್. ಗೋವಿಂದೇಗೌಡ ಮೊದಲಾದವರು ಇದ್ದರು.