ಮಲ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿ ಶೀಘ್ರ ಪೂರ್ಣಕ್ಕೆ ಸೂಚನೆ

KannadaprabhaNewsNetwork | Published : Jun 30, 2025 12:34 AM

ಮಲ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದಲ್ಲಿ ಅದು ಪರಿಸರ ಮತ್ತು ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಆದ್ದರಿಂದ, ವೈಜ್ಞಾನಿಕವಾಗಿ ಮಲ ತ್ಯಾಜ್ಯವನ್ನು ನಿರ್ವಹಣೆ ಮಾಡಬೇಕು. ಶೌಚಾಲಯದ ಗುಂಡಿಗಳನ್ನು ಯಾಂತ್ರೀಕೃತ ವಿಧಾನದ ಮೂಲಕ ಸ್ವಚ್ಛಗೊಳಿಸಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೆ ಮಾಡುವುದು ಬೇಡ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಲ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಲ್ಲೆಂದರಲ್ಲಿ ತ್ಯಾಜ್ಯ ವಿಲೆ ಮಾಡುತ್ತಿರುವುದನ್ನು ತಪ್ಪಿಸಲು ನೆರವಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.

ಜಿಲ್ಲೆಯ ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು.

ಮಲ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದಲ್ಲಿ ಅದು ಪರಿಸರ ಮತ್ತು ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಆದ್ದರಿಂದ, ವೈಜ್ಞಾನಿಕವಾಗಿ ಮಲ ತ್ಯಾಜ್ಯವನ್ನು ನಿರ್ವಹಣೆ ಮಾಡಬೇಕು. ಶೌಚಾಲಯದ ಗುಂಡಿಗಳನ್ನು ಯಾಂತ್ರೀಕೃತ ವಿಧಾನದ ಮೂಲಕ ಸ್ವಚ್ಛಗೊಳಿಸಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೆ ಮಾಡುವುದು ಬೇಡ ಎಂದು ಸಲಹೆ ನೀಡಿದರು.

ಮಲ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಕೆಆರ್‌ಐಡಿಎಲ್‌ನ ಕಾರ್ಯಪಾಲಕ ಎಂಜಿನಿಯರ್ ಕ್ರಮ ಕೈಗೊಳ್ಳಬೇಕು. ಪಾಂಡವಪುರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಈ ಹಿಂದೆ ೧೩ನೇ ಹಣಕಾಸು ಯೋಜನೆಯಡಿ ಶೌಚಾಲಯದ ಗುಂಡಿಗಳನ್ನು ಯಾಂತ್ರೀಕೃತ ವಿಧಾನದ ಮೂಲಕ ಸ್ವಚ್ಛಗೊಳಿಸಲು ಸಕ್ಕಿಂಗ್ ಯಂತ್ರ ಖರೀದಿಸಲಾಗಿದ್ದು, ಈ ಯಂತ್ರಕ್ಕೆ ವಾಹನ ಚಾಲಕರು ಮತ್ತು ಸಹಾಯಕರಿಲ್ಲದೆ ಚಾಲನೆಯಲ್ಲಿಲ್ಲ ಎಂಬುದು ಗಮನಕ್ಕೆ ಬಂದಿದೆ ಇದರ ಕಾರ್ಯನಿರ್ವಹಣೆಗೆ ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.

ಉದ್ದಿಮೆ ಮಾದರಿಯಲ್ಲಿ ಸ್ವ-ಸಹಾಯ ಸಂಘ ಅಥವಾ ಜಿಪಿಎಲ್‌ಎಫ್ ಮೂಲಕ ಕರಾರು ಒಪ್ಪಂದ ಮಾಡಿಕೊಂಡು ಮಲ ತ್ಯಾಜ್ಯ ನಿರ್ವಹಣಾ ಘಟಕ ಮತ್ತು ಸಕ್ಕಿಂಗ್ ಯಂತ್ರವನ್ನು ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾಂಪೌಂಡ್ ನಿರ್ಮಾಣ ತ್ಯಾಜ್ಯ ನಿರ್ವಹಣೆಗಾಗಿ ಕಂದಾಯ ಇಲಾಖೆಯಿಂದ ಮಂಜೂರಾಗಿರುವ ಒಂದು ಎಕರೆ ಜಮೀನಿಗೆ ಗ್ರಾಪಂ ಲಭ್ಯ ಅನುದಾನದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲು ಆಯಾ ಪಂಚಾಯತ್ ಅಭಿವೃದ್ಧಿ ಅಕಾರಿಗಳು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

ಜಿಪಂ ಉಪಕಾರ್ಯದರ್ಶಿ ಲಕ್ಷ್ಮೀ, ಕೆಆರ್‌ಐಡಿಎಲ್ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್, ತಾಪಂ ಇಒ ವೀಣಾ, ಪಿಡಿಒ ಪೂರ್ಣಿಮಾ ಭಾಗವಹಿಸಿದ್ದರು.