ನಾನೇನು ನಿಮ್ಮ ಶತ್ರುವೇ? ಅಭಿವೃದ್ಧಿಗೆ ಕೈ ಜೋಡಿಸಿ

KannadaprabhaNewsNetwork | Published : Sep 13, 2024 1:44 AM

ಸಾರಾಂಶ

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊರೆಯಲಾಗಿರುವ 28 ಕೊಳವೆ ಬಾವಿಗಳ ಕುರಿತು ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದ್ದಾರೆ.

ಧಾರವಾಡ:

ನಾನೇನು ನಿಮ್ಮ ಶತ್ರುವೆ? ದಯಮಾಡಿ ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸಿ... ಸಭೆಗೆ ಬರುವಾಗ ಹೋಂ ವರ್ಕ್‌ ಮಾಡಿಕೊಂಡು ಬನ್ನಿ..!

ಇಲ್ಲಿಯ ಜಿಲ್ಲಾ ಪಂಚಾಯ್ತಿಯಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅಧಿಕಾರಿಗಳಿಗೆ ತೆಗೆದುಕೊಂಡ ಕ್ಲಾಸ್‌ ಇದು. ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಆದ್ಯತೆ ಮೇಲೆ ಕೆಡಿಪಿ ಸಭೆಯಲ್ಲಿ ಚರ್ಚೆ ಆಗಬೇಕು. ಆದರೆ, ಅಧಿಕಾರಿಗಳು ಸಭೆಗೆ ಅಪೂರ್ಣ ಮಾಹಿತಿ ತಂದರೆ, ಸಭೆಯ ಉದ್ದೇಶ ಈಡೇರುವುದಿಲ್ಲ. ಅಧಿಕಾರಿಗಳು ಸಭೆಗೂ ಮುಂಚೆ ಹೋಂ ವರ್ಕ್ ಮಾಡಿಕೊಂಡು ಜವಾಬ್ದಾರಿಯಿಂದ ಬರಬೇಕು ಎಂದರು.

ಸರ್ಕಾರದ ಪ್ರಮುಖ ಇಲಾಖೆಗಳಾದ ಕೃಷಿ, ಮಾರುಕಟ್ಟೆ, ತೋಟಗಾರಿಕೆ, ರೇಷ್ಮೆ, ಪಶುಪಾಲನಾ, ನೀರಾವರಿ ಇಲಾಖೆಗಳ ಅಧಿಕಾರಿಗಳು ವಾಸ್ತವಿಕ ವರದಿ ನೀಡುವುದರಿಂದ ಅಗತ್ಯ ಕ್ರಮಕೈಗೊಳ್ಳಲು ಸಹಾಯವಾಗುತ್ತದೆ ಎಂದ ಅವರು, ಲೋಕೋಪಯೋಗಿ, ನೀರಾವರಿ ಮತ್ತು ಇತರ ಪ್ರಮುಖ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ಹಾಜರಾತಿ ಖಾತರಿಗೆ ಪೇಸ್ ರೀಡಿಂಗ್ ಆನ್‌ಲೈನ್ ಅಟೆಂಡೆನ್ಸ್ ಮಾಡಬೇಕು ಎಂದು ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ ಎಲ್ ಆ್ಯಂಡ್ ಟಿ ಕಂಪನಿಯಿಂದ ಜಲಜೀವನ ಮಿಷನ್ ಯೋಜನೆ ತೃಪ್ತಿಕರವಾಗಿಲ್ಲ. ನಿಗದಿತ ಅವಧಿಯಲ್ಲಿ ಯೋಜನೆ ಮುಗಿಸದಿದ್ದರೆ ಮತ್ತು ಪ್ರತಿ ಹಂತದ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದಿದ್ದರೆ ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.

ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರದಲ್ಲಿ ರೈತರ ನೋಂದಣಿ ಆರಂಭವಾಗಿದ್ದು, 3 ಸಾವಿರ ರೈತರು ಹೆಸರು ನೋಂದಾಯಿಸಿದ್ದಾರೆ. ನೋಂದಣಿ ಪ್ರಗತಿಯಲ್ಲಿದೆ. ಹವಾಮಾನ ವೈಪರಿತ್ಯದಿಂದಾಗಿ ಹೆಸರುಕಾಳುಗಳಲ್ಲಿ ತೇವಾಂಶ ಇದೆ. ಗ್ರೇಡಿಂಗ್ ಬಂದ ತಕ್ಷಣ ಖರೀದಿ ಆರಂಭಿಸಲಾಗುತ್ತದೆ ಎಂದು ಕೃಷಿ ಮಾರುಕಟ್ಟೆ ಇಲಾಖೆ ಉಪ ನಿರ್ದೇಶಕ ಲಮಾಣಿ ಸಭೆಗೆ ಮಾಹಿತಿ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತ್ರೊಳ್ಳಿ, ಹೆಸರು, ಗೋವಿನ ಜೋಳ, ಉದ್ದು ಸೇರಿ ವಿವಿಧ ಬೆಳೆಗಳ ಕಟಾವು ನಡೆದಿದೆ. ಹಿಂಗಾರಿಗೆ ಅಗತ್ಯ ಬೀಜ, ರಸಗೊಬ್ಬರ ದಾಸ್ತಾನು ಇದೆ ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ನಿಗಮದಿಂದ ಕಳೆದ ಮೂರು ವರ್ಷಗಳಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊರೆಯಲಾಗಿರುವ 28 ಕೊಳವೆ ಬಾವಿಗಳ ಕುರಿತು ಪರಿಶೀಲನೆ ನಡೆಸುವಂತೆ ಇದೇ ವೇಳೆ ಸಚಿವ ಸಂತೋಷ ಲಾಡ್ ಜಿಲ್ಲಾಧಿಕಾರಿಗೆ ಸೂಚಿಸಿದರು. ನಿಗಮದ ಹಿರಿಯ ಅಧಿಕಾರಿ ಪ್ರಿಯದರ್ಶಿನಿ, ಸಚಿವರ ಎದುರು ತಾವು ಮಾಡಿದ ಕೊಳವೆಬಾವಿ ಕಾಮಗಾರಿಗಳು ಪರಿಪೂರ್ಣವಾಗಿವೆ ಎಂದು ಮೇಲಿಂದ ಮೇಲೆ ಸಮರ್ಥಿಸಿಕೊಂಡ ರೀತಿಗೆ ಲಾಡ್ ತೀವ್ರ ಬೇಸರ ವ್ಯಕ್ತ ಪಡಿಸಿದರು. ಬರಗಾಲದಲ್ಲಿ 28 ಕೊಳವೆಬಾವಿಗಳಲ್ಲಿ ಹೇಗೆ ನೀರು ಬಂತು? ಎಂದು ಪ್ರಶ್ನಿಸಿದ ಲಾಡ್, ತಪ್ಪು ಮಾಡಿದ ಮೇಲೂ ಒಪ್ಪಿಕೊಳ್ಳದ ಅಧಿಕಾರಿಗಳಿಗೆ ನಾನು ಏನು ಹೇಳಲ್ಲ. ಆದರೆ ನಿಮ್ಮ ಕಾರ್ಯವೈಖರಿ ಬಗ್ಗೆ ತನಿಖೆಯಾಗುತ್ತದೆ ಎಂದರು.

ಸಭೆಯಲ್ಲಿ ಶಾಸಕರಾದ ಎನ್‌.ಎಚ್‌. ಕೋನರಡ್ಡಿ, ಎಂ.ಆರ್‌. ಪಾಟೀಲ, ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ, ಗ್ಯಾರಂಟಿ ಯೋಜನಾ ಪ್ರಾಧಿಕಾರದ ಬೆಳಗಾವಿ ವಿಭಾಗದ ಅಧ್ಯಕ್ಷ ಎಸ್.ಆರ್. ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಇದ್ದರು. ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯಪಾಲ ಅಭಿಯಂತರ ಆರ್.ಎಂ. ಸೊಪ್ಪಿಮಠ, ಪಿಡಬ್ಲ್ಯೂಡಿ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಪಾಟೀಲ ಇದ್ದರು.ಮಹದಾಯಿಗಾಗಿ ನಿರ್ಣಯ

ಧಾರವಾಡ ಜಿಲ್ಲೆಗೂ ಕುಡಿಯುವ ನೀರು ಪೂರೈಕೆ ಮಾಡುವ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಕೂಡಲೇ ಒಪ್ಪಿಗೆ ಸೂಚಿಸಬೇಕು. ಗೋವಾಕ್ಕೆ ನೀಡುವ ಪ್ರಾಧಾನ್ಯತೆಯನ್ನೇ ಕರ್ನಾಟಕಕ್ಕೂ ನೀಡಬೇಕು. ಶೀಘ್ರವೇ ರಾಜ್ಯದಲ್ಲಿ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸುವಂತೆ ಆಗ್ರಹಿಸಿ ಜಿಲ್ಲಾ ಕೆಡಿಪಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಜಾನುವಾರು ಸಂಖ್ಯೆ ತೀವ್ರ ಕುಸಿತ

ಜಿಲ್ಲೆಯಲ್ಲಿ 2019ರಲ್ಲಿ 2.33 ಲಕ್ಷ ಜಾನುವಾರುಗಳಿದ್ದವು. ವರ್ಷಕ್ಕೆ ಕನಿಷ್ಠ 10 ಸಾವಿರದಂತೆ ಜಾನುವಾರುಗಳ ಸಂಖ್ಯೆ ಕುಸಿಯುತ್ತಿದ್ದು, ಇದೀಗ ಜಿಲ್ಲೆಯಲ್ಲಿ 1.96 ಲಕ್ಷ ಜಾನುವಾರುಗಳು ಉಳಿದಿವೆ ಎಂದು ಪಶು ಸಂಗೋಪನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಏನು ಕಾರಣ ಎಂದು ಸಚಿವ ಲಾಡ್ ಪ್ರಶ್ನಿಸಿದಾಗ ಸರಿಯಾಗಿ ಉತ್ತರ ನೀಡದ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೃಷಿಯಲ್ಲಿ ಜಾನುವಾರುಗಳ ಬಳಕೆ ಕಡಿಮೆಯಾಗಿರುವುದು, ಕೃಷಿಯಿಂದ ವಿಮುಖರಾಗುತ್ತಿರುವುದು ಪ್ರಮುಖ ಕಾರಣ. ಜತೆಗೆ ಇನ್ನೇನು ಕಾರಣಗಳಿವೆ ಎಂಬುದನ್ನು ಪಟ್ಟಿ ಮಾಡಲು ಸೂಚಿಸಿದರು.

Share this article