ಕುರುಗೋಡು: ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಜಯಂತಿ ಅಂಗವಾಗಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಬಿ.ಆರ್. ಅಂಬೇಡ್ಕರ್ ಸಂಘದ ವತಿಯಿಂದ ಚಿತ್ರಪಟ ಮೆರವಣಿಗೆ ಮಂಗಳವಾರ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ನರಸಪ್ಪ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಭಾರತ ದೇಶದ ಜಾತಿ ವ್ಯವಸ್ಥೆ ಪುಸ್ತಕ ಸಮಾಜದ ಪರಿವರ್ತನೆಗೆ ಆತ್ಯವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರ ವಿಚಾರಗಳ ಕುರಿತು ಸಂವಾದ ಕಾರ್ಯಕ್ರಮ ಆಯೋಜನೆ ಮಾಡೋಣ ಎಂದು ಹೇಳಿದರು.
ಸಮಾಜದಲ್ಲಿ ಅಸ್ಪಶ್ಯತೆ ಹೋಗಲಾಡಿಸಲು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಬಿ.ಆರ್. ಅಂಬೇಡ್ಕರ್ ಅವರನ್ನು ಜಾತಿ ಭೇದವಿಲ್ಲದೇ ಎಲ್ಲರೂ ಅಪ್ಪಿಕೊಳ್ಳಬೇಕು ಮತ್ತು ಅವರ ವಿಚಾರಧಾರೆಗಳನ್ನು ಒಪ್ಪಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮುಖ್ಯ ಗುರುಗಳಾದ ಡಿ.ಎಂ. ಮಲ್ಲಿಕಾರ್ಜುನ ವಿಶೇಷ ಉಪನ್ಯಾಸ ನೀಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಶಿಕ್ಷಣ ಸೌಲಭ್ಯ ಸಿಗಬೇಕು ಎಂಬ ಉದ್ದೇಶದಿಂದ ಸಂವಿಧಾನದಲ್ಲಿ ಅವಕಾಶ ನೀಡಿದರು. ಎಲ್ಲರಿಗೂ ಸಮಾನತೆ ನೀಡಿದರು. ಭಾರತೀಯರು ನಾವು ಎಂದು ಸಾರಿದರು. ಅಂಬೇಡ್ಕರ್ ಅಂದರೆ ಭಾರತ. ಭಾರತ ಸಂವಿಧಾನದ ಮೇಲೆ ನಿಂತಿದೆ. ಹಾಗಾಗಿ ಸಂವಿಧಾನ ಮೂಲಕ ಪ್ರತಿಯೊಬ್ಬರೂ ಆತ್ಮಲೋಕನ ಮಾಡಿಕೊಳ್ಳಬೇಕು ಎಂದರು.
ಉಪನ್ಯಾಸಕ ಹುಲುಗಪ್ಪ ಬಿ.ಆರ್. ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರು. ಪುರಸಭೆ ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಗ್ರೇಡ್-೨ ತಹಸೀಲ್ದಾರ್ ಮಲ್ಲೇಶಪ್ಪ, ಸಿಪಿಐ ಬಾಳನಗೌಡ ಎಸ್. ಮಾನಶೆಟ್ಟಿ, ಬಿ.ಆರ್. ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಟಿ. ಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗ ಮೂರ್ತಿ, ಪಿಎಸ್‌ಐ ಸುಪ್ರಿತ್ ವಿರೂಪಾಕ್ಷಪ್ಪ, ಗೌರವಾಧ್ಯಕ್ಷ ಎಂ. ರುದ್ರಪ್ಪ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಜಿ. ಬಸವನಗೌಡ, ಬಾಬು ಜಗಜೀನವ್ ರಾಂ ಸಂಘದ ತಾಲೂಕು ಅಧ್ಯಕ್ಷ ಸುರೇಶ್, ರೈತ ಮುಖಂಡ ವಿ.ಎಸ್. ಶಿವಶಂಕರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಮಸೂತಿ, ಬಸವರಾಜ್ ಇದ್ದರು.