ಅಂಬೇಡ್ಕರ್ ಅವರು ದೊಡ್ಡ ಹಿಂದೂ ಹಾಗೂ ಸಮಾಜ ಸುಧಾರಕರಾಗಿದ್ದರು. ಇಸ್ಲಾಮಿಕ್ ವಿರುದ್ಧ ಹಿಂದೂಗಳ ಆತ್ಮಸಾಕ್ಷಿಯನ್ನು ಎಚ್ಚರಿಸಿದ್ದ ಮಹಾನ್ ನಾಯಕ. ಅನ್ಯ ಧರ್ಮೀಯರು ತಮ್ಮ ಧರ್ಮಕ್ಕೆ ಮತಾಂತರವಾಗಿ ಎಂದು ಕೇಳಿದಾಗ ನಾನು ಭಾರತದಿಂದ ದೂರ ಹೋಗಲ್ಲ ಮತ್ತು ಭಾರತದ ಸಂಸ್ಕೃತಿಯಿಂದ ದೂರ ಆಗಲ್ಲ ಎಂದು ಹೇಳಿ ಬೌದ್ಧ ಧರ್ಮ ಸೇರಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕಾಂಗ್ರೆಸ್‌ನವರು ಜೀವಂತವಾಗಿಟ್ಟಿದ್ದ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ವಿರೋಧಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರವಾದರೇ ಹೊರತು ಹಿಂದುತ್ವವನ್ನು ವಿರೋಧಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.
ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಸ್ವರಾಷ್ಟ್ರ ಪ್ರಕಾಶನ ಸಂಸ್ಥೆ ಉದ್ಘಾಟನೆ ಮತ್ತು ಸಂವಿಧಾನ ತಜ್ಞ, ಲೇಖಕ ಡಾ.ಸುಧಾಕರ ಹೊಸಳ್ಳಿ ರಚಿತ ‘ನಾನೂ ಕಾಫಿರ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಅಂಬೇಡ್ಕರ್ ಅವರು ದೊಡ್ಡ ಹಿಂದೂ ಹಾಗೂ ಸಮಾಜ ಸುಧಾರಕರಾಗಿದ್ದರು. ಇಸ್ಲಾಮಿಕ್ ವಿರುದ್ಧ ಹಿಂದೂಗಳ ಆತ್ಮಸಾಕ್ಷಿಯನ್ನು ಎಚ್ಚರಿಸಿದ್ದ ಮಹಾನ್ ನಾಯಕ. ಅನ್ಯ ಧರ್ಮೀಯರು ತಮ್ಮ ಧರ್ಮಕ್ಕೆ ಮತಾಂತರವಾಗಿ ಎಂದು ಕೇಳಿದಾಗ ನಾನು ಭಾರತದಿಂದ ದೂರ ಹೋಗಲ್ಲ ಮತ್ತು ಭಾರತದ ಸಂಸ್ಕೃತಿಯಿಂದ ದೂರ ಆಗಲ್ಲ ಎಂದು ಹೇಳಿ ಬೌದ್ಧ ಧರ್ಮ ಸೇರಿದರು ಎಂದರು.
ಸಂವಿಧಾನ ತಿದ್ದುಪಡಿ ಮಾಡಲು ಹೊರಟಾಗ ಕಾಂಗ್ರೆಸ್ ಮತ್ತು ಎಡಪಂಥೀಯರು ವಿರೋಧಿಸಿ ದೊಡ್ಡ ಹೋರಾಟವನ್ನೇ ಮಾಡಿದರು. ಆದರೆ, ಯಾವ ಯಾವ ಪ್ರಧಾನ ಮಂತ್ರಿಗಳ ಕಾಲದಲ್ಲಿ ಎಷ್ಟೆಷ್ಟು ಬಾರಿ ತಿದ್ದುಪಡಿಯಾಗಿದೆ ಎಂದು ತಿಳಿದ ಮೇಲೆ ವಿರೋಧಿಗಳು ಸುಮ್ಮನಾದರು. ಪ್ರಸ್ತುತ ತಿದ್ದುಪಡಿ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕಾಂಗ್ರೆಸ್‌ನವರು ಅಂಬೇಡ್ಕರ್ ಅವರಿಗ ಭಾರತ ರತ್ನ ಕೊಡಲು ನಿರಾಕರಿಸಿದರು. ಆದರೆ, ತಮ್ಮ ಕಡೆಯವರಿಗೆ ಕೊಟ್ಟುಕೊಂಡಿರುವ ಬಗ್ಗೆ ತಿಳಿದ ನಂತರ ಎಡಪಂಥಿಯರು ಸುಮ್ಮನಾಗಿದ್ದಾರೆ ಎಂದರು.
ಬಿ.ಆರ್.ಅಂಬೇಡ್ಕರ್ ಅವರು ಜಮ್ಮು-ಕಾಶ್ಮೀರ ಒಳಗೊಂಡಂತೆ ಭಾರತ ಅಖಂಡವಾಗಬೇಕೆಂದು ಬಯಸಿದ್ದರು. ಆದರೆ, ನೆಹರು ಸರ್ಕಾರ ಮತ್ತು ಎಡಪಂಥಿಯರು ಒಪ್ಪಲಿಲ್ಲ. ಹಿಂದೂ ಕಾಯ್ದೆ ಜಾರಿಗೆ ತರಲು ಹಾಗೂ ಎಲ್ಲರಿಗೂ ಒಂದೇ ಕಾನೂನು ತರಬೇಕೆಂದು ಅಂಬೇಡ್ಕರ್ ಬಯಸಿದ್ದರು. ಆದರೆ, ನೆಹರು ಅವರು ಮುಸ್ಲಿಮರ ಮೇಲಿನ ವ್ಯಾಮೋಹದಿಂದ ಅವಕಾಶ ಕೊಡಲಿಲ್ಲ ಎಂದು ದೂರಿದರು.
1930ರಿಂದಲೂ ಅಂಬೇಡ್ಕರ್ ಅವರನ್ನು ಹಿಂದೂ ವಿರೋಧಿ ಎಂದೇ ಬಿಂಬಿಸಿದ ಎಡಪಂಥೀಯರು ಮತ್ತು ಕಾಂಗ್ರೆಸ್‌ನವರು ವಂದೇ ಭಾರತ್, ಜೈ ಭಾರತ್ ಜತೆಗೆ ಅಲ್ಲಾ ಹು ಅಕ್ಬರ್ ಎಂದು ಕೂಗೋಣ ಎಂದಾಗ ಇದನ್ನು ಅಂಬೇಡ್ಕರ್ ವಿರೋಧಿಸಿದರು. ಜನಸಂಖ್ಯೆಯ ಅಸಮತೋಲನವನ್ನು ಅಂದೇ ಅಂಬೇಡ್ಕರ್ ಗುರುತಿಸಿದ್ದರು ಎಂದರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುಸ್ತಕ ಮನೆ ಅಂಕೇಗೌಡರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮತ್ತು ಎಸ್‌ಬಿಇಟಿ ಸಂಸ್ಥೆ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಸ್ವರಾಷ್ಟ್ರ ಪ್ರಕಾಶನ ಸಂಸ್ಥೆ ಚಂದ್ರಶೇಖರ್ ದಡದಪುರ, ನಾನೂ ಕಾಫಿರ ಕೃತಿ ಕರ್ತೃ ಡಾ. ಸುಧಾಕರ ಹೊಸಳ್ಳಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.