ಸದನದ ಘಟನಾವಳಿಗಳ ಕುರಿತು ತಮ್ಮ ಬಳಿ ಲಭ್ಯವಿರುವ ವಿಡಿಯೋ ದೃಶ್ಯಾವಳಿಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದರು. ಸದನದಲ್ಲಿ ಭಾಷಣ ಮಾಡುವ ವೇಳೆ ವಿರೋಧ ಪಕ್ಷದ ಶಾಸಕರು ಪದೇ ಪದೇ ಅಡ್ಡಿಪಡಿಸಿ, ಅವಾಚ್ಯ ಹಾಗೂ ಅಶ್ಲೀಲ ಪದಗಳನ್ನು ಬಳಸುವುದರ ಮೂಲಕ ನನ್ನನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಿದರು. ಆ ಸಂದರ್ಭದಲ್ಲಿನ ವಾಸ್ತವ ಸ್ಥಿತಿ ಸಂಪೂರ್ಣವಾಗಿ ದಾಖಲಾಗದೇ, ನಾನು ಮಾತನಾಡಿದ ಭಾಗ ಮಾತ್ರ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಎಂಬುದು ನೋವುಂಟು ಮಾಡಿದೆ ಎಂದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ವಿಧಾನಸಭೆಯಲ್ಲಿ ನಡೆದ ಇತ್ತೀಚಿನ ಗಲಾಟೆಗೆ ಬಿಜೆಪಿ ಶಾಸಕರ ಅವ್ಯಾಚ್ಯ ಭಾಷೆ ಮತ್ತು ನಿರಂತರ ಪ್ರಚೋದನೆಯೇ ಮೂಲ ಕಾರಣವಾಗಿದ್ದು, ದೃಶ್ಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ನೈಜ ಅಂಶಗಳನ್ನು ಮರೆಮಾಚಿ ತಿರುಚಿದ ಚಿತ್ರಣ ನೀಡಲಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆರೋಪಿಸಿದರು.ನಗರದ ಹೊರವಲಯದ ಅವರ ಫಾರಂ ಹೌಸ್ ಹಾಗೂ ನಂತರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದ ಘಟನಾವಳಿಗಳ ಕುರಿತು ತಮ್ಮ ಬಳಿ ಲಭ್ಯವಿರುವ ವಿಡಿಯೋ ದೃಶ್ಯಾವಳಿಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದರು. ಸದನದಲ್ಲಿ ಭಾಷಣ ಮಾಡುವ ವೇಳೆ ವಿರೋಧ ಪಕ್ಷದ ಶಾಸಕರು ಪದೇ ಪದೇ ಅಡ್ಡಿಪಡಿಸಿ, ಅವ್ಯಾಚ್ಯ ಹಾಗೂ ಅಶ್ಲೀಲ ಪದಗಳನ್ನು ಬಳಸುವುದರ ಮೂಲಕ ನನ್ನನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಿದರು. ಆ ಸಂದರ್ಭದಲ್ಲಿನ ವಾಸ್ತವ ಸ್ಥಿತಿ ಸಂಪೂರ್ಣವಾಗಿ ದಾಖಲಾಗದೇ, ನಾನು ಮಾತನಾಡಿದ ಭಾಗ ಮಾತ್ರ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಎಂಬುದು ನೋವುಂಟು ಮಾಡಿದೆ ಎಂದರು.ವಿರೋಧ ಪಕ್ಷದ ಶಾಸಕರಾದ ವೇದವ್ಯಾಸ ಕಾಮತ್, ಶರಣು ಸಲಗಾರ್ ಹಾಗೂ ಸುರೇಶ್ ಗೌಡ ನೇತೃತ್ವದ ಗುಂಪು ಪ್ರತಿಬಾರಿ ನಾನು ಮಾತನಾಡುವಾಗ ತೀವ್ರ ಕಿರುಕುಳ ನೀಡುತ್ತಿತ್ತು. ಸದನದ ಕಲಾಪ ಮುಗಿದ ಬಳಿಕ ‘ಯಾಕೆ ಹೀಗೆ ವರ್ತಿಸುತ್ತೀರಿ’ ಎಂದು ಪ್ರಶ್ನಿಸಿದಾಗ, ‘ನಾವು ಆರ್‌ಎಸ್‌ಎಸ್‌ನವರು’ ಎಂಬ ಉತ್ತರ ದೊರಕಿತು. ಈ ಹಿನ್ನೆಲೆಯಲ್ಲೇ ನಾನು ಅವರನ್ನು ಆರ್‌ಎಸ್‌ಎಸ್ ಎಂದು ಉಲ್ಲೇಖಿಸಿದ್ದೇ ಹೊರತು, ಬೇರೆ ದುರುದ್ದೇಶ ನನ್ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.ಅಬಕಾರಿ ಸಚಿವರ ವಿರುದ್ಧ ಪ್ರತಿಭಟನೆ ಮಾಡುವುದು ವಿರೋಧ ಪಕ್ಷದ ಹಕ್ಕು. ಆದರೆ ಆರೋಪ ಮಾಡಿದರೆ ಅದನ್ನು ಸಾಬೀತುಪಡಿಸಬೇಕೆಂದು ಸರ್ಕಾರದ ಭಾಗವಾಗಿ ಪ್ರಶ್ನಿಸುವುದು ತಪ್ಪೇ? ಆ ಪ್ರಕರಣ ಕೈಬಿಟ್ಟ ಬಳಿಕ ನನ್ನನ್ನೇ ಗುರಿಯಾಗಿಸಿಕೊಂಡಿರುವುದು ಏಕೆ ಎಂಬ ಪ್ರಶ್ನೆ ನನಗೆ ಇನ್ನೂ ಕಾಡುತ್ತಿದೆ ಎಂದು ಹೇಳಿದರು.
ಸದನದ ದೃಶ್ಯಾವಳಿಗಳನ್ನು ಸರ್ಕಾರವೇ ತನ್ನ ಚೌಕಟ್ಟಿನಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ಅನೇಕ ನೈಜ ದೃಶ್ಯಗಳು ಜನರಿಗೆ ತಲುಪುತ್ತಿಲ್ಲ. ಖಾಸಗಿ ದೃಶ್ಯ ಮಾಧ್ಯಮಗಳಿಗೆ ಸಹ ಸದನದೊಳಗೆ ದೃಶ್ಯ ಸೆರೆಹಿಡಿಯಲು ಅವಕಾಶ ನೀಡಿದರೆ ಮಾತ್ರ ಸತ್ಯಾಂಶ ಬಹಿರಂಗವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರ ಮಾರ್ಪಾಡು ಮಾಡಬೇಕು ಎಂದು ಅವರು ಒತ್ತಾಯಿಸಿದರು.ನನ್ನ ವಿರುದ್ಧ ಯಾವುದೇ ದಾಖಲೆಗಳಿದ್ದರೆ, ನಿಯಮಾವಳಿ ಪ್ರಕಾರ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಆದರೆ ಸಾಕ್ಷ್ಯವಿಲ್ಲದೆ ನನ್ನ ವೈಯಕ್ತಿಕ ತೇಜೋವಧೆ ಮಾಡುತ್ತಿರುವುದು ಅನ್ಯಾಯ. ನಾನು ಹಳ್ಳಿಯಿಂದ ಬಂದವನು, ನನ್ನ ಭಾಷೆ ಗ್ರಾಮೀಣ ಶೈಲಿಯದ್ದೇ. ಅದರಲ್ಲಿ ಸ್ವಾರ್ಥವಿಲ್ಲ, ದುರುದ್ದೇಶವೂ ಇಲ್ಲ. ನನ್ನ ಮಾತುಗಳನ್ನು ಆ ಹಿನ್ನೆಲೆಯಲ್ಲೇ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಅವರ ಪುತ್ರಿಯ ಕುರಿತು ಮಾತನಾಡಿದ್ದಕ್ಕೆ ನೇರವಾಗಿ ಕ್ಷಮೆ ಕೇಳುತ್ತೇನೆ. ಅದರಲ್ಲಿ ನನಗೆ ಯಾವುದೇ ಮುಜುಗರವಿಲ್ಲ. ಆದರೆ ಈ ಪ್ರಕರಣದಲ್ಲಿ ನನಗೂ ನ್ಯಾಯ ಬೇಕು. ನನ್ನ ವಿರುದ್ಧ ನಡೆದ ಪ್ರಚೋದನೆಗಳು ಜನತಾ ನ್ಯಾಯಾಲಯದ ಮುಂದೆ ಬರುವಂತಾಗಬೇಕು ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.