ಕನ್ನಡಪ್ರಭ ವಾರ್ತೆ ನಾಲತವಾಡ ನಿಮ್ಮದೇ ಊರಿನಲ್ಲಿ ನಡೆಯುತ್ತಿರುವ ಕಳಪೆ ಮಟ್ಟದ ಕಾಮಗಾರಿಯನ್ನು ಬಂದು ನೋಡಿ ಶಾಸಕರೇ! ನಿಮಗೆ ಮತ ಹಾಕಿದ ಜನರ ಋಣವನ್ನಾದರೂ ತೀರಿಸಿ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಕನ್ನಡಪ್ರಭ ವಾರ್ತೆ ನಾಲತವಾಡ
ನಿಮ್ಮದೇ ಊರಿನಲ್ಲಿ ನಡೆಯುತ್ತಿರುವ ಕಳಪೆ ಮಟ್ಟದ ಕಾಮಗಾರಿಯನ್ನು ಬಂದು ನೋಡಿ ಶಾಸಕರೇ! ನಿಮಗೆ ಮತ ಹಾಕಿದ ಜನರ ಋಣವನ್ನಾದರೂ ತೀರಿಸಿ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.ಪಟ್ಟಣದ ರಘವೀರ ಚಿತ್ರಮಂದಿರ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ನಾಲತವಾಡದಲ್ಲಿ ಅಮೃತ 2.0 ಯೋಜನೆಯಡಿ ನಡೆಯುತ್ತಿರುವ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಉತ್ತಮ ರಸ್ತೆಯ ಮಧ್ಯದಲ್ಲಿ ಕಾಂಕ್ರೀಟ್ ಒಡೆಯಲಾಗಿದೆ. ಪೈಪ್ ಲೈನ್ ಹಾಕಿದ ನಂತರ ಮನೆಗಳಿಗೆ ಸಂಪರ್ಕ ನೀಡಬೇಕಾದರೆ ಮತ್ತೆ ಎರಡೂ ಬದಿಯ ರಸ್ತೆಗಳನ್ನು ಒಡೆಯಬೇಕಾದ ಅನಿವಾರ್ಯತೆ ಉಂಟಾಗಲಿದೆ. ಈ ಬದಲಿಗೆ ತಕ್ಷಣವೇ ರಸ್ತೆ ಎರಡು ಬದಿಯಲ್ಲಿ ಪೈಪ್ ಲೈನ್ ಹಾಕಿದರೆ ಸಮಸ್ಯೆ ಇಲ್ಲ. ಆದರೆ, ಇಡೀ ಯೋಜನೆ ಕೇವಲ ತಾತ್ಕಾಲಿಕ ಪ್ರಯೋಜನಕ್ಕಾಗಿ ರೂಪಿಸವಾಗಿದೆ ಎಂದು ಅವರು ತೀವ್ರವಾಗಿ ಟೀಕಿಸಿದರು. ನನ್ನ ಅಧಿಕಾರಾವಧಿಯಲ್ಲಿ ಪಟ್ಟಣದಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೆ. ಆದರೆ ಈಗ ಅವುಗಳನ್ನು ಪುನಃ ಹಾಳು ಮಾಡಲಾಗುತ್ತಿದೆ. ಕೆಲ ಕಡೆಗಳಲ್ಲಿ ಚರಂಡಿಯ ಕೆಳಗಡೆ ಪೈಪ್ ಲೈನ್ ಹಾಕಲಾಗುತ್ತಿದ್ದು, ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗುವ ಅಪಾಯ ಇದ್ದರೂ ಗುತ್ತಿಗೆದಾರ ಮನಬಂತೆ ಕೆಲಸ ಮಾಡುತ್ತಿದ್ದಾನೆ. ಕೂಡಲೇ ಶಾಸಕರು ಸ್ಥಳ ಪರಿಶೀಲನೇ ಮಾಡಿ ಗುಣಮಟ್ಟ ಕಾಮಗಾರಿಗೆ ಆದೇಶ ನೀಡಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಪ್ರಾರಂಭವಾಗುತ್ತದೆ ಎಂದು ಎಚ್ಚರಿಸಿದರು.ಶಾಲಾ ಅಭಿವೃದ್ಧಿಗೆ ನನ್ನ ಅಧಿಕಾರಾವಧಿಯಲ್ಲಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಿದ್ದು, ಕಾಂಪೌಂಡ್ ಕಾಮಗಾರಿ, ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಒಂದು ಕಾಮಗಾರಿಯೂ ಪೂರ್ಣಗೊಂಡಿಲ್ಲ. ಆಶ್ರಯ ಯೋಜನೆಯಡಿಯಲ್ಲಿ 800 ಮನೆಗಳನ್ನು ತಾವು ಖುದ್ದಾಗಿ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿ ಮಂಜೂರು ಮಾಡಿಸಿ ತರುವಲ್ಲಿ ಯಶಸ್ವಿಯಾಗಿದ್ದರೂ, ಇದೀಗ ಪಪಂ ಮುಖ್ಯಾಧಿಕಾರಿ ಕೆಲವು ಮನೆಗಳನ್ನು ರದ್ದುಪಡಿಸಲು ಸಿಫಾರಸ್ಸು ಮಾಡಿದ್ದಾರೆ ಎಂಬುದು ಕೇಳಿಬರುತ್ತಿದೆ. ಮುಖ್ಯಾಧಿಕಾರಿ ಏನು ಸುಪ್ರಿಂ ಏನು ಎಂದು ಗರಂ ಆದರು. ಸ್ಥಳೀಯ ಆಡಳಿತಕ್ಕೂ ಇಂತಹ ಸಿಫಾರಸ್ಸು ಮಾಡಲು ಅಧಿಕಾರವಿಲ್ಲ. ಮನೆಗಳ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಈ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ, ಬಿಜೆಪಿ ಮುಖಂಡರಾದ ಎಮ್.ಎಸ್.ಪಾಟೀಲ, ಎಮ್.ಬಿ.ಅಂಗಡಿ, ಮುದಕಪ್ಪ ಗಂಗನಗೌಡರ, ಪವಡುಬಸ್ಸು ದೇಶಮುಖ, ಜಿ.ಮಹಾಂತಗೌಡ ಗಂಗನಗೌಡರ, ಖಾಜಾಹುಸೇನ ಎತ್ತಿನಮನಿ, ಸಂಗಣ್ಣ ಕುಳಗೇರಿ, ಸಂಗಣ್ಣ ಹಾವರದಿ, ಸಂಗಮೇಶ ಮೇಟಿ, ಅಂಬ್ರೇಶ ಹಟ್ಟಿ, ವೀರೇಶ ರಕ್ಕಸಗಿ ಸೇರಿದಂತೆ ಇನ್ನಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.