ಮೂಗಿಗೆ ತುಪ್ಪ ಸವರುವ ಪ್ರಯತ್ನ

KannadaprabhaNewsNetwork |  
Published : Mar 08, 2025, 12:30 AM IST
ಬಜೆಟ್‌ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಬಾಗಲಕೋಟೆ ಜಿಲ್ಲೆಯ ಮಟ್ಟಿಗೆ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಿದೆ

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಬಾಗಲಕೋಟೆ ಜಿಲ್ಲೆಯ ಮಟ್ಟಿಗೆ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಿದೆ ವಿನಃ ಯಾವುದೇ ರೀತಿಯಲ್ಲಿ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಶಾಶ್ವತ ಉತ್ತರ ಸಿಗುವ ಯಾವ ಲಕ್ಷಣಗಳು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಎಲ್ಲ ಭರವಸೆಗಳು ಸಹ ಭರವಸೆಗಳಾಗಿಯೇ ಉಳಿಯುವ ರೀತಿಯಲ್ಲಿ ಕಂಡು ಬರುತ್ತಿದೆ.

2014ರ ಬಜೆಟ್‌ನಲ್ಲಿ ಘೋಷಣೆಯಾದ ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆ ಆಗಬೇಕಿದ್ದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಕುರಿತು ಹತ್ತು ವರ್ಷಗಳ ಕಾಲ ಯಾವುದೇ ಹಣ ಕಾಯ್ದಿರಿಸದೇ ಇರುವ ಸರ್ಕಾರ ಇದೀಗ ಮತ್ತೆ ಖಾಸಗಿ ಸಹಭಾಗಿತ್ವದಲ್ಲಿ ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ನೀಡುವ ಪ್ರಸ್ತಾಪ ಮಾಡಿರುವುದು ಗಮನಿಸಿದರೆ ಅದೇ ರಾಗ ಅದೇ ಹಾಡು ಎಂಬಂತೆ ಭಾಸವಾಗುತ್ತಿದೆ.

ಉಳಿದ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಹಾಗೂ ಉನ್ನತೀಕರಣಕ್ಕೆ ಬಜೆಟ್‌ನಲ್ಲಿ ಹಣ ಕಾಯ್ದಿರಿಸಿರುವ ಸಿದ್ದರಾಮಯ್ಯ ಅವರು ಈ ಬಾರಿ ಮರಳಿ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ವೈದ್ಯಕೀಯ ಕಾಲೇಜಿಗೆ ಒಂದು ರೂಪಾಯಿ ಕಾಯ್ದಿರಿಸದೇ ಇರುವುದು ನೋಡಿದರೆ ವೈದ್ಯಕೀಯ ಕಾಲೇಜು ಕನಸು ಕನಸಾಗಿಯೇ ಉಳಿಯಬಹುದೆನೋ ಎಂಬ ಆತಂಕ ಜನರದ್ದು.

ಯುಕೆಪಿ ಸ್ಥಿತಿಯೂ ಅದೇ ಆಗಿದೆ:

ಸಂತ್ರಸ್ತರ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರ ಗೋಳಿಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಇದನ್ನು ಗಮನಿಸಿದರೆ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ತೀರಾ ವಿರಳ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿದೆ. ಪುನರ್ವಸತಿ ಮತ್ತು ಭೂಸ್ವಾಧೀನ, ಪುನರ್‌ನಿರ್ಮಾಣ ಕಾರ್ಯಕ್ಕೆ ಭಾರೀ ಅನುದಾನದ ಅವಶ್ಯಕತೆ ಇದ್ದು, ಬಜೆಟ್‌ನಲ್ಲಿ ಕೇವಲ ರೈತರಿಗೆ ಪರಿಹಾರ ಧನ ವಿತರಣೆ ಮತ್ತು 2.1ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸುವ ಪ್ರಸ್ತಾಪವಿದೆ. ಆದರೆ, ಯೋಜನೆಯ ಆರ್ಥಿಕ ಲಭ್ಯತೆ ಬಗ್ಗೆ ಹಾಗೂ ಪರಿಹಾರ ಮತ್ತು ಪುನರ್ವಸತಿಯ ಖರ್ಚು ವೆಚ್ಚಗಳ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಇದು ಅನುಷ್ಠಾನ ಸಾಧ್ಯವೇ ಎಂಬುವುದು ಸಂತ್ರಸ್ತರ ಪ್ರಶ್ನೆಯಾಗಿದೆ.

ಸಿಮೆಂಟ್, ಸಕ್ಕರೆ, ತೋಟಗಾರಿಕೆ ಬೆಳೆಗಳ ಸಮೃದ್ಧ ಜಿಲ್ಲೆಯಾಗಿರುವ ಬಾಗಲಕೋಟೆ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಔದ್ಯೋಗಿಕವಾಗಿ ವಿಸ್ತಾರಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಕ್ಯಗಾರಿಕೆಗಳು ಸ್ಥಾಪನೆಯಾದರೆ ನಿಶ್ಚಿತವಾಗಿಯೂ ಅಭಿವೃದ್ಧಿಗೆ ಪೂರಕವಾಗಿರುತಿತ್ತು. ಆದರೆ, ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲ. ಹೀಗಾಗಿ ಜಿಲ್ಲೆಯ ಮಟ್ಟಿಗೆ ಬಜೆಟ್ ನಿರಾಶದಾಯಕ ಎಂದರೆ ತಪ್ಪಾಗಲಾರದು.

ಮೂರು ವರ್ಷಗಳ ಹಿಂದೆ ಬಜೆಟ್‌ನಲ್ಲಿ ಘೋಷಣೆಯಾದ ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್‌ಗೆ ಇನ್ನೂ ಜಮೀನನ್ನೇ ನೀಡಿಲ್ಲ. ಕಳೆದ ವರ್ಷ ಗುಳೇದಗುಡ್ಡ ಹಾಗೂ ಇಳಕಲ್ಲ ನಗರದಲ್ಲಿ ಸೀರೆಯ ಮೈಕ್ರೋ ಕ್ಲಸ್ಟರ್‌ ಅಭಿವೃದ್ದಿಪಡಿಸುವ ಮಾತನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ ಸಾವಿರಾರು ನೇಕಾರರಿಗೆ ಉದ್ಯೋಗ ನೀಡಬೇಕಿದ್ದ ಜವಳಿ ಪಾರ್ಕ್‌ ನಿರ್ಮಾಣವೇ ಕುಂಟುತ್ತಾ ಸಾಗಿದೆ. ಹೀಗಿರುವಾಗ ಜವಳಿ ಕ್ಷೇತ್ರದ ಪುನಶ್ಚೇತನವನ್ನು ಈ ಸರ್ಕಾರದಿಂದ ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ನೇಕಾರ ಮುಖಂಡರ ಅಳಲು.

ಐತಿಹಾಸಿಕ ಪರಂಪರೆಯ ತಾಣಗಳಾಗಿರುವ ಐಹೊಳೆ, ಬಾದಾಮಿ, ಪಟ್ಟದಕಲ್ಲಿನ ಅಭಿವೃದ್ಧಿ ವಿಷಯ ಬಂದಾಗಲೆಲ್ಲ ದೊಡ್ಡದಾಗಿ ಮಾತನಾಡುವ ಜಿಲ್ಲೆಯ ಪ್ರತಿನಿಧಿಗಳು, ಪ್ರವಾಸೋದ್ಯಮ ಕ್ಷೇತ್ರ ಬಲಪಡಿಸಲು ಬೇಕಾದ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗದೆ ಅಸಹಾಯಕತೆಯಲ್ಲಿದ್ದಾರೆ ಎಂಬುದು ಮತ್ತೊಮ್ಮೆ ಬಜೆಟ್ ಮೂಲಕ ಸಾಬೀತಾಗಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಈ ಬಜೆಟ್ ಶೂನ್ಯ ಕೊಡುಗೆ ನೀಡಿದೆ ಎನ್ನಬಹುದು.

ಒಟ್ಟಾರೆ ಸದಾಕಾಲ ಅತಿವೃಷ್ಟಿ, ಅನಾವೃಷ್ಟಿ, ಮುಳುಗಡೆಯ ಕಾರಣದಿಂದ ಎಲ್ಲವನ್ನು ಕಳೆದುಕೊಂಡಿರುವ ಜಿಲ್ಲೆಯ ಸಂತ್ರಸ್ತರಿಗೆ ಶಾಶ್ವತವಾದ ಉದ್ಯೋಗಕ್ಕೆ ಪೂರಕವಾದ ಕೈಗಾರಿಕೆಗಳ ಸ್ಥಾಪನೆಗಳಂತಹ ಯಾವ ಪ್ರಸ್ತಾಪಗಳಿಲ್ಲದಿರುವುದು ಸಹಜವಾಗಿ ಜಿಲ್ಲೆಯ ಜನತೆಯಲ್ಲಿ ಅಸಮಾಧಾನ ಮೂಡಿಸಿದೆ.

ಬಜೆಟ್‌ ನಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು ? :

1. ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಅಡಿಯಲ್ಲಿ ಅಥವಾ ಘಟಕ ಅಂದರೆ ಬಾಗಲಕೋಟೆ ಮೆಡಿಕಲ್ ಕಾಲೇಜಿಗೆ ₹2000 ಕೋಟಿ ಡಿಪಾಸಿಟ್ ನಿಧಿಯಲ್ಲಿ ಪ್ರಸಕ್ತ ಬಜೆಟ್‌ನಲ್ಲಿ ₹200 ರಿಂದ ₹300 ಕೋಟಿ ಕಾಯ್ದಿರಿಸಲಾಗಿದೆ ಎಂದು ಹೇಳಲಾಗುತ್ತಿದೆ.

2. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ವ್ಯಾಪ್ತಿಯ ಆಲಮಟ್ಟಿ ಅಣೆಕಟ್ಟಿನ ಗೇಟನ್ನು 524.256 ಮೀ.ವರೆಗೆ ಎತ್ತರಿಸುವುದರಿಂದ ಮುಳುಗಡೆಯಾಗುವ ಜಮೀನುಗಳನ್ನು ಐತೀರ್ಪಿನಂತೆ ಒಂದೇ ಹಂತದಲ್ಲಿ ಭೂ ಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ವಿತರಣೆಗೆ ಕ್ರಮ. ಅಲ್ಲದೇ, 2.01 ಲಕ್ಷ ಎಕರೆಗೆ ನೀರಾವರಿ ಕಲ್ಪಿಸುವ ಬಾಕಿ ಕಾಮಗಾರಿ ಅನುಷ್ಠಾನಗೊಳಿಸಲು ಕ್ರಮ.

3. ಕೃಷ್ಣಾ ಕಣಿವೆ, ಕಾವೇರಿ ಕಣಿವೆ ಹಾಗೂ ಇತರ ನದಿಗಳ ಕಣಿವೆಯ ವಿವಿಧ ಯೋಜನೆಗಳಡಿ ಬಾಕಿ ಇರುವ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ.

4. ಕೃಷ್ಣಾ ಕಣಿವೆಯ ಅನುಷ್ಠಾನ ಹಂತದಲ್ಲಿರುವ ಆಧುನೀಕರಣ ಹಾಗೂ ಏತ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಸಹಾಯಧನ ಪಡೆಯಲು ಸೂಕ್ತ ಪ್ರಸ್ತಾವನೆ ಸಲ್ಲಿಸಲಾಗುವುದು.

5. ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಹಾಗೂ ಚಿತ್ರದುರ್ಗದಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಕೇಂದ್ರ ಸ್ಥಾಪನೆ.

6. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಸ್ವಾಧೀನ ಕುರಿತಂತೆ ನ್ಯಾಯಾಲಯಗಳಲ್ಲಿ ದಾಖಲಿಸಿರುವ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಭೂಸ್ವಾಧೀನ ಪ್ರಕರಣಗಳ ವಿಶೇಷ ತ್ವರಿತಗತಿ ನ್ಯಾಯಾಲಯ ಬಾಗಲಕೋಟೆ ಜಿಲ್ಲೆಯಲ್ಲಿ ಸ್ಥಾಪಿಸಲು ಗ್ರೀನ್‌ಸಿಗ್ನಲ್‌.

7. ಬಾಗಲಕೋಟೆ ಜಿಲ್ಲೆಯ ಕೆರೂರು ಏತ ನೀರಾವರಿ ಮತ್ತು ಭಗವತಿ ಏತ ನೀರಾವರಿ, ಬಾಗಲಕೋಟೆ ಕ್ಷೇತ್ರದ ಭಗವತಿ ಏತ ನೀರಾವರಿ ಉಪಕಾಲುವೆಯ ಜಾಲನಿರ್ಮಾಣಕ್ಕೆ ₹235 ಕೋಟಿ ಘೋಷಣೆ.

8. ಜಿಲ್ಲೆಯ ಹುನಗುಂದ ಹಾಗೂ ಮುಧೋಳದಲ್ಲಿ 50 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ಸ್ಥಾಪನೆ.

9. ಬಾದಾಮಿಯ ಚಾಲುಕ್ಯ ಉತ್ಸವಕ್ಕೆ ₹2 ಕೋಟಿ ಅನುದಾನ ನೀಡುವ ಪ್ರಸ್ತಾಪ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ