ಕನ್ನಡಪ್ರಭ ವಾರ್ತೆ ಕಲಬುರಗಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.2ರಂದು ಆಂದೋಲಾ ಗ್ರಾಮದ ಕರುಣೇಶ್ವರ ಮಠದ ರಥೋತ್ಸವಕ್ಕೂ ಮುಂಚೆ ಸಣ್ಣ ಜಗಳ ನಡೆದಿದ್ದನ್ನು ನೆಪ ಮಾಡಿಕೊಂಡು ಶ್ರೀರಾಮಸೇನೆ ಕಾರ್ಯಕರ್ತ ರಮೇಶ್ ಬಾಲಪ್ಪ ದರ್ಶನಾಪುರ ಎಂಬಾತನನ್ನು ಬಂಧಿಸಿ, ಅಕ್ರಮವಾಗಿ ಡಿ.4ರ ವರೆಗೆ ಜೇವರ್ಗಿ ಠಾಣೆಯಲ್ಲಿ ಕೂಡಿ ಹಾಕಲಾಗಿದೆ. ಈ ವೇಳೆ ಆ ಯುವಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಆಂದೋಲಾ ಕರುಣೇಶ್ವರ ಮಠದ ಆವರಣದಲ್ಲಿರುವ ನಾಮಫಲಕದ ಮೇಲೆ ಸೆಗಣಿ ಎರಚಿದ್ದು ತಾನೇ ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗಿದೆ. ಇಷ್ಟಕ್ಕೂ ಠಾಣೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸುವ ಅಧಿಕಾರ ಪೊಲೀಸರಿಗೆ ಕೊಟ್ಟವರು ಯಾರು ಎಂದು ಅವರು ಪ್ರಶ್ನಿಸಿದರು.
ಡಿ.2 ರಂದು ಅಕ್ರಮವಾಗಿ ಬಂಧನಕ್ಕೆ ಒಳಪಡಿಸಿದ ಬಳಿಕ ಜೇವರ್ಗಿ ತಹಸೀಲ್ದಾರ್ ಅವರಿಗೆ ಸಲ್ಲಿಸಿದ ವರದಿಯಲ್ಲಿ ಕಟ್ಟಿಸಂಗಾವಿ ಬಳಿ ನಡೆದ ಗದ್ದಲ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಅವರನ್ನು ಬಂಧಿಸಲಾಗಿದೆ ಎಂದು ವಿವರಿಸಲಾಗಿದೆ. ಆದರೆ, ರಮೇಶ್ ಅವರನ್ನು ಆಂದೋಲಾ ಗ್ರಾಮದಲ್ಲಿ ಬಂಧಿಸಿರುವ ಕುರಿತು ಠಾಣೆಯ ಪೇದೆಗಳಾದ ಯಲ್ಲಾಲಿಂಗ ಮತ್ತು ಸಿದ್ರಾಮ ಅವರು ಪಿಎಸ್‍ಐಗೆ ಸಲ್ಲಿಸಿರುವ ದೂರಿನಲ್ಲಿ ದಾಖಲಿಸಿದ್ದಾರೆ.ಮತ್ತೊಂದೆಡೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.20, 2022ರಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಂತಿಮ ವರದಿ ಸಲ್ಲಿಸಿರುವುದಾಗಿ ದಾಖಲಿಸಲಾಗಿದೆ. ಅರೆಸ್ಟ್ ಮಾಡುವುದಕ್ಕಿಂತಲೂ ಮುಂಚಿನ ಒಂದು ವರ್ಷದ ಹಿಂದೆಯೇ ತನಿಖೆ ಪೂರ್ಣಗೊಂಡಿದೆ ಎಂದರೆ ಏನರ್ಥ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.
ಈಗಾಗಲೇ ಜೇವರ್ಗಿ ಪಿಎಸ್‍ಐ ನಡೆಸಿರುವ ಅಕ್ರಮ ಬಂಧನ ಮತ್ತು ಹಲ್ಲೆ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಆದಷ್ಟು ಶೀಘ್ರ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದೆ ಹೋದರೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಹೇಶ್ ಗೊಬ್ಬೂರ್, ಮಹೇಶ್ ಯಾದವ್, ಅಂಬಾರಾಯ ಕಂಬಾರ, ಶರಣು ಗುತ್ತೇದಾರ್, ವೀರೇಶ್ ಸುತಾರ್, ಪರಮೇಶ್ವರ ಮುಲಗೆ ಇದ್ದರು.