ಲೋಕ ಫಲಿತಾಂಶ: ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಆತಂಕ

KannadaprabhaNewsNetwork | Published : Jun 6, 2024 12:31 AM

ಸಾರಾಂಶ

ಹಾಸನ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮೊಮ್ಮಗ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಸೋಲನ್ನು ಅರಗಿಸಿಕೊಳ್ಳಲಾಗದೆ ಜೆಡಿಎಸ್ ಮುಖಂಡರು ಪರಿತಪಿಸುತ್ತಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಸೋಲು । ರೇವಣ್ಣನವರ ಕುಟುಂಬದ ಹಿಡಿತದಲ್ಲಿದ್ದ ತಾಲೂಕು । ಜೆಡಿಎಸ್‌ನಲ್ಲಿ ಬಿರುಕು?

ಎ. ರಾಘವೇಂದ್ರಹೊಳ್ಳ

ಕನ್ನಡಪ್ರಭ ವಾರ್ತೆ ಬೇಲೂರು

ಹಾಸನ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮೊಮ್ಮಗ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಸೋಲನ್ನು ಅರಗಿಸಿಕೊಳ್ಳಲಾಗದೆ ಜೆಡಿಎಸ್ ಮುಖಂಡರು ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ನಿಷ್ಠಾವಂತ ಕಾರ್ಯಕರ್ತರು ತಮ್ಮ ನಡೆ ಎತ್ತಕಡೆ ಎಂಬ ಚಿಂತೆಯಲ್ಲಿದ್ದಾರೆ

ಬೇಲೂರು ಕಾರ್ಯಕರ್ತರ ಬಗ್ಗೆ ಅತಿ ಹೆಚ್ಚು ವ್ಯಾಮೋಹ ಹೊಂದಿರುವ ರೇವಣ್ಣ ಕುಟುಂಬದವರು ಸಾಮಾನ್ಯ ಕಾರ್ಯಕರ್ತನ ಯೋಗಕ್ಷೇಮ ವಿಚಾರಿಸುತ್ತಿಲ್ಲ, ತಾವು ಕೇವಲ ಐದಾರು ಮುಖಂಡರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ ಎಂಬುದಾಗಿ ಸ್ವತಃ ಸಂಸದ ಪ್ರಜ್ವಲ್ ರೇವಣ್ಣ ಹಲವಾರು ಸಭೆಯಲ್ಲಿ ಹೇಳಿರುವುದನ್ನು ಕಾರ್ಯಕರ್ತರು ಉಲ್ಲೇಖಿಸುತ್ತಾರೆ. ಬೇಲೂರು ಕ್ಷೇತ್ರದ ಬಗ್ಗೆ ಹೆಚ್ಚಿನ ಒಡನಾಟವಿದ್ದ ಮಾಜಿ ಸಂಸದ ಎಚ್‌.ಕೆ. ಜವರೇಗೌಡರನ್ನು ಜೆಡಿಎಸ್ ಪಕ್ಷದಿಂದ ದೂರ ಮಾಡಿ ಭವಾನಿ, ಸೂರಜ್, ಪ್ರಜ್ವಲ್ ರೇವಣ್ಣ ಬೇಲೂರು ಕ್ಷೇತ್ರದ ಬಗ್ಗೆ ಹೆಚ್ಷಿನ ಆಸಕ್ತಿ ವಹಿಸಿ ಜೆಡಿಎಸ್ ಕಾರ್ಯಕರ್ತರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು.

ಬಿಜೆಪಿ- ಜೆಡಿಎಸ್ ಮೈತ್ರಿ ಹಾಸನ ಹಾಸನ ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಅದ್ಧೂರಿ ಗೆಲುವು ಸಾಧಿಸಲಿದೆ ಎಂಬುದು ಜೆಡಿಎಸ್ ಮುಖಂಡರ ಅಭಿಲಾಷೆಯಾಗಿತ್ತು. ಆದರೆ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗು ಮಾಡುವಂತೆ ಫಲಿತಾಂಶ ಹೊರ ಬಿದ್ದಿದೆ. ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬೇಲೂರು ತಾಲೂಕಿನಲ್ಲಿ ಪ್ರಜ್ವಲ್ ಸೋಲನ್ನು ಅರಗಿಸಿಕೊಳ್ಳಲಾಗದ ಪರಿಸ್ಥಿತಿ ಮುಖಂಡರಲ್ಲಿ ಉಂಟು ಮಾಡಿದೆ. ಲೋಕಸಭಾ ಚುನಾವಣೆಯ ಮತದಾನಕ್ಕೆ ಮೂರು ದಿನಗಳ ಮುಂಚೆ ಸಂಸದ ಪ್ರಜ್ವಲ್ ರೇವಣ್ಣರದ್ದು ಎಂದು ಆರೋಪಿಸಲಾದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣದಿಂದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಮುಜುಗರಕ್ಕೆ ಒಳಗಾಗಿದ್ದರು. ಈಗ ಗಾಯದ ಮೇಲೆ ಬರೆ ಎಂಬಂತೆ ಪ್ರಜ್ವಲ್ ಸೋಲು ಜೆಡಿಎಸ್ ಮುಖಂಡರನ್ನು ಚಿಂತೆಗೆ ದೂಡಿದರೆ, ರೇವಣ್ಣ ಕುಟುಂಬದ ನಿಷ್ಠಾವಂತ ಕಾರ್ಯಕರ್ತರು ತಮ್ಮ ದಾರಿ ಮುಂದೇನು ಎಂಬ ಆಲೋಚನೆಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಈ ಹಿಂದಿನ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿ ಹೆಚ್ಚು ಸ್ಥಾನವನ್ನು ಗಳಿಸುವ ಮೂಲಕ ಜೆಡಿಎಸ್ ಪಕ್ಷವನ್ನು ಧೂಳೀಪಟ ಮಾಡಿತ್ತು. ನಂತರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟು ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಗೆಲುವು ಸಾಧಿಸಿದ್ದಲ್ಲದೆ ಪಟ್ಟಣದ ಬಹುತೇಕ ವಾರ್ಡ್‌ಳಲ್ಲಿ ಹೆಚ್ಚಿನ ಬಹುಮತ ಪಡೆದಿದ್ದರು. ಗ್ರಾಮೀಣ ಪ್ರದೇಶದಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಮತ ಪಡೆದಿದ್ದರು. ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ದಿನೇ ದಿನೇ ಕುಸಿಯುತ್ತಿದೆ ಎಂದು ಕಾರ್ಯಕರ್ತರೇ ದೂರುತ್ತಿದ್ದಾರೆ.

ಈಗಾಗಲೇ ವಿಧಾನಸಭೆ ಹಾಗೂ ಪುರಸಭೆ ಚುನಾವಣೆ ಸಂದರ್ಭದಲ್ಲಿ ಕೆಲವು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ಅನ್ಯ ಪಕ್ಷಕ್ಕೆ ವಲಸೆ ಹೋಗಿದ್ದು ಈಗ ಜೆಡಿಎಸ್ ಪಕ್ಷಕ್ಕೆ ಸಂಕಷ್ಟಕಾಲ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಪರಾಜಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೋಲಿನಿಂದ ಅಘಾತಗೊಂಡಿರುವ ಕಾರ್ಯಕರ್ತರು ಹಾಗೂ ಮುಖಂಡರಿಗೆ ಜೆಡಿಎಸ್ ವರಿಷ್ಠರು ಯಾವ ರೀತಿ ಸಮಾಧಾನ ಹೇಳುತ್ತಾರೆ ಹಾಗೂ ಪಕ್ಷವನ್ನು ಮತ್ತೆ ತಾಲೂಕಿನಲ್ಲಿ ಹೇಗೆ ಮರು ಸಂಘಟನೆ ಮಾಡುತ್ತಾರೆ ಎಂಬುದು ಇಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿದೆ ಎಂಬುದು ರಾಜಕೀಯ ನಾಯಕರ ಅಂಬೋಣ.

Share this article