ಸೆ. 2ರಿಂದ ಜಿಲ್ಲೆಯಲ್ಲಿ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿ: ಡಿಸಿ ದಿವ್ಯಪ್ರಭು

KannadaprabhaNewsNetwork |  
Published : Aug 30, 2024, 01:03 AM IST
29ಡಿಡಬ್ಲೂಡಿ7ದಿವ್ಯಪ್ರಭು | Kannada Prabha

ಸಾರಾಂಶ

ಸಾರ್ವಜನಿಕರ ಹಿತದೃಷ್ಟಿಯಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಜಾರಿಗೊಳಿಸಿರುವ ಎನಿವೇರ್ ನೋಂದಣಿ ವ್ಯವಸ್ಥೆಯು ಧಾರವಾಡ ಜಿಲ್ಲೆಯಲ್ಲಿ ಸೆ. 2ರಿಂದ ಜಾರಿಯಾಗಲಿದೆ. ಇದರಿಂದ ಜನರು ತಮಗೆ ಬೇಕಾದ ನೋಂದಣಿ ಕಚೇರಿಯಲ್ಲಿ ದಸ್ತಾವೇಜು ಮಾಡಿಸಿಕೊಳ್ಳಲು ಅನುಕೂಲವಾಗಲಿದೆ.

ಧಾರವಾಡ:

ಸಾರ್ವಜನಿಕರ ಹಿತದೃಷ್ಟಿಯಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಜಾರಿಗೊಳಿಸಿರುವ ಎನಿವೇರ್ (Any Where) ನೋಂದಣಿ ವ್ಯವಸ್ಥೆಯು ಜಿಲ್ಲೆಯಲ್ಲಿ ಸೆ. 2ರಿಂದ ಅನುಷ್ಠಾನಗೊಳ್ಳಲಿದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2024-25ನೇ ಸಾಲಿನ ಆಯವ್ಯಯದಲ್ಲಿ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದೆಂದು ಸರ್ಕಾರ ಹೇಳಿತ್ತು. ಜಿಲ್ಲೆಯಲ್ಲಿ ಧಾರವಾಡ, ಹುಬ್ಬಳ್ಳಿ (ದಕ್ಷಿಣ), ಹುಬ್ಬಳ್ಳಿ (ಉತ್ತರ), ಅಣ್ಣಿಗೇರಿ, ಕುಂದಗೋಳ, ಕಲಘಟಗಿ ಮತ್ತು ನವಲಗುಂದ ಸೇರಿದಂತೆ ಒಟ್ಟು 7 ಸ್ಥಳಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪನೋಂದಣಿ ಕಚೇರಿಗಳನ್ನು ಹೊಂದಿದೆ. ಇನ್ಮುಂದೆ ಜಿಲ್ಲೆಯ ಯಾವುದೇ ಭಾಗದ ಸ್ಥಿರಾಸ್ತಿ ದಸ್ತಾವೇಜುನ್ನು ಮಾಲೀಕರು ತಮಗೆ ಅನುಕೂಲ ಮತ್ತು ಸ್ಲಾಟ್ ಲಭ್ಯವಾಗುವ ನೋಂದಣಿ ಕಚೇರಿಗಳಲ್ಲಿ ನೋಂದಣಿ ಮಾಡಿಸಬಹುದು ಎಂದು ಹೇಳಿದ್ದಾರೆ.

ಪ್ರಸ್ತುತ ಸಾರ್ವಜನಿಕರು ತಮ್ಮ ಸ್ಥಿರಾಸ್ತಿ ಇರುವ ವ್ಯಾಪ್ತಿಯ ಉಪ ನೋಂದಣಿ ಕಚೇರಿಯಲ್ಲಿ ಮಾತ್ರ ದಸ್ತಾವೇಜನ್ನು ನೋಂದಣಿ ಮಾಡಲು ಅವಕಾಶವಿದೆ. ಆದರೆ, ಎನಿವೇರ್ ನೋಂದಣಿಯಲ್ಲಿ ದಸ್ತಾವೇಜನ್ನು ಸ್ಥಿರಾಸ್ತಿ ಇರುವ ಜಿಲ್ಲೆಯ ಯಾವುದಾದರೂ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಇದರಿಂದ ನೋಂದಣಿಯಲ್ಲಿ ಪಾರದರ್ಶಕತೆ, ವಿಳಂಬ ಆಗುವುದಕ್ಕೆ ತಡೆ, ಸಾರ್ವಜನಿಕರಿಗೆ ತಮಗೆ ಸಮೀಪದಲ್ಲಿರುವ ಉಪ ನೋಂದಣಿ ಕಚೇರಿಯಲ್ಲಿ ದಸ್ತಾವೇಜನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ನೋಂದಣಿಗೆ ಸ್ಲಾಟ್ ಲಭ್ಯವಿರುವ ಕಚೇರಿಯನ್ನು ನೋಂದಣಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ನೋಂದಣಿ ಪ್ರಕ್ರಿಯೆಯು ಸುಲಭವಾಗುವುದಲ್ಲದೆ, ಸಮಯವು ಸಹ ಉಳಿಯುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ