ಶಿರಹಟ್ಟಿ: ನಗರದ ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಪೌರಕಾರ್ಮಿಕರು ಕಸ ವಿಲೇವಾರಿ ವಾಹನದೊಂದಿಗೆ ಮನೆ ಬಾಗಿಲಿಗೆ ಬರುತ್ತಿದ್ದು, ಒಣ ಮತ್ತು ಹಸಿ ಕಸ ಬೇರ್ಪಡಿಸಿ ಅವರಿಗೆ ನೀಡುವ ಮೂಲಕ ಪಟ್ಟಣವನ್ನು ಸ್ವಚ್ಛ ಹಾಗೂ ಸುಂದರವನ್ನಾಗಿ ಮಾಡಲು ಸಹಕರಿಸಬೇಕು ಎಂದು ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಮನವಿ ಮಾಡಿದರು.ಜಿಲ್ಲಾಡಳಿತ, ಪಟ್ಟಣ ಪಂಚಾಯಿತಿ ಹಾಗೂ ಬನಶಂಕರಿದೇವಿ ಏಜೆನ್ಸಿಯ ಸಹಯೋಗದಲ್ಲಿ ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಏರ್ಪಡಿಸಿದ್ದ ಸ್ವಚ್ಛ ಭಾರತ ಮಿಷನ್- ೨.೦ ಮಾಹಿತಿ ಶಿಕ್ಷಣ ಸಂವಹನ ಮತ್ತು ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.ಮೂಲದಲ್ಲೇ ಹಸಿ ಕಸ, ಒಣಕಸವನ್ನು ಕಡ್ಡಾಯವಾಗಿ ಬೇರ್ಪಡಿಸಬೇಕೆಂಬ ನಿಯಮ ಬಂದು ವರ್ಷ ಕಳೆದರೂ ಅನುಷ್ಠಾನ ಆಗುತ್ತಿಲ್ಲ. ಇದು ಬರೀ ಪತ್ರಿಕಾ ಹೇಳಿಕೆಗಷ್ಟೇ ಸೀಮಿತವಾಗಿದ್ದು, ಜನರು ಕೂಡ ಪಾಲಿಸುತ್ತಿಲ್ಲ. ಕಸ ಸಂಗ್ರಹಿಸುವ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಎಷ್ಟೇ ಹೇಳಿದರೂ ಸಾರ್ವಜನಿಕರು ಇದನ್ನು ಪಾಲಿಸದೇ ಇರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದರು.ಪೌರಕಾರ್ಮಿಕರ ನಿರಂತರ ಶ್ರಮದಿಂದ ಪಟ್ಟಣದ ೧೮ ವಾರ್ಡ್‌ಗಳಲ್ಲಿ ಇತ್ತಿತ್ತಲಾಗಿ ಕಸ ಬೇರ್ಪಡಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಜನರ ಸಹಭಾಗಿತ್ವ ಬಹಳ ಮುಖ್ಯ. ಇದುವರೆಗೂ ಒಣಕಸ ಹಸಿಕಸ ಒಟ್ಟಿಗೆ ಸಂಗ್ರಹಿಸಲಾಗುತ್ತಿತ್ತು. ಇದರಿಂದ ಘನತ್ಯಾಜ್ಯ ನಿರ್ವಹಣೆ ಪಟ್ಟಣ ಪಂಚಾಯಿತಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು ಎಂದರು.ನಮ್ಮಲ್ಲಿ ಈಗಲೂ ಬಹುತೇಕರು ಸ್ವಚ್ಛತೆ ಎಂದರೆ ಪೌರಕಾರ್ಮಿಕರು ಅಷ್ಟೆ ಜವಾಬ್ದಾರರು. ಅವರಷ್ಟೇ ಮಾಡಬೇಕು ಎಂಬ ಧೋರಣೆ ಇದೆ. ಮನೆ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಮತ್ತು ತ್ಯಾಜ್ಯ ಕಸ ವಿಲೇವಾರಿ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವವೂ ಅವಶ್ಯವಾಗಿದೆ ಎಂದರು.ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಅಭಿಯಾನದ ಮೂಲಕ ಸ್ವಚ್ಛತೆಗೆ ಒತ್ತು ನೀಡಿದ್ದು, ಸ್ವಚ್ಛತೆಗೆ ವ್ಯಾಪಾರಸ್ಥರು, ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಅಭಿಯಾನಕ್ಕೆ ಯಶಸ್ಸು ಸಿಗಲು ಸಾಧ್ಯ. ಎಲ್ಲರೂ ಸಹಕರಿಸಿದಾಗ ಮಾತ್ರ ಪಟ್ಟಣವನ್ನು ಕಸಮುಕ್ತ ಮಾಡಬಹುದು ಎಂದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸವಿತಾ ತಾಂಭ್ರೆ ಮಾತನಾಡಿ, ಪಟ್ಟಣದ ಸ್ವಚ್ಛತೆಗೆ ಪೌರಕಾರ್ಮಿಕರು ಸದಾ ಸಿದ್ಧರಾಗಿ ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ ಸಹಕಾರ ಎಂಬಂತೆ ಕಸವನ್ನು ಎಲ್ಲೆಂದರಲ್ಲಿ ಬಿಸಾಕುವ ಬದಲು ಹಸಿ ಮತ್ತು ಒಳ ಕಸ, ಪ್ಲಾಸ್ಟಿಕ್ ಸೇರಿದಂತೆ ಹತ್ತಾರು ವಿಧದ ಕಸಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ನಂತರ ನಂತರ ವಿಲೇವಾರಿಗೆ ಸಹಕರಿಸಬೇಕು ಎಂದರು.ಪೌರಕಾರ್ಮಿಕರನ್ನು ಕೇವಲ ಕಾರ್ಮಿಕರ ದೃಷ್ಟಿಯಿಮದ ನೋಡದೇ ಅವರೂ ತಮ್ಮ ಬಂಧುಗಳು, ಅವರ ಆರೋಗ್ಯ ದೃಷಿ ಇಟ್ಟುಕೊಂಡು ಆದಷ್ಟು ನಾಗರಿಕರು ಸ್ವಚ್ಛತೆ ಬಗ್ಗೆ ಗಮನ ಕೊಡಬೇಕು. ಪಟ್ಟಣದ ಸುಂದರ ಮತ್ತು ಅರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬ ನಾಗರಿಕರು ಸ್ವಚ್ಛತೆಯನ್ನು ರೂಢಿಸಿಕೊಂಡರೆ ಎಲ್ಲರೂ ಆರೋಗ್ಯವಾಗಿರಲು ಸಾಧ್ಯ ಎಂದರು.ಜಿಲ್ಲಾ ತರಬೇತಿ ಉಪ ಪ್ರಾಚಾರ್ಯ ಐ.ಜೆ. ಪಾಪಣ್ಣವರ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಕರ್ಜಗಿ, ಹನುಮೇಶ ಕೊಂಡಿಕೊಪ್ಪ, ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಹೊನ್ನಪ್ಪ ಶಿರಹಟ್ಟಿ, ಹಸರತ ಢಾಲಾಯತ, ಇಸಾಕ ಆದ್ರಳ್ಳಿ, ದೇವಪ್ಪ ಆಡೂರ, ಗಂಗವ್ವ ಆಲೂರ, ದಾವಲಬಿ ಮಾಚೇನಹಳ್ಳಿ, ಮುತ್ತಕ್ಕ ನಾಯ್ಕರ, ಸೌಮ್ಯ ಚವ್ಹಾಣ, ಜೆ.ಐ. ಜಾಲಿಕಟ್ಟಿ ಇತರರು ಇದ್ದರು.