ಕಾಡಾನೆಗಳ ಕಾಟ ತಪ್ಪುತ್ತಿದ್ದಂತೆ ಈಗ ಹಂದಿಗಳ ಕಾಟ ಶುರು

KannadaprabhaNewsNetwork |  
Published : Oct 21, 2024, 12:46 AM IST
20ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಗಡಿ ಗ್ರಾಮಗಳಲ್ಲಿ ಕಾಡು ಹಂದಿಗಳ ಉಪಟಳಕ್ಕೆ ಭತ್ತ ಬೆಳೆ ನಾಶವಾಗಿರುವುದು. | Kannada Prabha

ಸಾರಾಂಶ

ತಾಲೂಕಿನ ಕಾಮಸಮುದ್ರ, ಬೂದಿಕೋಟೆ ಹೋಬಳಿಯ ಗಡಿಭಾಗದ ಕಾಡಂಚಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಆನೆ, ಹಂದಿ, ಜಿಂಕೆ, ನವಿಲು ಮುಂತಾದ ಸಸ್ಯಾಹಾರಿ ಪ್ರಾಣಿಗಳ ಕಾಟ ಮೊದಲಿನಿದಲೂ ಇದೆ. ಆದರೆ, ಈಗ ರೈತರಿಗೆ ಅವುಗಳ ಕಾಟ ವಿಪರೀತವಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಿನ ಗಡಿಭಾಗದ ಕಾಡಂಚಿನ ಗ್ರಾಮಗಳಲ್ಲಿ ಇಷ್ಟು ವರ್ಷಗಳ ಕಾಲ ಕಾಡಾನೆಗಳ ಹಾವಳಿಗೆ ರೈತರು ನಲುಗಿ ಹೋಗಿದ್ದರು. ಇತ್ತೀಚೆಗೆ ಅವುಗಳ ನಿಯಂತ್ರಣದಿಂದಾಗಿ ರೈತರು ಸ್ವಲ್ಪ ನೆಮ್ಮದಿಯಾಗಿದ್ದರು. ಆದರೆ ಈಗ ಕಾಡು ಹಂದಿಗಳು ಉಪಟಳ ಆರಂಭವಾಗಿದ್ದು ರೈತರ ನೆಮ್ಮದಿಗೆಡಿಸಿವೆ.

ತಾಲೂಕಿನ ಕಾಮಸಮುದ್ರ, ಬೂದಿಕೋಟೆ ಹೋಬಳಿಯ ಗಡಿಭಾಗದ ಕಾಡಂಚಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಆನೆ, ಹಂದಿ, ಜಿಂಕೆ, ನವಿಲು ಮುಂತಾದ ಸಸ್ಯಾಹಾರಿ ಪ್ರಾಣಿಗಳ ಕಾಟ ಮೊದಲಿನಿದಲೂ ಇದೆ. ಆದರೆ, ಈಗ ಅವುಗಳ ಕಾಟ ವಿಪರೀತವಾಗಿದೆ.

ವಿವಿಧ ಗ್ರಾಮಗಳಲ್ಲಿ ಸಂಕಷ್ಟ

ತಾಲೂಕಿನಾದ್ಯಂತ ಅರಣ್ಯಕ್ಕೆ ಹೊಂದಿಕೊಂಡಂತಿರುವ ತಳೂರು, ಬತ್ತಲಹಳ್ಳಿ , ಮಲ್ಲೇಶಪಾಳ್ಯ,ಕದಿರಿನತ್ತ, ಸಾಕರಸನಹಳ್ಳಿ, ಕುಂದರಸನಹಳ್ಳಿ, ಪೋಲೆನಹಳ್ಳಿ, ಬೋಗ್ಗಲಹಳ್ಳಿ, ದೋಣಿಮಡಗು, ಕೀರುಮಂದೆ, ಚಾಮನಹಳ್ಳಿ, ಡ್ಡಪನ್ನಾಂಡಹಳ್ಳಿ, ಬೋಡಪಟ್ಟಿ, ಚತ್ತಗುಟ್ಟಹಳ್ಳಿ,ಕನಮನಹಳ್ಳಿ,ದೇವರಗುಟ್ಲಹಳ್ಳಿ, ಗುಲ್ಲಹಳ್ಳಿ, ಮೂತುನೂರು, ದಿನ್ನೂರು, ಚಿಕ್ಕಪುರ, ಬೋಪ್ಪನಹಳ್ಳಿ, ಬಲಮಂದೆ, ಪಲಮಡಗು, ಯರಗೋಳ, ಯಳೇಸಂದ್ರ, ಗ್ರಾಮಗಳಲ್ಲಿ ಹಂದಿಗಳ ಉಪಟಳ ಮಿತಿಮೀರಿದೆ.

ಈ ಭಾಗದಲ್ಲಿ ರೈತರು ಭತ್ತ, ಟೊಮೆಟೋ, ರಾಗಿ,ಆಲೂಗಡ್ಡೆ, ಬೀನ್ಸ್, ಮುಸುಕಿನ ಜೋಳ, ಬದನೆಕಾಯಿ, ನೆಲಗಡಲೆ ಸೇರಿದಂತೆ ವಿವಿಧ ಬೆಳೆ, ತರಕಾರಿಗಳನ್ನು ಬೆಳೆಯುತ್ತಾರೆ. ಇವೆಲ್ಲವೂ ಹಂದಿಗಳ ದಾಳಿಗೆ ಸಿಕ್ಕಿ ಬೆಳೆಗಾರರಿಗೆ ನಷ್ಟ ಉಂಟು ಮಾಡುತ್ತಿವೆ. ಹಂದಿಗಳಿಂದ ಬೆಳೆ ಹಾನಿಯಾದರೆ ಅರಣ್ಯ ಇಲಾಖೆ ಪರಿಹಾರವನ್ನೂ ನೀಡುವುದಿಲ್ಲ. ಇದರಿಂದಾಗಿ ರೈತರು ಕೃಷಿ ಮಾಡುವುದಕ್ಕೆ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಡಂಚಿನ ಗ್ರಾಮಗಳಲ್ಲಿ ಮಳೆಯ ಸಂದರ್ಭದಲ್ಲಂತೂ ಜಮೀನಿನಲ್ಲಿ ಬಿತ್ತನೆ ಮಾಡಿದ ಯಾವ ಬೆಳೆಗಳು ಕೈ ಸೇರುವುದಿಲ್ಲ. ಹಂದಿಗಳು ಜಮೀನನ್ನೇ ಉಳುಮೆ ಮಾಡಿದಂತೆ ಬಗೆದು ಹಾಕುತ್ತವೆ. ಕೆಲ ಬೆಳೆಗಳನ್ನು ಹಂದಿಗಳು ತಿನ್ನದಿದ್ದರೂ, ನೆಲವನ್ನು ಅಗೆದು ಹಾಕುತ್ತವೆ. ಒಮ್ಮೆ ಹಂದಿಗಳ ಹಿಂಡು ದಾಳಿ ಮಾಡಿದರೆ, ಒಂದು ಆನೆಯಿಂದ ಆಗುವ ಹತ್ತರಷ್ಟು ಬೆಳೆ ನಾಶ ವಾಗುತ್ತದೆ ಎಂಬುದು ರೈತರ ವಾದವಾಗಿದೆ.ಕೋಟ್............ಹಂದಿಗಳಿಂದ ಬೆಳೆ ನಾಶವಾಗುತ್ತಿರುವ ಬಗ್ಗೆ ರೈತರಿಂದ ಹೆಚ್ಚು ದೂರು ಬರುತ್ತಿವೆ. ಹುಲಿ, ಆನೆ ಇತರೆ ಪ್ರಾಣಿಗಳಿಂದ ಬೆಳೆ, ಪ್ರಾಣ ಹಾನಿ ಸಂಭವಿಸಿದರೆ ಪರಿಹಾರ ನೀಡುವುದಕ್ಕೆ ಅವಕಾಶ ಇದೆ. ಆದರೆ, ಹಂದಿಗಳಿಂದ ಬೆಳೆ ನಷ್ಟವಾಗಿದ್ದರೆ ಪರಿಹಾರ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ.----ಶ್ರೀಲಕ್ಷ್ಮೀ, ಆರ್‌ಫ್‌ಒ, ಬಂಗಾರಪೇಟೆ.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ