ಕನ್ನಡಪ್ರಭ ವಾರ್ತೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ತುಳಸಿಕೆರೆ ಗ್ರಾಮದಲ್ಲಿ 170ಕ್ಕೂ ಹೆಚ್ಚು ಕುಟುಂಬಗಳಿದ್ದು 1000 ಜನಸಂಖ್ಯೆ ಹೊಂದಿರುವ ಕುಗ್ರಾಮದಲ್ಲಿ ಸೋಲಾರ್ ವಿದ್ಯುತ್ ಪ್ಲಾಂಟ್ ಕೆಟ್ಟು ನಿಂತಿದ್ದು ಗ್ರಾಮಸ್ಥರು ಕಗ್ಗತ್ತಲಿನಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ತಿಂಗಳಿನಿಂದ ಗ್ರಾಮಸ್ಥರು ಸಂಬಂಧ ಪಟ್ಟ ಚೆಸ್ಕಾಂ ಜನಪ್ರತಿನಿಧಿಗಳು ಹಾಗೂ ಗ್ರಾಪಂ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ದುರಸ್ತಿಗೆ ಮುಂದಾಗದೆ ಇರುವುದರಿಂದ ಬೇಸತ್ತ ಗ್ರಾಮಸ್ಥರಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ.ಮಾಜಿ ಗ್ರಾಪಂ ಸದಸ್ಯ ಕೆಂಪಯ್ಯ ಮಾತನಾಡಿ, ಗ್ರಾಮದಲ್ಲಿ ತಲತಲಾಂತರದಿಂದ ಗ್ರಾಮಸ್ಥರು ವಾಸಿಸುತ್ತಿದ್ದಾರೆ. ಮಲೆಮಹದೇಶ್ವರ ಬೆಟ್ಟ ದೇವಸ್ಥಾನದಿಂದ 3 ಕಿ.ಮೀ ದೂರದಲ್ಲಿ ಗ್ರಾಮ ಇದೆ. ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಜನ ಪ್ರತಿನಿಧಿಗಳು ಸಹ ಇತ್ತ ಗಮನ ಹರಿಸದೆ ಗ್ರಾಮವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಪೊಳ್ಳು ಆಶ್ವಾಸನೆ:
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಮೀಪದ ಇಂಡಿಗನತ್ತ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ನಡೆದಂತಹ ಗಲಭೆಯಿಂದ ಈ ಭಾಗದಲ್ಲಿ ನಡೆಯುತ್ತಿದ್ದ ಚುನಾವಣಾ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಗ್ರಾಮಗಳಿಗೆ ಭೇಟಿ ನೀಡಿ ಚುನಾವಣೆಯಲ್ಲಿ ಭಾಗವಹಿಸಿ ಚುನಾವಣೆ ಮುಗಿದ ತಕ್ಷಣ ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಸುಳ್ಳು ಆಶ್ವಾಸನೆಯ ಭರವಸೆ ನೀಡಿದ್ದರು. ಸೋಲಾರ್ ವಿದ್ಯುತ್ ಪ್ಲಾಂಟ್ ಕಳೆದ ಒಂದು ತಿಂಗಳಿನಿಂದ ಕೆಟ್ಟು ನಿಂತಿದ್ದರೂ ಸರಿಪಡಿಸಲಿಲ್ಲ, ರಾತ್ರಿ ವೇಳೆ ಗ್ರಾಮದ ಮನೆಗಳಿಗೆ ಕಾಡು ಪ್ರಾಣಿಗಳು ವಿಷ ಜಂತುಗಳು ಬರುತ್ತಿವೆ. ಹೀಗಾಗಿ ಗ್ರಾಮದಲ್ಲಿ ವಾಸಿಸುವ ನಾವು ಹಳ್ಳದ ನೀರು ಕೊಳ್ಳಿ ಬೆಳಕಿನಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಹ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಲ್ಯಾಪ್ಟಾಪ್‌ನಲ್ಲಿ ಓದಲು ಆಗದೆ ಬರೆಯಲು ಆಗದೆ ತಡಪಡಿಸುತ್ತಿದ್ದಾರೆ. ವಯಸ್ಸಾದ ವೃದ್ಧರು ಮತ್ತು ಇಲ್ಲಿನ ಹೆಣ್ಣು ಮಕ್ಕಳು ತುಂಬಾ ಕಷ್ಟಪಡುತ್ತಿರುವುದನ್ನು ಸಂಬಂಧಿಸಿದ ಜನಪ್ರತಿನಿಧಿ ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯ ವಹಿಸಿರುವುದರಿಂದ ಇಂದು ಗ್ರಾಮದಲ್ಲಿ ಕಗ್ಗತ್ತಲ್ಲಿ ಕಾಲಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಪ್ರತಿಭಟನೆಯ ಎಚ್ಚರಿಕೆ:
ಗ್ರಾಮದಲ್ಲಿರುವ ವಿದ್ಯುತ್ ಸೋಲಾರ್ ಪ್ಲಾಂಟ್ ಕೆಟ್ಟು ತಿಂಗಳು ಕಳೆದರೂ ಸಂಬಂಧಿಸಿದ ಚೆಸ್ಕಾಂ ಅಧಿಕಾರಿಗಳಾಗಲಿ ಯಾವುದೇ ಇಲಾಖೆ ಅಧಿಕಾರಿಗಳಾಗಲಿ ಗ್ರಾಮಕ್ಕೆ ತೆರಳಿ ಇಲ್ಲಿನ ಕಾಡಿನ ಮಕ್ಕಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸದೆ ಇರುವುದರಿಂದ ಗ್ರಾಮಸ್ಥರು ಒಕ್ಕೊರಲಾಗಿ ಪೊಲೀಸ್ ಠಾಣೆಗೆ ದೂರು ನೀಡಿ ನಮಗೆ ರಕ್ಷಣೆ ನೀಡುವಂತೆ ಸಂಬಂಧಪಟ್ಟ ಚಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.ವಿದ್ಯುತ್ ಸೋಲಾರ್ ಪ್ಲಾಂಟ್‌ನ್ನು ದುರಸ್ತಿ ಪಡಿಸಲು ಈಗಾಗಲೇ ಸಂಬಂಧಪಟ್ಟ ಗುತ್ತಿಗೆದಾರರ ಜೊತೆ ಮಾತನಾಡಿದ್ದೇವೆ. ಒಂದೆರಡು ದಿನದಲ್ಲಿ ದುರಸ್ತಿಪಡಿಸಿ ಗ್ರಾಮಸ್ಥರಿಗೆ ಸೋಲಾರ್ ವಿದ್ಯುತ್ ನೀಡಲು ಕ್ರಮ ವಹಿಸಲಾಗುವುದು.ಶಂಕರ್ ಎಇಇ, ಹನೂರು ಚೆಸ್ಕಾಂ, ಉಪ ವಿಭಾಗ.