ಕನ್ನಡಪ್ರಭವಾರ್ತೆ ಚಿತ್ರದುರ್ಗ
ಕನಿಷ್ಠ ವೇತನ ಹದಿನೈದು ಸಾವಿರ ರುಪಾಯಿ ನಿಗದಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯರ್ತೆಯರು ಶುಕ್ರವಾರ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದರು.ನಗರದ ಗಾಂಧಿ ವೃತ್ತದಿಂದ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು, ಅಂಬೇಡ್ಕರ್ ಸರ್ಕಲ್, ಮದಕರಿನಾಯಕ ಸರ್ಕಲ್ ಮೂಲಕ ಸಾಗಿ ಜಿಲ್ಲಾ ಪಂಚಾಯಿತಿಗೆ ಕಚೇರಿಗೆ ಮುತ್ತಿಗೆ ಹಾಕಿದರು. ಉರಿ ಬಿಸಿಲು ಲೆಕ್ಕಿಸದೆ ಸುಡುವ ರಸ್ತೆ ಮೇಲೆ ಕಾರ್ಯಕರ್ತೆಯರು ಹೆಜ್ಜೆ ಹಾಕಿದ್ದು ವಿಶೇಷವಾಗಿ ಕಂಡಿತು.
ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತಿನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಘಟಕ ರವಿಕುಮಾರ್, ಅತ್ಯಂತ ಕಡಿಮೆ ಸಂಭಾವನೆ ನೀಡಿ ಆಶಾ ಕಾರ್ಯಕರ್ತೆಯರ ದುಡಿಸಿಕೊಳ್ಳಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳ ಪ್ರಚಾರ ಹಾಗೂ ಕಾಳಜಿ ರಾಯಭಾರಿಗಳಾಗಿ ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಯೋಗಕ್ಷೇಮ ನೋಡಿಕೊಳ್ಳುವುದು, ಜೀವನ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯವೆಂದರು.ಕನಿಷ್ಠ 15 ಸಾವಿರ ರುಪಾಯಿ ವೇತನ ನಿಗಧಿಯಾಗಬೇಕು ಹಾಗೂ ಆರ್‍ಸಿಎಚ್ ಪೋರ್ಟಲ್ ಮೂಲಕ ನೀಡುವ ವೇತನ ಮಾದರಿ ಬದಲಾಯಿಸಿ ದುಡಿದಷ್ಟು ಸಂಪೂರ್ಣ ವೇತನ ನೀಡಬೇಕು. ಸರ್ಕಾರಿ ನೌಕರರಿಗೆ ಇರುವ ಸೌಲಭ್ಯ ವಿಸ್ತರಿಸಬೇಕೆಂದು ವಿನಂತಿಸಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಜನಸಾಮಾನ್ಯರು ಹಾಗೂ ಆರೋಗ್ಯ ಇಲಾಖೆ ಕೊಂಡಿ. ಆರೋಗ್ಯ ಸೇವೆ ಅತ್ಯಂತ ನಿಷ್ಠೆಯಿಂದ ನೀಡುತ್ತಿದ್ದಾರೆ. ಆದರೆ ಇಲಾಖೆಯಿಂದ ಇವರಿಗೆ ಪ್ರೋತ್ಸಾಹಧನ ಸಂಪೂರ್ಣವಾಗಿ ಬರದೆ ನಷ್ಟ ಅನುಭವಿಸುತ್ತಿದ್ದಾರೆ. ಸಮಸ್ಯೆ ಪರಿಹಾರಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೊತ್ತ ಸೇರಿಸಿ ಕನಿಷ್ಠ 15000 ವೇತನ ನಿಗದಿಯಾಗಲೇಬೇಕು ಎಂದು ಅಗ್ರಹಿಸಿದರು.ಸಂಘಟನೆ ಜಿಲ್ಲಾ ಅಧ್ಯಕ್ಷೆ ಗಿರಿಜಮ್ಮ, ಗುರುಶಾಂತ, ಕುಮುದಾ, ಸುಜಾತಾ ಪ್ರತಿಭಟನೆ ನೇತೃತ್ವ ವಹಿಸಿದ್ದರು. ನಂತರ ಉಪಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.