ಗೃಹ ಮಂತ್ರಿ ಸೂಚನೆಯಂತೆ ಬಿಜೆಪಿಗರ ಮೇಲೆ ದಾಳಿ ಶಂಕೆ

KannadaprabhaNewsNetwork |  
Published : Jul 25, 2026, 01:45 AM IST
ಪೋಟೋ: 24ಎಸ್‌ಎಂಜಿಕೆಪಿ06ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಶಿವಮೊಗ್ಗ ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಮೇಲೆ ಹಾಗೂ ಶಿವಮೊಗ್ಗದಲ್ಲಿ ಬಿಜೆಪಿ ಕಚೇರಿ ಮೇಲೆ ನಡೆದ ದಾಳಿ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆಯಂತೆ ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಮೇಲೆ ಹಾಗೂ ಶಿವಮೊಗ್ಗದಲ್ಲಿ ಬಿಜೆಪಿ ಕಚೇರಿ ಮೇಲೆ ನಡೆದ ದಾಳಿ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆಯಂತೆ ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆರೋಪ ಮಾಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಬಿಜೆಪಿ ಶಾಸಕರು ಹಾಗೂ ನಾಯಕರನ್ನು ವಶಕ್ಕೆ ಪಡೆದಿದ್ದರು. ಆದರೆ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಬದಲು ಕಾಂಗ್ರೆಸ್ ಕಚೇರಿ ಎದುರು ಬಸ್ ನಿಲ್ಲಿಸಿರುವುದು ಉದ್ದೇಶಪೂರ್ವಕ ಕ್ರಮ ಎಂದು ಆರೋಪಿಸಿದರು. ನಮ್ಮನ್ನು ಎಂಜಿ ರಸ್ತೆ ಅಥವಾ ಬೇರೆ ಪೊಲೀಸ್ ಠಾಣೆಗೆ ಕರೆದೊಯ್ಯಬಹುದಿತ್ತು. ಆದರೆ ಕಾಂಗ್ರೆಸ್ ಕಚೇರಿ ಎದುರು ಬಸ್ ನಿಲ್ಲಿಸಿದ ಪರಿಣಾಮ ಅಲ್ಲಿದ್ದ ಕಾರ್ಯಕರ್ತರು ಬಸ್ ಮೇಲೆ ದಾಳಿ ನಡೆಸಲು ಮುಂದಾದರು. ಬಿಜೆಪಿ ಶಾಸಕರ ಮೇಲೆ ಮೊಟ್ಟೆ ತೂರಲಾಯಿತು. ಲಾಠಿಯಿಂದ ಬಸ್‌ಗೆ ಹೊಡೆದರು. ನನ್ನ ಕಣ್ಣೆದುರೇ ಕೆಲವರ ಮೇಲೆ ಹಲ್ಲೆ ನಡೆಸಿದರು. ಕೆಲವರ ಬಟ್ಟೆ ಹರಿದು ಗಾಯಗಳಾದವು. ನಾವು ಆಗ ಪೊಲೀಸ್ ಬಂಧನದಲ್ಲಿದ್ದೆವು. ಬಂಧನದಲ್ಲಿದ್ದವರಿಗೆ ರಕ್ಷಣೆ ನೀಡುವುದೂ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲವೇ? ಎಂದು ಪ್ರಶ್ನಿಸಿದರು.

ಒಂದು ವೇಳೆ ನಾವು ಇದ್ದ ಬಸ್‌ಗೆ ಬೆಂಕಿ ಬಿದ್ದಿದ್ದರೆ ರಾಜ್ಯದ ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರ ಜೀವಕ್ಕೆ ಅಪಾಯವಾಗುತ್ತಿತ್ತು. ಆಗ ಅದರ ಹೊಣೆ ಯಾರು ಹೊರುತ್ತಿದ್ದರು? ಗೃಹ ಸಚಿವರು ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿತ್ತು ಎಂದು ಟೀಕಿಸಿದರು.

ಬೆಂಗಳೂರು ಬಳಿಕ ಶಿವಮೊಗ್ಗ:

ಬೆಂಗಳೂರಿನಲ್ಲಿ ನಡೆದ ರೀತಿಯೇ ಶಿವಮೊಗ್ಗದಲ್ಲಿ ಘಟನೆ ನಡೆದಿದೆ. ಬಿಜೆಪಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಲಾಗಿದೆ. ಇದು ಪೊಲೀಸರ ವೈಫಲ್ಯ ಅಲ್ಲವೇ. ಪೊಲೀಸರು ನಡೆದುಕೊಂಡ ರೀತಿ ಗಮನಿಸಿದರೆ ಇದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆಯಂತೆ ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಕಚೇರಿಯ ಬಳಿ ಒಂದು ರೀತಿಯ ಭದ್ರತೆ, ಬಿಜೆಪಿ ಕಚೇರಿ ಬಳಿ ಮತ್ತೊಂದು ರೀತಿಯ ವ್ಯವಸ್ಥೆ ಮಾಡಲಾಗಿದೆ. ಗೊಂದಲ ಉಂಟಾಗುವ ಸ್ಥಳದಲ್ಲಿ ಸಮರ್ಪಕ ಬ್ಯಾರಿಕೇಡ್ ಹಾಕದೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಹಲವು ಬಾರಿ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ. ಆದರೆ, ನಾವು ಯಾವತ್ತೂ ಪ್ರತೀಕಾರದ ರಾಜಕಾರಣ ಮಾಡಿಲ್ಲ. ಕಾನೂನು ಪ್ರಕಾರ ಅನುಮತಿ ಪಡೆದು ಪ್ರತಿಭಟನೆ ನಡೆಸಿದ್ದೇವೆ. ಪೊಲೀಸರು ಕೂಡ ಗಲಾಟೆಯಾಗಬಹುದು ಎಂದು ಮುಂಚೆಯೇ ಹೇಳಿದ್ದರು. ಆದರೂ ಪರಿಸ್ಥಿತಿ ನಿಯಂತ್ರಿಸಲು ವಿಫಲರಾದರು ಎಂದರು.

ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಉದ್ವಿಗ್ನ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿ ಅಧಿಕಾರದ ಗದ್ದುಗೆ ಮೇಲೆ ಕೂರಬೇಕು ಎಂಬ ನಿರ್ಧಾರವನ್ನು ಕಾಂಗ್ರೆಸ್ ಮಾಡಿದೆ. ಬೆಂಕಿ ಹಚ್ಚುವ ರಾಜಕೀಯವೇ ಕಾಂಗ್ರೆಸ್ಸಿನ ಧೋರಣೆಯಾಗಿದೆ. ಶಿವಮೊಗ್ಗ ಮತ್ತು ಬೆಂಗಳೂರಿನ ಈ ಘಟನೆಗಳ ಬಗ್ಗೆ ಸರ್ಕಾರ ಮತ್ತು ಗೃಹ ಸಚಿವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಹರಿಕೃಷ್ಣ, ದೀನ್‌ದಯಾಳ್, ನವುಲೆ ಮಂಜುನಾಥ್, ಎನ್.ಜೆ. ನಾಗರಾಜ್, ವಿಶ್ವನಾಥ್, ಶ್ರೀನಾಗ್, ಎನ್. ಮಂಜುನಾಥ್, ಎಸ್. ಚಂದ್ರಶೇಖರ್ ಇದ್ದರು.

-----------------------

ಬಾಕ್ಸ್‌...

ಜಿಲ್ಲೆಯಲ್ಲಿ ಎಸ್‌ಐಆರ್‌ ಯಶಸ್ಸಿಗೆ

ಇಂದು, ನಾಳೆ ಬಿಜೆಪಿ ಅಭಿಯಾನ

ಶಿವಮೊಗ್ಗ: ಎಸ್‌ಐಆರ್ (ಮತಪಟ್ಟಿ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಜಿಲ್ಲೆಯಲ್ಲಿ ಬಿಜೆಪಿ ಜು.25 ಮತ್ತು 26 ರಂದು ಹಮ್ಮಿಕೊಂಡಿರುವ ಮಹಾ ಸಂಪರ್ಕ ಅಭಿಯಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವತಿಯಿಂದ ಜಿಲ್ಲೆಯ ಎಲ್ಲಾ 1793 ಮತಗಟ್ಟೆಗಳಲ್ಲಿ ಎಸ್‌ಐಆರ್ ಯಶಸ್ವಿಗೊಳ್ಳಲು ಬಿಎಲ್‌ಎಗಳ ಟೋಳಿ ರಚಿಸಲಾಗಿದೆ. ಬೂತ್‌ಗೆ ಒಂದರಂತೆ 12 ಜನರ ತಂಡ ರಚಿಸಲಾಗಿದೆ. ಜಿಲ್ಲೆಯಲ್ಲಿ 2,77,000 ಮತದಾರರ ಪರಿಷ್ಕರಣೆಯ ಗುರಿ ಹೊಂದಲಾಗಿದ್ದು, ಈಗಾಗಲೇ 1,99,000 ಮತದಾರರ ಪರಿಷ್ಕರಣೆ ಪೂರ್ಣಗೊಂಡಿದೆ. ಜುಲೈ 25-26 ರಂದು ಜಿಲ್ಲೆಯ ಸಂಸದರು, ಹಾಲಿ ಮತ್ತು ಮಾಜಿ ಶಾಸಕರು, ಜನಪ್ರತಿನಿಧಿಗಳು ಪ್ರತ್ಯಕ್ಷವಾಗಿ ಮನೆ ಮನೆಗೆ ತೆರಳಿ ಅಭಿಯಾನದ ಜಾಗೃತಿ ಮೂಡಿಸಲಿದ್ದಾರೆ ಎಂದರು.

ಜಿಲ್ಲಾದ್ಯಂತ ಪಕ್ಷದ 21,608 ಕಾರ್ಯಕರ್ತರು, ಮುಖಂಡರು, ಈ ಅಭಿಯಾನದಂದು ಬೆಳಗ್ಗೆ 25 ಮನೆ, ಸಂಜೆ 25 ಮನೆ ಹೀಗೆ ಮನೆ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಶಿವಮೊಗ್ಗ ನಗರವೊಂದರಲ್ಲೇ 3120 ಕಾರ್ಯಕರ್ತರು ಈ ಬೃಹತ್ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ. ಅಭಿಯಾನದ ಎರಡು ದಿನಗಳಲ್ಲೇ ಜಿಲ್ಲೆಯ 1,43,800 ಮನೆಗಳನ್ನು ನೇರವಾಗಿ ಸಂಪರ್ಕಿಸುವುದರ ಮೂಲಕ ರಾಜ್ಯಾದ್ಯಂತ ಸುಮಾರು 1 ಕೋಟಿ ಮನೆಗಳ ಮಹಾ ಸಂಪರ್ಕ ಅಭಿಯಾನ ನಡೆಯಲಿದೆ ಎಂದ ಅವರು, ಈಗಾಗಲೇ ಫಾರಂ ಭರ್ತಿಮಾಡಿಕೊಟ್ಟ ಮನೆಗಳಿಗೆ ಧನ್ಯವಾದ ಸಲ್ಲಿಸುವುದು ಹಾಗೂ ಫಾರಂ ತಲುಪದ ಮನೆಗಳಿಗೆ ಬಿಎಲ್‌ಎ-2/ಬಿಎಲ್‌ಓಗಳ ಮೂಲಕ ತಕ್ಷಣವೇ ಫಾರಂ ತಲುಪಿಸಿ, ಭರ್ತಿಮಾಡಿ, ವಾಪಸ್ ತರುವ ಜವಾಬ್ದಾರಿಯನ್ನು ಕಾರ್ಯಕರ್ತರು ಮಾಡಲಿದ್ದಾರೆ ಎಂದರು.

ಪ್ರಧಾನಿ ಮೋದಿಯವರ 136ನೇ ಮನ್ ಕೀ ಬಾತ್ ಕಾರ್ಯಕ್ರಮ ಭಾನುವಾರ ಆಕಾಶವಾಣಿ ಮೂಲಕ ನೇರ ಪ್ರಸಾರವಾಗಲಿದ್ದು, ಅದನ್ನು ಈ ಬಾರಿ ಶಿವಮೊಗ್ಗದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವುದು. ನಗರದ ಡಾ.ಬಿ.ಆರ್.ಅಂಬೇಡ್ಕರ್ (ಜೈಲ್ ಸರ್ಕಲ್)ವೃತ್ತದಲ್ಲಿ ಇರುವ ದೈವಜ್ಞ ಕಲ್ಯಾಣ ಮಂದಿರದಲ್ಲಿ ಬೆಳಗ್ಗೆ 10.30 ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, 11 ಗಂಟೆಗೆ ನೇರ ಪ್ರಸಾರ ವೀಕ್ಷಣೆ ಮಾಡಲಾಗುತ್ತದೆ. ಇದರಲ್ಲಿ ಸಮಾಜದ ಎಲ್ಲಾ ಸ್ತರದ ಸುಮಾರು 300 ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ ಎಂದರು.

----------------

ಪೋಟೋ: 24ಎಸ್‌ಎಂಜಿಕೆಪಿ06

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈಬರ್ ಅಪರಾಧಗಳ ಬಗ್ಗೆ ಮಹಿಳೆಯರು ಜಾಗೃತರಾಗಿರಿ
ಮೆದುಳಿನ ಕಾಯಿಲೆಗಳಿಗೆ ಹಾಸನದಲ್ಲೇ ಪರಿಣತ ಚಿಕಿತ್ಸೆ ಲಭ್ಯ