ತಪ್ಪಿಸಿಕೊಳ್ಳಲು ಯತ್ನ: ಆರೋಪಿ ಕಾಲಿಗೆ ಸಿಪಿಐ ಗುಂಡು

KannadaprabhaNewsNetwork | Published : Mar 28, 2025 12:31 AM

ಸಾರಾಂಶ

ಚರ್ಚ್, ದೇವಸ್ಥಾನ, ಮನೆಗಳಲ್ಲಿ ಕಳವು, ಸರಗಳವು, ಹಲ್ಲೆ, ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮಹಜರ್‌ಗೆ ಕರೆದೊಯ್ದಿದ್ದ ವೇಳೆ ಪೊಲೀಸರ ಮೇಲೆ ದಾಳಿ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಣಕ್ಕೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ತಾಲೂಕಿನ ತೋಳಹುಣಸೆ ಗ್ರಾಮದ ಬಳಿ ಸಂಭವಿಸಿದೆ.

- ಮಹಜರ್‌ಗೆ ಕರೆದೊಯ್ದಿದ್ದಾಗ ಓಡಿಹೋಗಲು ಯತ್ನಿಸಿದ ತುಮಕೂರು ಜಿಲ್ಲೆ ಗೊಲ್ಲರಹಳ್ಳಿಯ ನವೀನ

- ಕಲ್ಲು ಮತ್ತಿತರೆ ವಸ್ತು ತೂರಿದ್ದರಿಂದ ಸಿಪಿಐ ಶಿಲ್ಪಾ, ಪೇದೆ ಚಂದ್ರಶೇಖರ್‌ಗೆ ಗಾಯ

- ಗುಂಡೇಟು ತಿಂದ ನವೀನ, ಸಿಪಿಐ ಶಿಲ್ಪ, ಪೇದೆ ಚಂದ್ರುಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಚರ್ಚ್, ದೇವಸ್ಥಾನ, ಮನೆಗಳಲ್ಲಿ ಕಳವು, ಸರಗಳವು, ಹಲ್ಲೆ, ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮಹಜರ್‌ಗೆ ಕರೆದೊಯ್ದಿದ್ದ ವೇಳೆ ಪೊಲೀಸರ ಮೇಲೆ ದಾಳಿ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಣಕ್ಕೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ತಾಲೂಕಿನ ತೋಳಹುಣಸೆ ಗ್ರಾಮದ ಬಳಿ ಸಂಭವಿಸಿದೆ.

ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿ ಪುರಲಗುಂಟೆ ಗೊಲ್ಲರಹಳ್ಳಿ ಗ್ರಾಮದ ಜಿ.ಎಸ್.ನವೀನಕುಮಾರ ಅಲಿಯಾಸ್‌ ಅಣ್ಣಾ ಬಾಂಡ್ ನವೀನ್‌ (33) ಪೊಲೀಸರ ಗುಂಡೇಟು ತಿಂದ ಆರೋಪಿ. ವಿದ್ಯಾನಗರ ವೃತ್ತ ನಿರೀಕ್ಷಕಿ ಶಿಲ್ಪ ನೇತೃತ್ವದ ತಂಡವು ಮಹಜರ್‌ಗೆ ಕರೆದೊಯ್ದಿತ್ತು. ವಾಪಸ್‌ ಬರುವಾಗ ಆರೋಪಿಯು ಬಹಿರ್ದೆಸೆಗೆ ಹೋಗಬೇಕೆಂದು ಹೇಳಿ ವಾಹನದಿಂದ ಕೆಳಗಿಳಿದವನು ಓಡಿಹೋಗಲು ಯತ್ನಿಸಿದ್ದಾನೆ. ಈ ವೇಳೆ ಕೈಗೆ ಸಿಕ್ಕ ಕಲ್ಲು ಇತರೆ ವಸ್ತುಗಳಿಂದ ಪೊಲೀಸರ ಮೇಲೆ ದಾಳಿ ಸಹ ಮಾಡಿದ್ದಾನೆ.

ಘಟನೆಯಲ್ಲಿ ಸಿಪಿಐ ಶಿಲ್ಪ ಹಾಗೂ ಕಾನ್‌ಸ್ಟೇಬಲ್ ಚಂದ್ರಶೇಖರ್‌ಗೆ ಪೆಟ್ಟಾಗಿದೆ. ತಕ್ಷಣವೇ ಸಿಪಿಐ ಶಿಲ್ಪ ಗಾಳಿಯಲ್ಲಿ ಗುಂಡು ಹಾರಿಸಿ, ಶರಣಾಗುವಂತೆ ಆರೋಪಿ ನವೀನಗೆ ಎಚ್ಚರಿಸಿದ್ದಾರೆ. ಅದಕ್ಕೆ ಕಿವಿಗೊಡದ ಆರೋಪಿ ಓಡುತ್ತಲೇ, ಕಲ್ಲು ತೂರಾಟ ನಡೆಸಿದ್ದರಿಂದ ಸಿಪಿಐ ಶಿಲ್ಪ ಆರೋಪಿಯ ಕಾಲಿಗೆ ಗುಂಡು ಹಾರಿಸಿದರು. ತಕ್ಷಣವೇ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದರು. ಗಾಯಗೊಂಡ ಸಿಪಿಐ ಶಿಲ್ಪ, ಕಾನ್‌ಸ್ಟೇಬಲ್ ಚಂದ್ರು ಹಾಗೂ ಆರೋಪಿ ನವೀನ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿಯನ್ನು ದಾಖಲು ಮಾಡಲಾಗಿದೆ.

ಸದ್ಯ ದಾವಣಗೆರೆ ತಾ. ಮಾಯಕೊಂಡ ಹೋಬಳಿ ಅತ್ತಿಗೆರೆ ಗ್ರಾಮದಲ್ಲಿ ವಾಸವಾಗಿದ್ದ ಆರೋಪಿ ನವೀನ್‌ ಸುಮಾರು 54 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ದಾವಣಗೆರೆ ವಿದ್ಯಾನಗರ ಪೊಲೀಸರ ವಿಚಾರಣೆಯಿಂದ 2023ರಿಂದ ಈವರಗೆ ಒಟ್ಟು 11 ಗಂಭೀರ ಪ್ರಕರಣದಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದ.

15 ದಿನದೊಳಗೆ 2ನೇ ಸಲ ಫೈರಿಂಗ್‌:

ದಾವಣಗೆರೆ ಜಿಲ್ಲೆಯ ಪೊಲೀಸರು 15 ದಿನಗಳ ಅವಧಿಯಲ್ಲಿ 2ನೇ ಸಲ ಫೈರಿಂಗ್ ಮಾಡಿರುವುದು ಗಮನಾರ್ಹ. ನ್ಯಾಮತಿ ಠಾಣೆ ಪೊಲೀಸರು ಮಾ.17ರಂದು ಉತ್ತರ ಪ್ರದೇಶ ಮೂಲದ ಬ್ಯಾಂಕ್‌ ದರೋಡೆಕೋರರನ್ನು ಬಂಧಿಸಲು ಹೋದಾಗ ದಾಳಿಗೆ ಮುಂದಾಗಿದ್ದ ಓರ್ವ ದರೋಡೆಕೋರನ ಮೇಲೆ ಗುಂಡು ಹಾರಿಸಿದ್ದರು. ಇದೀಗ ವಿದ್ಯಾನಗರ ಪೊಲೀಸರು ಸಹ ಫೈರಿಂಗ್ ಮೂಲಕ ಕಳ್ಳರು, ದರೋಡೆಕೋರರಿಗೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.

- - -

(ಬಾಕ್ಸ್‌)

* ಗುಣಮುಖನಾದ ಬಳಿಕ ಆರೋಪಿ ಕೋರ್ಟ್‌ಗೆ: ಎಸ್‌ಪಿ

ದಾವಣಗೆರೆ: ದಾವಣಗೆರೆ ಎಸ್‌.ಎಲ್‌. ಲೇಔಟ್‌ನ ಪವನ್ ಸ್ಟೋರ್ ಹಿಂಭಾಗದಲ್ಲಿ ಒಬ್ಬಂಟಿಯಾಗಿ ವಾಸವಿದ್ದ ವೃದ್ಧೆಯ ಮನೆಗೆ ನುಗ್ಗಿ, ಹೆದರಿಸಿ, ನೀರು ತುಂಬಿಟ್ಟಿದ್ದ ತಾಮ್ರದ ಪಾತ್ರೆಯಿಂದ ತಲೆಗೆ ಹೊಡೆದು 250 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ವಸ್ತುಗಳನ್ನು ದರೋಡೆ ಮಾಡಿದ್ದ ಆರೋಪಿಯನ್ನು ವಿದ್ಯಾನಗರ ಸಿಪಿಐ ಶಿಲ್ಪ ಸ್ಥಳ ಮಹಜರ್‌ಗೆ ಕರೆದೊಯ್ದಿದ್ದ ವೇಳೆ ಪೊಲೀಸರ ಮೇಲೆ ದಾಳಿ ಮಾಡಿ, ಗುಂಡೇಟು ತಿಂತಿದ್ದಾನೆ ಎಂದು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆರೋಪಿ ನವೀನನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆತ ಗುಣಮುಖನಾದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದರು.

- - -

-27ಕೆಡಿವಿಜಿ4:

ದಾವಣಗೆರೆ ತಾಲೂಕಿನ ತೋಳಹುಣಸೆ ಬಳಿ ಆರೋಪಿ ನವೀನಕುಮಾರ ಮೇಲೆ ಫೈರಿಂಗ್ ನಡೆದ ಸ್ಥಳಕ್ಕೆ ಬುಧವಾರ ರಾತ್ರಿಯೇ ಎಸ್‌ಪಿ ಉಮಾ ಪ್ರಶಾಂತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

Share this article