ಕುಡಿವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ

KannadaprabhaNewsNetwork |  
Published : Jun 13, 2026, 01:15 AM IST
ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಸಚಿವ ಈಶ್ವರ್‌ ಖಂಡ್ರೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಮತ್ತು ಪಂಚಾಯ್ತಿ ಸೃಜಿಸಿರುವ ಎಲ್ಲ ಸರ್ಕಾರಿ ಆಸ್ತಿಗಳನ್ನು ಜಿಯೋಟ್ಯಾಗ್ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಮತ್ತು ಪಂಚಾಯ್ತಿ ಸೃಜಿಸಿರುವ ಎಲ್ಲ ಸರ್ಕಾರಿ ಆಸ್ತಿಗಳನ್ನು ಜಿಯೋಟ್ಯಾಗ್ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಬೆಂ.ಗ್ರಾ ಜಿಪಂನಲ್ಲಿ ಜಿಲ್ಲಾ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭೂಮಿಗೆ ಬಂಗಾರದ ಬೆಲೆ ಇದ್ದು, ಪಂಚಾಯ್ತಿಯ ಯಾವುದೇ ಆಸ್ತಿ ಕಬಳಿಕೆ ಆಗದಂತೆ ಮತ್ತು ಗುಣಮಟ್ಟದ ಖಾತ್ರಿಗೆ ಜಿಯೋ ಟ್ಯಾಗ್ ಮಾಡಲು ಸೂಚಿಸಿರುವುದಾಗಿ ಹೇಳಿದರು.

ರಾಜ್ಯದಲ್ಲಿ ಇಂದಿಗೂ 7483 ಶೌಚಗುಂಡಿ ಕಾರ್ಮಿಕರು (ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್) ಇದ್ದಾರೆ ಎಂದು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ನೀಡಿರುವ ಹೇಳಿಕೆ ಉಲ್ಲೇಖಿಸಿದ ಸಚಿವರು, ಯಾವುದೇ ಮಲಗುಂಡಿಯ ಸ್ವಚ್ಛತೆಯನ್ನು ಯಾವುದೇ ಕರ್ಮಚಾರಿಯ ಕೈಯಿಂದ ಮಾಡಿಸಿದರೆ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು, ಯಂತ್ರಗಳ ಮೂಲಕವೇ ಸ್ವಚ್ಛತೆ ಮಾಡಬೇಕೆಂದು ಸೂಚಿಸಲಾಗಿದ್ದು ಇದಕ್ಕಾಗಿ ಅಗತ್ಯವಿರುವ ಜೆಟ್ಟಿಂಗ್, ಸಕ್ಕಿಂಗ್ ಯಂತ್ರ ಖರೀದಿಸಲಾಗುವುದು ಎಂದರು. ತಾವು ಈ ಹಿಂದೆ ಪೌರಾಡಳಿತ ಸಚಿವರಾಗಿದ್ದಾಗ ಮಲತ್ಯಾಜ್ಯ ಸಂಸ್ಕರಣಾ ಘಟಕ (ಎಫ್‌ಎಸ್‌ಟಿಪಿ) ನಿರ್ಮಿಸಲು ಯೋಜನೆ ರೂಪಿಸಿ, ದೇವನಹಳ್ಳಿಯಲ್ಲಿ ಕೂಡ ಒಂದು ಎಫ್‌ಎಸ್‌ಟಿಪಿ ಮಾಡಿದ್ದನ್ನು ಸ್ಮರಿಸಿದ ಈಶ್ವರ ಖಂಡ್ರೆ, ಈಗ ಪಂಚಾಯ್ತಿ ಮಟ್ಟದಲ್ಲೂ ಎಫ್‌ಎಸ್‌ಟಿಪಿ ನಿರ್ಮಿಸುವುದಾಗಿ ತಿಳಿಸಿದರು.

ಯುಪಿಎ ಕಾರ್ಯಕಾಲದಲ್ಲಿ ಜಾರಿಗೆ ತಂದ ನರೇಗಾದ ಬದಲಾದ ರೂಪವಾದ ವಿಬಿ ಜೀ ರಾಮ್ ಜೀಯನ್ನು ಜುಲೈ 1ರಿಂದ ಜಾರಿ ಮಾಡಬೇಕಾಗಿದ್ದು, ಕೇಂದ್ರ ಸರ್ಕಾರ ಯೋಜನೆಯ ವೇತನಕ್ಕಾಗಿ ನೀಡುವ ಅನುದಾನವನ್ನು ಮನ್ರೇಗಾದಲ್ಲಿದ್ದ 90:10 ಅನುಪಾತದಲ್ಲಿಯೇ ನೀಡಬೇಕು. ಇಲ್ಲವೇ ಕನಿಷ್ಠ 80:20 ಅನುಪಾತಕ್ಕಾದರೂ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿರುವುದಾಗಿ ತಿಳಿಸಿದರು.

ಇದೇ ತಿಂಗಳ 28 ಮತ್ತು 29ರಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ಕರೆದಿರುವ ಸಭೆಯಲ್ಲಿ ಭಾಗಿಯಾಗಿ ಯೋಜನೆಯಡಿ ಯಾವ ಕಾಮಗಾರಿ ನಡೆಸಬೇಕು ಎನ್ನುವ ಸ್ವಾತಂತ್ರ್ಯರಾಜ್ಯಗಳಿಗೆ ಇರಬೇಕು, 60 ದಿನಗಳ ಕೆಲಸಕ್ಕೆ ನೀಡಿರುವ ಬಿಡುವು ಕೈ ಬಿಡಬೇಕು ಹಾಗೂ ಕರ್ನಾಟಕ ಈಗಾಗಲೇ ಕನಿಷ್ಠ ವೇತನ ಹೆಚ್ಚಳಕ್ಕೆ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ವಿಬಿಜೀ ರಾಮ್ ಜೀಯ ವೇತನವನ್ನು ಅದಕ್ಕೆ ಸರಿದೂಗಿಸುವ ರೀತಿಯಲ್ಲಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ಇಸ್ವತ್ತು ಪಡೆಯುವಲ್ಲಿ ಇರುವ ಸರ್ವರ್ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಪೂರ್ವಜರಿಂದ ಬಂದ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಗ್ರಾಮೀಣರ ಬಳಿ ಯಾವುದೇ ದಾಖಲೆ ಇಲ್ಲದ ಕಾರಣ ಅವರೆಲ್ಲರಿಗೂ ದಾಖಲೆಯ ವಿನಾಯಿತಿ ನೀಡಿ, ಸ್ವಾಧೀನಾನುಭವದ ಖಾತ್ರಿ ಪಡಿಸಿಕೊಂಡು ಆಸ್ತಿ ಹಕ್ಕು ನೀಡುವ ಕುರಿತಂತೆ ಪರಿಶೀಲಿಸಲಾಗುವುದು ಎಂದರು.

ವರ್ಷಾಂತ್ಯದೊಳಗೆ ಪಂಚಾಯಿತಿ ಚುನಾವಣೆ:

ಅವಧಿ ಮುಗಿದಿರುವ ಎಲ್ಲ ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ಇಲಾಖೆ ಈಗಾಗಲೇ ಕ್ರಮ ವಹಿಸಿದ್ದು, ಈ ವರ್ಷಾಂತ್ಯದೊಳಗೆ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಚುನಾವಣೆ ನಡೆದೇ ನಡೆಯುತ್ತದೆ, ಅಧಿಕಾರ ವಿಕೇಂದ್ರೀಕರಣದ ಉದ್ದೇಶವನ್ನು ಸರ್ಕಾರ ಈಡೇರಿಸುತ್ತದೆ ಎಂದರು.

ಜಲಜೀವನ ಅಭಿಯಾನದ ಅಡಿಯಲ್ಲಿ ಪೈಪ್ಲೈನ್ ಅಳವಡಿಸಲು ಅಗೆದಿರುವ ರಸ್ತೆಯನ್ನು ಮರು ಅಭಿವೃದ್ಧಿ ಪಡಿಸದೇ ಇರುವ ಕಾರಣ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಏನು ಕ್ರಮ ವಹಿಸುತ್ತೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡುವುದಾಗಿ ತಿಳಿಸಿದರು.

ನಂತರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾದ ಈಶ್ವರ ಖಂಡ್ರೆ, ನೀರಿನ ಕೊಳವೆ ಅಳವಡಿಸಲು ಅಗೆದಿರುವ ರಸ್ತೆಗಳ ಪರಿಶೀಲನೆ ನಡೆಸಿ ಸಂಚಾರಕ್ಕೆ ಅಡ್ಡಿ ಆಗದ ರೀತಿಯಲ್ಲಿ ತುರ್ತು ಕ್ರಮ ವಹಿಸಲು ಮತ್ತು ಎಷ್ಟು ಗ್ರಾಮಗಳಲ್ಲಿ ಹರ್ ಘರ್ ಜಲ್ ವರದಿ ಮಾಡಲಾಗಿದೆ. ಎಷ್ಟು ಪ್ರಮಾಣಪತ್ರ ಆಗಿದೆ ಎಂಬ ಸ್ಪಷ್ಟ ಮಾಹಿತಿ ಒದಗಿಸಲು ಸೂಚಿಸಿದರು.

ಜಲ ಜೀವನ್ ಮಿಷನ್ ಮತ್ತು ರಸ್ತೆ ಅಭಿವೃದ್ಧಿ ಸೇರಿದಂತೆ ಯಾವುದೇ ಕಾಮಗಾರಿಯಲ್ಲಿ ಯಾರೇ ಗುತ್ತಿಗೆದಾರರು ವಿಳಂಬ ಮಾಡಿದ್ದರೆ, ನೋಟಿಸ್ ಜಾರಿ ಮಾಡಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸುವಂತೆ ತಿಳಿಸಿದರು.

ಎಲ್ಲ ನಾಗರಿಕತೆಗಳೂ ಹುಟ್ಟಿರುವುದು ನದಿ ಮತ್ತು ಜಲ ಮೂಲಗಳ ತಟದಲ್ಲಿ. ಮನುಷ್ಯ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ಕುಡಿಯುವ ನೀರಿನ ಪೂರೈಗೆಕೆ ಒತ್ತು ನೀಡುವಂತೆ ಹಾಗೂ ಯಾವುದೇ ಜಲ ಮೂಲದಲ್ಲಾಗಲೀ, ಕೊಳವೆ ಮಾರ್ಗದಲ್ಲಾಗಲಿ ಕಲುಷಿತ ನೀರು ಸೋರಿಕೆ ಆಗದಂತೆ ಕಟ್ಟೆಚ್ಚರ ವಹಿಸಲು, ಸೋರಿಕೆ ಇದ್ದರೆ ಪರಿಶೀಲಿಸಿ ಎನ್ ಕೇಸಿಂಗ್ ಮಾಡುವಂತೆ ಸೂಚಿಸಿದರು.

ಕೊಳವೆ ಬಾವಿಯಿಂದ ಪೂರೈಸುವ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿ ಪ್ಲೊರೈಡ್ ಸೇರಿದಂತೆ ಯಾವುದೇ ಅಪಾಯಕಾರಿ ಅಂಶಗಳಿದ್ದರೆ ಕೂಡಲೇ ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಕಾರ್ಯದರ್ಶಿಗಳಾದ ಸಮೀರ್ ಶುಕ್ಲ, ರಂದೀಪ್, ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧಾ, ಜಿಪಂ ಸಿಇಒ ಡಾ. ವಾಸಂತಿ ಅಮರ್ ಮತ್ತಿತರರು ಪಾಲ್ಗೊಂಡಿದ್ದರು.

12ಕೆಡಿಬಿಪಿ9-

ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಸಚಿವ ಈಶ್ವರ್‌ ಖಂಡ್ರೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಪಟೂರಿನಲ್ಲಿ ರಾತ್ರಿಯೇ ಸ್ವಚ್ಛವಾಗಲಿದೆ ನಗರ
ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ನಿಧನ