ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಅವಧೂತ ಪರಂಪರೆಯು ಭಾರತೀಯ ಆಧ್ಯಾತ್ಮಿಕ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಆಧ್ಯಾತ್ಮಿಕ ಸಂಪ್ರದಾಯದ ಮೂಲಕ ಕಾಲ ಕಾಲಕ್ಕೆ ಜನರ ಭವಣೆ ಕಡಿಮೆ ಮಾಡುತ್ತಾ, ಜನಮಾನಸದಲ್ಲಿ ನಿರಂತರವಾಗಿ ಸಂಸ್ಕಾರ ತುಂಬುವ ಕಾರ್ಯ ಗುರುಗಳು ಮಾಡುತ್ತಾ ಬಂದಿದ್ದಾರೆಂದು ಹುಲ್ಯಾಳ ಗುರುದೇವ ಆಶ್ರಮದ ಹರ್ಷಾನಂದ ಶ್ರೀಗಳು ನುಡಿದರು.ತಾಲೂಕಿನ ಹನಗಂಡಿ ಗ್ರಾಮದ ಅವಧೂತ ಆಶ್ರಮದಲ್ಲಿ ಲಿಂ.ರಾಮಾನಂದ ಅವಧೂತರ ೨೯ನೇ ಪುಣ್ಯಾರಾಧನೆ ಹಾಗೂ ನೂತನ ದ್ವಾರಬಾಗಿಲು ಉದ್ಘಾಟನೆ ನಿಮಿತ್ತ ಜ್ಯೋತಿ ಬೆಳಗಿಸಿ, ಆಶೀರ್ವಚನ ನೀಡಿದರು.
ಹಳಿಂಗಳಿ ಕಮರಿಮಠದ ಶರಣಬಸವ ದೇವರು ಮಾತನಾಡಿ, ಗುರುಪರಂಪರೆಗಳು ನಾಡಿನ ನಾಡಿಮಿಡಿತವಾಗಿದ್ದು, ಶರಣರ ಬದುಕನ್ನು ಮೌಲ್ಯಯುತವಾಗಿಸುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿವೆ. ಅಂತಹ ಸಾಲಿನಲ್ಲಿ ಅವಧೂತ ಪರಂಪರೆ ಕೂಡ ಒಂದಾಗಿದೆ. ಶ್ರೀಮಠದ ಚಿದಾನಂದ ಅವಧೂತರು ಜ್ಞಾನಿಗಳಾಗಿದ್ದು, ಎಲ್ಲರನ್ನು ಸಮಭಾವದಲ್ಲಿ ಕೊಂಡೊಯ್ಯುವ ಗುರುವಾಗಿದ್ದಾರೆ ಎಂದು ಬಣ್ಣಿಸಿದರು.ಆಶ್ರಮದ ಚಿದಾನಂದ ಅವಧೂತರು ನೇತೃತ್ವ ವಹಿಸಿದ್ದರು. ಹಳಿಂಗಳಿ ಕಮರಿಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶೇಗುಣಸಿ ಹನುಮಂತ ಮಹಾರಾಜರು, ಕೋಳಿಗುಡ್ಡದ ಸ್ವರೂಪಾನಂದ ಸ್ವಾಮೀಜಿ, ಸಿದ್ಧಾರೂಢ ಸ್ವಾಮೀಜಿ, ಈರಯ್ಯ ಶಾಸ್ತ್ರೀ, ರಾಜು ಶಾಸ್ತ್ರೀ, ಆಶ್ರಮದ ಜಗದೀಶ್ವರ ಸ್ವಾಮೀಜಿ, ಘೇನಮ್ಮತಾಯಿ, ಹನಗಂಡಿಯ ಸಿದ್ದಪ್ಪಜ್ಜ, ನಿಲೇಶ ದೇಸಾಯಿ, ಪ್ರಸನ್ನಕುಮಾರ ದೇಸಾಯಿ ಸೇರಿದಂತೆ ಅನೇಕ ಮಹಾತ್ಮರು ವೇದಿಕೆಯಲ್ಲಿದ್ದರು.ಕಾರ್ಯಕ್ರಮ ನಿಮಿತ್ತ ಬ್ರಾಹ್ಮಿ ಮುಹೂರ್ತದಲ್ಲಿ ಲಿಂ.ರಾಮಾನಂದ ಅವಧೂತರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಪೂಜಾದಿಗಳು, ಓಂಕಾರ ಜಪ ಜರುಗಿದವು. ಸಕಲ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ ಆಶ್ರಮದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮುತ್ತೈದೆಯರು ಆರುತಿ, ಕುಂಭಮೇಳಗಳೊಂದಿಗೆ ಭಾಗವಹಿಸಿದ್ದರು. ಸುತ್ತಮುತ್ತಲಿನ ಗ್ರಾಮ ಸೇರಿದಂತೆ ಆಶ್ರಮದ ಸದ್ಭಕ್ತರು ದರ್ಶನ ಪಡೆದುಕೊಂಡರು ಪ್ರಸಾದ ಸವಿದರು. ಸಂಜೆ ಭಜನಾ ಸೇವೆಗಳು ಜರುಗಿದವು.