ಮಸ್ಕಿ; ಇಲ್ಲಿನ ವಿಧಾನಸಭಾ ಕ್ಷೇತ್ರದ ತುರ್ವಿಹಾಳ ಪಟ್ಟಣದಲ್ಲಿ ಫೆ.23 ರಂದು ನಡೆಯಲಿರುವ ₹ 800 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆಗೆ ಚಾಲನೆ ನೀಡಲು ಹಾಗೂ ಅಮೋಘ ಸಿದ್ದೇಶ್ವರ ಮಠದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಗಮಿಸಲಿದ್ದಾರೆ ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ತಿಳಿಸಿದರು.ಪಟ್ಟಣದ ಶಾಸಕರ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸ್ಕಿ ಪಟ್ಟಣದ ಪ್ರಜಾಸೌಧ (ಮಿನಿ ವಿಧಾನಸೌಧ)ದ ಶಂಕುಸ್ಥಾಪನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ, ಮಸ್ಕಿ ಹಾಗೂ ತುರ್ವಿಹಾಳ ಪಟ್ಟಣದಲ್ಲಿನ ಇಂದಿರಾ ಕ್ಯಾಂಟಿನ್‌ಗಳ ಉದ್ಘಾಟನೆ, ಬಳಗಾನೂರು ಪೊಲೀಸ್ ಠಾಣೆಯ ನೂತನ ಕಟ್ಟಡ, ತುರ್ವಿಹಾಳ ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮಸ್ಕಿ ಪಟ್ಟಣದ ಬಸ್ ನಿಲ್ದಾಣ ಮೇಲ್ದರ್ಜೆ ಸೇರಿದಂತೆ 30ಕ್ಕೂ ಹೆಚ್ಚು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ತುರ್ವಿಹಾಳ ಪಟ್ಟಣದಲ್ಲಿ ಅಶೋಕ ಸ್ತಂಭ ಹಾಗೂ ಇಂದಿರಾ ಗಾಂಧಿಯ ಪ್ರತಿಮೆಯ ಅನಾವರಣವನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ ಅಲ್ಲದೇ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನನ್ನ ಪುತ್ರ ಹಾಗೂ ನಮ್ಮ ತಮ್ಮನ ಪುತ್ರನ ಮದುವೆ ಕಾರ್ಯಕ್ರಮವೂ ಇದೆ ಆದ್ದರಿಂದ ಕ್ಷೇತ್ರದ ಜನರು ಬಂದು ವಧುವರರಿಗೆ ಆರ್ಶಿವದಿಸಬೇಕು ಎಂದು ಮನವಿ ಮಾಡಿದರು.
ಸಚಿವರಾದ ಬೈರತಿ ಸುರೇಶ, ಎನ್.ಎಸ್.ಬೋಸರಾಜ, ಶಿವರಾಜ ತಂಗಡಗಿ, ಡಾ.ಶರಣಪ್ರಕಾಶ ಪಾಟೀಲ್, ಸಂಸದರಾದ ರಾಜಶೇಖರ ಹಿಟ್ನಾಳ, ಜಿ.ಕುಮಾರನಾಯಕ ಸೇರಿದಂತೆ ರಾಯಚೂರು, ಕೊಪ್ಪಳ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಪಾಲ್ಗೊಳ್ಳಲಿದ್ದಾರೆ, ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಸೇರಲಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಹನುಮಂತಪ್ಪ ಮುದ್ದಾಪುರ, ಮೈಬೂಬಸಾಬ ಮುದ್ದಾಪುರ, ಅಂದಾನಪ್ಪ ಗುಂಡಳ್ಳಿ. ಸಿದ್ದನಗೌಡ ಮಾಟೂರು, ನಿರೂಪಾದೇಪ್ಪ ವಕೀಲ, ಬಸನಗೌಡ ಪೊಲೀಸ ಪಾಟೀಲ, ನಾಗಭೂಷಣ, ನಾರಾಯಣ್ಣಪ್ಪ ಕಾಸ್ಲಿ, ಮಲ್ಲಯ್ಯ ಮುರಾರಿ, ಶಫಿ ಸೇರಿದಂತೆ ಇತರರು ಇದ್ದರು.