ಕನ್ನಡಪ್ರಭ ವಾರ್ತೆ ಕೊರಟಗೆರೆಕರ್ನಾಟಕ ರಾಜ್ಯ ಮೀಸಲು ಪೋಲಿಸ್ ೧೨ನೇ ಪಡೆ ರಾಜ್ಯದಲ್ಲಿಯೇ ದೈಹಿಕ ಆರೋಗ್ಯದಲ್ಲಿ ಮುಂಚೂಣಿಯಲ್ಲಿದ್ದು ಅಭಿವೃದ್ಧಿ ಪತದತ್ತ ಸಾಗುತ್ತಿದೆ ಎಂದು ಪಡೆಯ ಕಮಾಂಡೆಂಟ್ ಹಂಜಾ ಹುಸೇನ್ ತಿಳಿಸಿದರು.ತಾಲೂಕಿನ ತುಂಬುಗಾನಹಳ್ಳಿ ಗ್ರಾಮದ ಸಮೀಪ ಇರುವ ೧೨ನೇ ಕೆ.ಎಸ್.ಆರ್.ಪಿ. ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ೫೦ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಪದಕ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪೊಲೀಸ್ ಇಲಾಖೆ ಸಮಾಜದಲ್ಲಿ ತಮ್ಮದೇ ಆದ ಗೌರವವನ್ನು ಪಡೆದಿರುತ್ತದೆ ದೇಶದಲ್ಲಿ ಯೋಧರಿಗೆ ಮತ್ತು ಪೊಲೀಸರಿಗೆ ಪದಕಗಳನ್ನು ನೀಡಲಾಗುತ್ತದೆ, ನಮ್ಮ ಪಡೆಯಲ್ಲಿ ಡಾ.ಭಾಗೀರತಿ ಕನ್ನಡತಿ ಇವರಿಂದ ಆರೋಗ್ಯ ಶಿಕ್ಷಣವನ್ನು, ಯೋಗ ಶಿಕ್ಷಣವನ್ನು ನೀಡಿ ಪೊಲೀಸರಲ್ಲಿ ಮಾನಸಿಕ ಧೈರ್ಯವನ್ನು ತುಂಬಲಾಗಿದೆ. ನಮ್ಮ ಮೀಸಲು ಪಡೆಯ ೨ ಕಂಪನಿಗಳ ಸುಮಾರು ೧೮೦ ಪೊಲೀಸರು ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ತೆಲಂಗಾಣ, ಬಿಹಾರ, ಹರಿಯಾಣಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಸೇವೆ ಸಲ್ಲಿಸಿವೆ ಸಮಾಜದ ಶಾಂತಿ ಸುವ್ಯವಸ್ಥೆಗೆ ಪೊಲೀಸರ ಸೇವೆ ಸಾಕಷ್ಟು ಇದೆ ಎಂದರು. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಮಹಮ್ಮದ್ ರಫೀ ಪಾಷ ಮಾತನಾಡಿ, ಕೆ.ಎಸ್.ಆರ್.ಪಿ ಪಡೆ ಸಮಸ್ತ ಕರ್ನಾಟಕದ ಶಾಂತಿಗೆ, ರಾಷ್ಟ್ರೀಯ ಭಾವೈಕ್ಯತೆಗೆ ಭದ್ರ ಬುನಾದಿಯನ್ನು ಹಾಕುತ್ತಿದೆ. ಪೊಲೀಸ್ ಇಲಾಖೆಯ ಕೆಲಸ ಬಹಳ ಶ್ರೇಷ್ಟವಾದ ಕೆಲಸವಾಗಿದ್ದು ತ್ಯಾಗ ಮತ್ತು ಬಲಿದಾನದ ಪ್ರತೀಕಗಳಲ್ಲಿ ಸೇರಿಕೊಂಡಿದೆ ಹಾಗಾಗಿ ಪೊಲೀಸ್ ಇಲಾಖೆಯ ಹುದ್ದೆಯನ್ನು ಆರಿಸಿಕೊಂಡಿರುವ ತಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ, ನಮ್ಮಗಳ ಕರ್ತವ್ಯ ಸಂದರ್ಭದಲ್ಲಿ ಯಾವುದೇ ನಿಗದಿತ ಸಮಯ ಇರುವುದಿಲ್ಲ ಆದ್ದರಿಂದ ಪೊಲೀಸರು ತಮ್ಮ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಯೋಗದೊಂದಿಗೆ ಇತರ ಹವ್ಯಾಸಗಳಾದ ಓದು, ಬರಹ, ಕ್ರೀಡೆ, ವ್ಯಾಯಾಮ, ಹಾಡು ಕಲಿಕೆ ಯಾವುದಾದರು ಒಂದನ್ನು ಕರ್ತವ್ಯ ನಂತರದ ಬಿಡುವಿನ ವೇಳೆಯಲ್ಲಿ ಮಾಡಿಕೊಂಡರೆ ಸಂಪೂರ್ಣ ಮಾನಸಿಕ ಸಮತೋಲನ ಹೊಂದಬಹುದು, ಪೊಲೀಸರು ಕುಟುಂಬದ ಕಡೆ ಗಮನ ಹರಿಸಿ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಕಡೆಯೂ ಗಮನ ಹರಿಸಬೇಕು ಎಂದರು.ಈ ಸಂದರ್ಭದಲ್ಲಿ ಮೀಸಲು ಪಡೆಯ ಪಥ ಸಂಚಲನವನ್ನು ನಡೆಸಲಾಯಿತು ಹಾಗೂ ಹಲವು ಪೊಲೀಸರಿಗೆ ಪದಕಗಳನ್ನು ಪ್ರದಾನ ಮಾಡಿ, ಪ್ರಶಂಸನಾ ಪತ್ರಗಳನ್ನು ನೀಡಲಾಯಿತು, ಕಾರ್ಯಕ್ರಮದಲ್ಲಿ ಕೆ.ಎಸ್.ಆರ್.ಪಿ ಪಡೆಯ ಸಹಾಯಕ ಕಮಾಂಡೆಂಟ್ ಡಾ.ನವೀನ್‌ಕುಮಾರ್, ಡೆಪ್ಯೂಟ್ ಕಮಾಂಡೆಂಟ್ ನಿಸ್ಸಾರ್ ಅಹಮ್ಮದ್ ಸೇರಿದಂತೆ ಹಲವು ಅಧಿಕಾರಿಗಳು ಇತರರು ಭಾಗವಹಿಸಿದ್ದರು.