ಕರಡು ಅಧಿಸೂಚನೆ ವಿರೋಧಿಸಿ ಸೆ.10ಕ್ಕೆ ಬಾಳೆಹೊನ್ನೂರು ಬಂದ್

KannadaprabhaNewsNetwork |  
Published : Sep 07, 2026, 01:15 AM IST
೦೬ಬಿಹೆಚ್‌ಆರ್ ೧: ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ವಾಪಾಸ್ ಪಡೆಯಲು ಒತ್ತಾಯಿಸಿ ಬಾಳೆಹೊನ್ನೂರಿನಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪರಿಸರ ಹೋರಾಟಗಾರ ದಿಗಂತ್ ಬಿಂಬೈಲ್ ಮಾತನಾಡಿದರು. ಟಿ.ಎಂ.ಉಮೇಶ್, ಮಹಮ್ಮದ್ ಹನೀಫ್, ಕೆ.ಕೆ.ವೆಂಕಟೇಶ್, ಎಂ.ಎಸ್.ಜಯಪ್ರಕಾಶ್, ರವಿಚಂದ್ರ, ಚಂದ್ರಶೇಖರ್, ಚನ್ನಗಿರಿ ಹಾಜರಿದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರುಪಶ್ಚಿಮಘಟ್ಟ ಹಾಗೂ ಮಲೆನಾಡು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ತರುವ ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯನ್ನು ಕೈ ಬಿಡಲು ಒತ್ತಾಯಿಸಿ ಸೆ.10ರಂದು ಬಾಳೆಹೊನ್ನೂರು ಪಟ್ಟಣ ಸಂಪೂರ್ಣವಾಗಿ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಸರ್ವ ಪಕ್ಷಗಳು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ರೈತರ ಸಭೆಯಲ್ಲಿ ನಿರ್ಧಾರ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಶ್ಚಿಮಘಟ್ಟ ಹಾಗೂ ಮಲೆನಾಡು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ತರುವ ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯನ್ನು ಕೈ ಬಿಡಲು ಒತ್ತಾಯಿಸಿ ಸೆ.10ರಂದು ಬಾಳೆಹೊನ್ನೂರು ಪಟ್ಟಣ ಸಂಪೂರ್ಣವಾಗಿ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಸರ್ವ ಪಕ್ಷಗಳು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ರೈತರ ಸಭೆಯಲ್ಲಿ ಬಾಳೆಹೊನ್ನೂರು ಬಂದ್ ಮಾಡಿ, ಪಕ್ಷಾತೀತ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯುವ ಒಕ್ಕೊರಲಿನ ತೀರ್ಮಾನ ಮಾಡಲಾಯಿತು.

ಸೆ.10ರಂದು ಬಾಳೆಹೊನ್ನೂರಿನ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನಾ ಮೆರವಣಿಗೆ ಹೊರಟು, ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿ ಬಸ್ ನಿಲ್ದಾಣದ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ರದಿ ಜಾರಿಯಾದರೆ ಮಲೆನಾಡಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಮಲೆನಾಡಿಗೆ ಮಾರಕವಾದ ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯವನ್ನು ಕೈಬಿಡುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಒತ್ತಾಯ ಹೇರಲು ನಿರ್ಧರಿಸಲಾಯಿತು.

ಬಾಳೆಹೊನ್ನೂರು ಬಂದ್‌ಗೆ ಖಾಂಡ್ಯ, ಬಾಳೆಹೊನ್ನೂರು ಹಾಗೂ ಮೇಗುಂದಾ ಹೋಬಳಿ ರೈತರು, ವಿವಿಧ ಪಕ್ಷಗಳ ಮುಖಂಡರು ಸಹ ಬೆಂಬಲ ಸೂಚಿಸಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಗುರುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಬಂದ್ ಮಾಡಲು ಸಭೆಯಲ್ಲಿ ಹಾಜರಿದ್ದವರು ಒಪ್ಪಿಗೆ ಸೂಚಿಸಿದರು.

ಸಭೆಯಲ್ಲಿ ಪರಿಸರ ಹೋರಾಟಗಾರ ದಿಗಂತ್ ಬಿಂಬೈಲ್ ಮಾತನಾಡಿ ಅರಣ್ಯ ಇಲಾಖೆ ಹಲವಾರು ದೌರ್ಜನ್ಯಗಳ ನಡುವೆ ಮಲೆನಾಡಿಗರು ಇಂದು ಬದುಕುತ್ತಿದ್ದು, ಈಗಾಗಲೇ ಮಲೆನಾಡು ವೃದ್ಧಾಶ್ರಮ ಗಳಾಗಿ ಪರಿವರ್ತನೆಯಾಗಿವೆ. ಇಂತಹ ಸನ್ನಿವೇಶದಲ್ಲಿ ಇಲ್ಲಿಗೆ ಮತ್ತಷ್ಟು ಬಿಗಿ ಕಾಯ್ದೆಗಳು ಬೇಕಿವೆಯೇ ಎಂದು ಪ್ರಶ್ನಿಸಬೇಕಾಗಿದೆ.

ಕಸ್ತೂರಿ ರಂಗನ್ ವರದಿಯನ್ನು ವಾಸ್ತವಿಕ ನೆಲೆಗಟ್ಟಿನ ಆಧಾರದಲ್ಲಿ ವಿರೋಧಿಸಬೇಕಿದೆ. ವರದಿಗೆ ಇಂದು ನಾವು ಬಾಧ್ಯಸ್ಥರಾಗಲು ಅಧಿಕಾರಿಗಳು, ರಾಜಕಾರಣಿಗಳು ನೇರವಾಗಿ ಕಾರಣ. ರಾಜಕಾರಣಿಗಳ ಅಧಿಕಾರ ದಾಹಕ್ಕೆ ನಾವು ಇಂದು ಪಶ್ಚಿಮಘಟ್ಟ ಕಳೆದುಕೊಳ್ಳಬೇಕಾಗಿದೆ. ಕಳೆದ ವರ್ಷ ರಾಜ್ಯವೊಂದರಲ್ಲಿ 58 ಸಾವಿರ ಎಕರೆ ಅರಣ್ಯ ಪ್ರದೇಶ ಕಡಿದು ಉದ್ಯಮಿ ಅಂಬಾನಿ ಅವರಿಗೆ ನೀಡಿದಾಗ ಪರಿಸರ ಸಂರಕ್ಷಣೆ ನೆನಪು ಸರ್ಕಾರಕ್ಕೆ ಬರಲಿಲ್ಲ.

ರಾಜಕಾರಣಿಗಳು ಇಂದು ಉದ್ಯಮಿಗಳು, ಬಂಡವಾಳ ಶಾಹಿಗಳ ಪರವಾಗಿ ನಿಲ್ಲುತ್ತಿರುವುದು ವಿಶಾದನೀಯ. ಕೇರಳ ಸರ್ಕಾರ ಈ ವರದಿಗೆ ವೈಜ್ಞಾನಿಕವಾಗಿ ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆಯಲ್ಲಿ 3 ಸಾವಿರ ಚ. ಕಿಮೀ ವರದಿಯಿಂದ ಹೊರ ಬಂದಿದೆ. ಆದರೆ ನಮ್ಮ ರಾಜ್ಯದಲ್ಲಿ 1 ಚ.ಕಿಮೀ ಸಹ ವರದಿಯಿಂದ ಹೊರ ಬಂದಿಲ್ಲ. ಇದಕ್ಕೆ ಕಾರಣ ಯಾರು ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

ಅಧಿಕಾರ, ಬಂಡವಾಳ ಶಾಹಿ ವ್ಯವಸ್ಥೆಗಳ ಬಗ್ಗೆ ನಾವು ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದ್ದು, ಅಧಿಕಾರಿ ಗಳು ಎನ್‌ಜಿಓಗಳ ಅಡಿ ಆಳಾಗಿ ಆಡಳಿತ ವ್ಯವಸ್ಥೆಗೆ ಸರಿಯಾದ ಮಾಹಿತಿ ನೀಡುತ್ತಿಲ್ಲವಾಗಿದೆ. ರಾಜ್ಯದ 1500ಕ್ಕೂ ಅಧಿಕ ಹಳ್ಳಿಗಳು ಇಎಸ್‌ಜಡ್‌ಗೆ ಒಳಪಟ್ಟಿದ್ದರೂ ನಾವು ಭೌತಿಕ ಸಮೀಕ್ಷೆಗೆ ಇಳಿಯದಿರುವುದು ವಿಶಾದನೀಯ ಎಂದರು.

ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಯನ್ನು ಅವರು ನೈಜವಾಗಿ ಬರೆದಿಲ್ಲ. ಅವರು ಕೇವಲ ಇದರ ಮುಖವಾಡವಾಗಿದ್ದು, ಇದನ್ನು ಬೇರೆಯವರು ಬರೆಸಿದ್ದಾರೆ. ವರದಿ ಯಾರಿಗಾಗಿ ಜಾರಿ ಯಾಗುತ್ತಿದೆ ಎಂದೂ ಸಹ ಅವರಿಗೆ ತಿಳಿದಿಲ್ಲ.

ಈ ಹಿನ್ನೆಲೆಯಲ್ಲಿ ನಾವು ನಮ್ಮ ಬದುಕಿಗಾಗಿ ಅಲ್ಲ, ನಮ್ಮ ಮುಂದಿನ ಪೀಳಿಗೆಗಾಗಿ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದರು.

ಬಿಜೆಪಿ ಮುಖಂಡ ಟಿ.ಎಂ.ಉಮೇಶ್ ಕಲ್ಮಕ್ಕಿ ಮಾತನಾಡಿ ನಮ್ಮ ಜೀವನಕ್ಕಾಗಿ ನಾವು ಪಕ್ಷಾತೀತ ವಾಗಿ ಹೋರಾಟ ನಡೆಸಬೇಕಿದೆ. ಇಂದು ಮನೆ, ಆಸ್ತಿ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದರೂ ಸಹ ಸಮಸ್ಯೆ ತೀವ್ರತೆ ಜನರಿಗೆ ಅರಿಯುತ್ತಿಲ್ಲವಾಗಿರುವುದು ವಿಷಾದನೀಯ. ರಾಜಕೀಯ ಮರೆತು ಹೋರಾಟ ನಡೆಸಬೇಕಿದೆ. ಸರ್ಕಾರ, ಅರಣ್ಯ ಇಲಾಖೆ ಯೋಜನೆಗಳನ್ನು ಹಣ ಮಾಡುವ ಉದ್ದೇಶಕ್ಕೆ ಮಾಡುತ್ತಿದ್ದಾರೆ ಎಂಬುದನ್ನು ಅರಿಯಬೇಕಿದೆ ಎಂದರು.

ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಮಾತನಾಡಿ ಸೆ.10ರಂದು ನಡೆಯುವ ಹೋರಾಟ ಯಶಸ್ವಿಯಾಗಿ ನಡೆಸಿ ಸರ್ಕಾರದ ಗಮನ ಸೆಳೆಯಬೇಕಾಗಿದೆ. ಹೋರಾಟದಲ್ಲಿ ಕನಿಷ್ಠ 2 ಸಾವಿರ ಜನರ ಸೇರಿ ಶಕ್ತಿ ಪ್ರದರ್ಶನ ಮಾಡಬೇಕಿದೆ. ಸುತ್ತಮುತ್ತಲಿನ ಎಲ್ಲಾ ತೋಟಗಳಲ್ಲಿ ಕಾರ್ಮಿಕರಿಗೆ ರಜೆ ಘೋಷಣೆ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಬೇಕಿದೆ. ಪ್ರತಿಭಟನಾ ಸಭೆಯಲ್ಲಿ ರಾಜಕೀಯ ವ್ಯಕ್ತಿಗಳಿಗೆ ಭಾಷಣಕ್ಕೆ ಅವಕಾಶ ನೀಡದೆ ಸಂಪನ್ಮೂಲ ವ್ಯಕ್ತಿಗಳಿಗೆ ಮಾತನಾಡಲು ಅವಕಾಶ ನೀಡಬೇಕಿದೆ. ಯಾವುದೇ ರಾಜಕೀಯ ಭಾಷಣ ಮಾಡದೆ ನಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕಿದೆ ಎಂದರು.

ಪ್ರಮುಖರಾದ ಕೆ.ಕೆ.ವೆಂಕಟೇಶ್, ಕೆ.ಟಿ.ವೆಂಕಟೇಶ್, ಎಂ.ಎಸ್.ಜಯಪ್ರಕಾಶ್, ರವಿಚಂದ್ರ, ಎಂ.ಜೆ. ಚಂದ್ರಶೇಖರ್, ಕೆ.ಎಸ್.ಚನ್ನಗಿರಿ, ಬಿ.ಕೆ.ಮಧುಸೂದನ್, ಎಂ.ಎನ್.ನಾಗೇಶ್, ಎಂ.ಕೆ.ಸುಂದರೇಶ್, ಹಿರಿಯಣ್ಣ, ಕೆ.ಟಿ.ಗೋವಿಂದೇಗೌಡ, ಎಸ್.ವಿ.ಶಂಕರ್, ಎಚ್.ಎಸ್.ಕೌಶಿಕ್ ಪಟೇಲ್ ಸೇರಿದಂತೆ ಪ್ರಮುಖರು ಹಾಜರಿದ್ದರು.೦೬ಬಿಹೆಚ್‌ಆರ್ ೧:

ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ವಾಪಾಸ್ ಪಡೆಯಲು ಒತ್ತಾಯಿಸಿ ಬಾಳೆಹೊನ್ನೂರಿನಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪರಿಸರ ಹೋರಾಟಗಾರ ದಿಗಂತ್ ಬಿಂಬೈಲ್ ಮಾತನಾಡಿದರು. ಟಿ.ಎಂ. ಉಮೇಶ್, ಮಹಮ್ಮದ್ ಹನೀಫ್, ಕೆ.ಕೆ.ವೆಂಕಟೇಶ್, ಎಂ.ಎಸ್.ಜಯಪ್ರಕಾಶ್, ರವಿಚಂದ್ರ, ಚಂದ್ರಶೇಖರ್, ಚನ್ನಗಿರಿ ಹಾಜರಿದ್ದರು.೦೬ಬಿಹೆಚ್‌ಆರ್ ೨:

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು, ರೈತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರು ಪೂರೈಸಲು ಒತ್ತಾಯಿಸಿ ರಸ್ತೆ ತಡೆ ಚಳುವಳಿ
ಹೋರಾಟದ ಹಾದಿ ಹಿಡಿದಾದರು ಬರ ಪರಿಹಾರ ಪಡೆಯುತ್ತೇವೆ: ಸಚಿವ ಯತೀಂದ್ರ ಸಿದ್ದರಾಮಯ್ಯ