ಚಾಮರಾಜನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯ ಘಟಕದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವವನ್ನು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಟಿ ಫಲವಾಗಿ ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡು ಬೃಹತ್ ನಗರವಾಗಿ ಬೆಳೆದಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು. ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯ ಘಟಕದ ವತಿಯಿಂದ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ದೂರದೃಷ್ಟಿಯುಳ್ಳ ನಾಯಕರಾಗಿದ್ದು, ಎಲ್ಲ ವರ್ಗದ ಸಮಾಜಗಳಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಹಾಗಾಗಿ ಬೆಂಗಳೂರು ನಗರ ಶಾಂತಿಯುತವಾಗಿ ಬೃಹತ್ ನಗರವಾಗಿ ಬೆಳೆದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು. ಕೆಂಪೇಗೌಡರಿಗೆ ಬೆಂಗಳೂರು ನಗರವನ್ನು ವಾಣಿಜ್ಯ ಕೇಂದ್ರವನ್ನಾಗಿ ಮಾಡಬೇಕೆಂಬ ಮಹಾದಾಸೆಯಾಯಿತು. ಅದರಂತೆ ಆಯಾಯ ಕುಲ ಕಸುಬಿನ ಜನರಿಗೆ ಅನುಗುಣವಾಗಿ ಪೇಟೆಗಳನ್ನು ಮಾಡಿದರು. ಇಂದು ಬೆಂಗಳೂರು ಎಲ್ಲ ವರ್ಗದ ಜನರಿಗೂ ಕೆಲಸ ಕೊಡುವ ಮೂಲಕ ಆಶ್ರಯ ಕೊಟ್ಟಿದೆ. ಜನರು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು. ನಮ್ಮ ಸರ್ಕಾರ ಕೂಡ ಕೆಂಪೇಗೌಡರ ಬಗ್ಗೆ ವಿಶೇಷ ಕಾಳಜಿ ವಹಿಸಿದೆ ಎಂದರು. ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಸಲ್ಲಿಸಿ ಮಾತನಾಡಿ, ನಾಡಿನ ಜನತೆ ಕೆಂಪೇಗೌಡರನ್ನು ಸ್ಮರಿಸುವ ಕೆಲಸ ಆಗಬೇಕಿದೆ ಎಂದರು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕೆಂಪೇಗೌಡರು ಬೆಂಗಳೂರು ಸ್ಥಾಪಿಸುವ ಮೂಲಕ ನಾಡಿನ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಅವರ ಬದುಕು ಎಲ್ಲರಿಗೂ ಆದರ್ಶವಾಗಿದೆ ಎಂದರು.
ವಿಧಾನ ಪತಿಷತ್ ಸದಸ್ಯ ಸಿ.ಎನ್.ಮಂಚೇಗೌಡ ಮಾತನಾಡಿ, ಕೆಂಪೇಗೌಡರು ಸರ್ವ ಜಾತಿ, ಧರ್ಮಗಳಿಗೆ ಕೊಡುಗೆ ನೀಡಿದ್ದಾರೆ. ಒಕ್ಕಲಿಗ ಸಮಾಜ ಕೆಂಪೇಗೌಡ ಭಾವಚಿತ್ರವನ್ನು ಪ್ರತಿಮನೆಯಲ್ಲೂ ಅಳವಡಿಸಿಕೊಂಡು ಅವರನ್ನು ಸ್ಮರಿಸುವ ಕೆಲಸ ಆಗಬೇಕಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಚಾಮರಾಜನಗರ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿದರು. ಮಾಜಿ ಶಾಸಕ ಆರ್.ನರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಬಿ.ಟಿ ಕವಿತ, ಮೈಸೂರು ಚಾಮುಂಡಿಬೆಟ್ಟ ಪ್ರಧಾನ ಆರ್ಚಕ ಡಾ. ಎನ್.ಶಶಿಶೇಖರ್ ದೀಕ್ಷಿತ್, ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಚೂಡಾಧ್ಯಕ್ಷ ಮಹಮ್ಮದ್‌ಅಸ್ಗರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ.ಗಂಗಾಧರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೆ.ವಿ.ಶ್ರೀಧರ್, ಡಾ.ಎಂ.ಬಿ ಮಂಜೇಗೌಡ, ಮಹಾಸಭಾದ ಗೌರವಾಧ್ಯಕ್ಷ ಶಾ.ಮುರಳಿ, ಪ್ರಧಾನ ಕಾರ್ಯದರ್ಶಿ ಚಾ.ವೆಂ.ರಾಜ್‌ಗೋಪಾಲ್, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್‌ನಾಯಕ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ, ಆರ್.ಜಯರಾಂ, ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ವಡಗೆರೆ ಎ.ಕುಮಾರ್, ಕೆ.ಬಿ.ಚಿನ್ನಸ್ವಾಮಿ, ಪಣ್ಯದಹುಂಡಿರಾಜು, ಮಹೇಶ್ ಗೌಡ, ನಿಜಧ್ವನಿ ಗೋವಿಂದರಾಜು, ಅರುಣ್ ಕುಮಾರ್ ಗೌಡ, ಚಾ.ರಾ.ಕುಮಾರ್, ಲಿಂಗರಾಜು, ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಪದಾಧಿಕಾರಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.