ಕನ್ನಡಪ್ರಭ ವಾರ್ತೆ, ಬೀದರ್
ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಹತ್ತಿರದ ಬಸವಣ್ಣನವರ ಪ್ರತಿಮೆ ವಿರೂಪಗೊಂಡಿದ್ದರ ಕುರಿತು ಗ್ರಾಮಸ್ಥರು ಬುಧವಾರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ದಾಡಗಿ ಕ್ರಾಸ್ ಹತ್ತಿರ ಸ್ಥಾಪಿಸಲಾಗಿರುವ ಬಸವಣ್ಣನವರ ಪ್ರತಿಮೆ ವಿರೂಪಗೊಂಡಿತ್ತು. ಇದು ಕಿಡಿಗೇಡಿಗಳ ಕೈವಾಡ ಎಂದು ದಾಡಗಿ ಗ್ರಾಮಸ್ಥರು ಮತ್ತು ತಾಲೂಕಿನ ಬಸವ ಭಕ್ತರು ಸೇರಿ ಹುಮನಾಬಾದ್ - ಭಾಲ್ಕಿ- ಬಸವಕಲ್ಯಾಣ ಮಾರ್ಗದ ರಸ್ತೆಯನ್ನು ತಡೆಗಟ್ಟಿ, ಟೈರ್‌ಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಿದರು. ಬಸವಣ್ಣನವರ ಪ್ರತಿಮೆಯ ಕೈಗಳು ತುಂಡಾಗಿ ಬಿದ್ದಿದ್ದು, ಷಟಸ್ಥಲ ಧ್ವಜಾರೋಹಣ ನೆಲಕ್ಕೆ ಬಾಗಿದ್ದನ್ನು ನೋಡಿದ ಗ್ರಾಮಸ್ಥರು ಟೈರ್‌ಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಇಳಿದಾಗ ಭಾಲ್ಕಿ ಉಪ ವಿಭಾಗದ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಮತ್ತು ಖಟಕಚಿಂಚೋಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನೆ ವಿಕೋಪಕ್ಕೆ ಹೋಗದಂತೆ ಸ್ಥಳದಲ್ಲಿ ಪೊಲೀಸರ ತಂಡ ಬಿಡಾರ ಹೂಡಿದ್ದು, ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಪ್ರತಿಭಟನೆಯಲ್ಲಿ ಬಸವ ಭಕ್ತರಾದ ಕಿರಣಕುಮಾರ ಖಂಡ್ರೆ, ನಾಗಶೆಟ್ಟಿ ಚೋಳಾ, ವಿಲಾಸ ಪಾಟೀಲ, ನ್ಯಾಯವಾದಿ ಸಿದ್ದು ಪಾಟೀಲ, ಅಶೋಕ ಪಾಂಚಾಳ, ಬಸವರಾಜ ಹುಡಗೆ, ಬಸವರಾಜ ಮಾಕಾ, ಆನಂದ, ಕಲ್ಯಾಣರಾವ್ ಕುಂಬಾರಗೆರೆ, ನಂದಕುಮಾರ, ಜೀತು ಪಾಟೀಲ್, ಕಿಶೋರ, ಮಹೇಶ ಧೂಳೆ ಸೇರಿದಂತೆ ನೂರಾರು ಸಂಖೆಯಲ್ಲಿ ದಾಡಗಿ ಗ್ರಾಮಸ್ಥರು ಉಪಸ್ಥಿತರಿದ್ದರು.ಖಂಡನೆ: ಬಸವಣ್ಣನವರ ಪ್ರತಿಮೆಯನ್ನು ವಿರೂಪಗೊಳಿಸಿದ್ದನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ರೈತ ಮುಖಂಡರಾದ ನಾಗಶೆಟ್ಟೆಪ್ಪ ಲಂಜವಾಡೆ, ಕಾಶಿನಾಥ ಭೂರೆ, ವಿಠಲರಾವ್ ಬಿರಾದಾರ, ಹಿರೇಮಠ ಸಂಸ್ಥಾನ ಚಿಂತನಾ ವೇದಿಕೆಯ ವಿಶ್ವನಾಥಪ್ಪ ಬಿರಾದಾರ ಹಾಗೂ ಶರಣಪ್ಪ ಬಿರಾದಾರ ತೀವ್ರವಾಗಿ ಖಂಡಿಸಿದ್ದಾರೆ.ಮೇಲ್ನೋಟಕ್ಕೆ ಲಾರಿ ಡಿಕ್ಕಿಯಿಂದ ಪ್ರತಿಮೆ ಹಾನಿಯಾದಂತಿದೆ: ಎಸ್ಪಿ
ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಹತ್ತಿರದ ಬಸವಣ್ಣನವರ ಪ್ರತಿಮೆ ವಿರೂಪಗೊಂಡಿದ್ದರ ಮಾಹಿತಿ ತಿಳಿಯುತ್ತಿದ್ದಂತೆ ಎಸ್‌ಪಿ ಪ್ರದೀಪ ಗುಂಟಿ ಅವರ ಸೂಚನೆ ಮೇರೆ ತಕ್ಷಣವೇ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಹಾಗೂ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ, ಪ್ರತಿಮೆಯ ಕಟ್ಟೆಗೆ ಕಬ್ಬಿನ ಲಾರಿ ಡಿಕ್ಕಿ ಹೊಡೆದು ಹೋಗಿರುವ ಕುರುಹುಗಳು ಪತ್ತೆಯಾಗಿದ್ದು, ಕಬ್ಬಿನ ರಸ, ಕಬ್ಬು ಸವರಿದ ಗುರುತು ಅಂಟಿರುವದನ್ನು ಹಾಗೂ ಮುರಿದ ಬಲಿಷ್ಠ ಕಬ್ಬಿಣದ ರಾಡ್‌ನ್ನು ಗಮನಿಸಿದಾಗ ಮೇಲ್ನೋಟಕ್ಕೆ ಇದು ಕಬ್ಬು ಹೊತ್ತ ವಾಹನ ಡಿಕ್ಕಿಯಿಂದ ಆಗಿರುವ ಅವಘಡ ಎಂದು ಅಂದಾಜಿಸಲಾಗಿದ್ದು, ಅದಾಗ್ಯೂ ಪೊಲೀಸರು ಕೂಲಂಕುಶವಾಗಿ ತನಿಖೆ ನಡೆಸಿ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ದುಷ್ಕೃತ್ಯ ಎಸಗಿದ್ದಾರೆಯೇ ಎಂಬ ಅಂದಾಜಿನ ಮೇಲೆಯೂ ತನಿಖೆ ನಡೆಸಲಾಗುವುದು ಎಂದು ಎಸ್‌ಪಿ ಪ್ರದೀಪ ಗುಂಟಿ ತಿಳಿಸಿದ್ದಾರೆ.ಬಸವ ಮೂರ್ತಿ ವಿರೂಪ: ಆನಂದ ದೇವಪ್ಪ ಖಂಡನೆಬೀದರ್: ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಹತ್ತಿರ ಕೆಲವು ಕಿಡಿಗೇಡಿಗಳು ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಮೂರ್ತಿ ವಿರೂಪಗೊಳಿಸಿದ್ದನ್ನು ಲಿಂಗಾಯತ ಸಮಾಜ ಯುವ ಒಕ್ಕೂಟದ ರಾಜ್ಯಾಧ್ಯಕ್ಷ ಆನಂದ ದೇವಪ್ಪ ತೀವ್ರವಾಗಿ ಖಂಡಿಸಿದ್ದಾರೆ.ರಾತ್ರಿ ಹೊತ್ತಲ್ಲಿ ಕೆಲವು ಕಿಡಿಗೇಡಿಗಳು ಬಸವಣ್ಣನವರ ಮೂರ್ತಿಯ ಕೈಗೆ ಹಾನಿಯುಂಟು ಮಾಡಿ, ಧ್ವಜ ಕಿತ್ತು ಹಾಕಿ ತಮ್ಮ ಕ್ರೂರತನವನ್ನು ಪ್ರದರ್ಶಿಸಿದ್ದು, ಕೂಡಲೇ ಪೊಲೀಸ್ ಇಲಾಖೆ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆನಂದ ದೇವಪ್ಪ ಅಗ್ರಹಿಸಿದ್ದಾರೆ.ಬಸವಣ್ಣ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಲ್ಲ. ಇಂಥ ವಿಶ್ವಗುರುವನ್ನು ಅಪಮಾನಿಸಿದ್ದು ಇವರ ಮಾನಸಿಕತೆಯನ್ನು ಎತ್ತಿ ತೋರಿಸಿದೆ. ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಇಲ್ಲವಾದಲ್ಲಿ ಲಿಂಗಾಯತ ಸಮಾಜ ಯುವ ಒಕ್ಕೂಟ ಮತ್ತು ಬಸವ ಅನುಯಾಯಿಗಳು ಬೀದಿಗೆ ಇಳಿದು ಹೋರಾಡಬೇಕಾಗುತ್ತದೆ ಎಂದು ಆನಂದ ದೇವಪ್ಪ ಎಚ್ಚರಿಸಿದ್ದಾರೆ.