ಪ್ರಾಣಿಗಳ ಮೇಲೆ ದಯೆ ಇರಲಿ: ಶಾಸಕ ಗವಿಯಪ್ಪ

KannadaprabhaNewsNetwork |  
Published : Sep 05, 2024, 12:30 AM IST
4ಎಚ್‌ಪಿಟಿ2- ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್‌ನಲ್ಲಿ ಬುಧವಾರ ಕೇಸರಿ ಹೆಸರಿನ ಗಂಡು ಸಿಂಹದ 9ನೇ ವರ್ಷದ ಹುಟ್ಟುಹಬ್ಬದ‌ ಕಾರ್ಯಕ್ರಮಕ್ಕೆ ಶಾಸಕ ಎಚ್. ಆರ್. ಗವಿಯಪ್ಪ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಮೃಗಾಲಯದಲ್ಲಿನ ಪ್ರಾಣಿಗಳ ಪಾಲನೆ-ಪೋಷಣೆ ಮಾಡುವಲ್ಲಿ ಮೃಗಾಲಯದ ಸಿಬ್ಬಂದಿಯು ತಂದೆ, ತಾಯಿಯರಿಗೆ ಇರುವ ಕಾಳಜಿಯ ಗುಣ ಹೊಂದಿ ಕಾರ್ಯ ನಿರ್ವಹಿಸುವಂತಾಗಬೇಕು.

ಹೊಸಪೇಟೆ: ದಯವಿಲ್ಲದ ಧರ್ಮ ಯಾವುದಯ್ಯ, ದಯವೇ ಬೇಕು ಸಕಲ ಪ್ರಾಣಿಗಳಲ್ಲಿ ಎಂದು ಜಗಜ್ಯೋತಿ ಬಸವೇಶ್ವರರು ಹೇಳಿದ ವಚನದ ಸಾಲುಗಳನ್ನು ಅರ್ಥೈಸಿಕೊಳ್ಳಬೇಕು. ಪ್ರಾಣಿಗಳ ಮೇಲೆ ಪ್ರತಿಯೊಬ್ಬರು ದಯಾಗುಣ ಇಟ್ಟುಕೊಳ್ಳಬೇಕು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.

ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್‌ನಲ್ಲಿ ಬುಧವಾರ ನಡೆದ ಕೇಸರಿ ಹೆಸರಿನ ಗಂಡು ಸಿಂಹದ 9ನೇ ವರ್ಷದ ಹುಟ್ಟುಹಬ್ಬದ‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಾಣಿಗಳ ಸಂತತಿಯು ನಿರಂತರ ಮುಂದುವರೆಯುವ ಹಾಗೆ ಪ್ರಾಣಿಗಳನ್ನು ರಕ್ಷಣೆ ಮಾಡುವ, ಅವುಗಳನ್ನು ಉಳಿಸಿಕೊಂಡು ಹೋಗುವ ಮಹತ್ವದ ಜವಾಬ್ದಾರಿ‌ ನಮ್ಮೆಲ್ಲರ ಮೇಲಿದೆ. ಅದರಂತೆ ಮೃಗಾಲಯದಲ್ಲಿನ ಪ್ರಾಣಿಗಳ ಪಾಲನೆ-ಪೋಷಣೆ ಮಾಡುವಲ್ಲಿ ಮೃಗಾಲಯದ ಸಿಬ್ಬಂದಿಯು ತಂದೆ, ತಾಯಿಯರಿಗೆ ಇರುವ ಕಾಳಜಿಯ ಗುಣ ಹೊಂದಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದರು.

ಈಗಿನ ದಿನಗಳಲ್ಲಿ ಪ್ರಕೃತಿ ನಮಗೆ ತುಂಬ ಅತ್ಯವಶ್ಯಕ. ಪರಿಸರಕ್ಕೆ ಮತ್ತು ಮಾನವರಿಗೆ ಸಹಕಾರಿಯಾಗಿರುವ ಪ್ರಕೃತಿಯನ್ನು ಹಾಗೂ ಪ್ರಾಣಿಗಳನ್ನು ಉಳಿಸಿಕೊಳ್ಳವುದು ಈಗಿನ ಅತೀ ಅವಶ್ಯಕತೆಯಾಗಿದೆ ಎಂಬುದನ್ನು ಮುಖ್ಯವಾಗಿ ಪ್ರಾಣಿ ಸಂಗ್ರಹಾಲಯ, ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿ ಅರಿಯಬೇಕಿದೆ ಎಂದು ತಿಳಿಸಿದರು.

ಪ್ರಾಣಿಗಳನ್ನು ದತ್ತು ಪಡೆಯುವ ಪದ್ದತಿ ಇದೆ. ಇದು ಅತ್ಯಂತ ಉಪಯುಕ್ತ ಕಾರ್ಯವಾಗಿದೆ. ಆಸಕ್ತರು, ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬರಬೇಕು. ತಾವು ಕೂಡ ಈ ವರ್ಷ ಎರಡು ಪ್ರಾಣಿಗಳನ್ನು ದತ್ತು ಪಡೆಯಲು ಮುಂದಾಗಿರುವೆ ಎಂದರು.

ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ ನಾಯ್ಕ ಮಾತನಾಡಿ, ಕಮಲಾಪುರದ ಪ್ರಾಣಿ ಸಂಗ್ರಹಾಲಯದಲ್ಲಿ 33 ಜಾತಿಯ ಒಟ್ಟು 380ಕ್ಕಿಂತ ಹೆಚ್ಚು ಪ್ರಾಣಿಗಳಿವೆ. ಕೇಸರಿ ಸಿಂಹವು 2015ರಲ್ಲಿ ಜನಿಸಿದ್ದು ಇಂದಿಗೆ 9 ವರ್ಷಗಳನ್ನು ಪೂರೈಸಿದೆ ಎಂದು ತಿಳಿಸಿದರು.

ಜಾಗತಿಕ ಪ್ರಸಿದ್ಧ ಹಂಪಿಯ ಪರಿಸರದಲ್ಲಿ ನಾವಿರುವುದು ನಮಗೆ ಸಾಕಷ್ಟು ಅನುಕೂಲವಿದೆ. ನಮ್ಮ ಮುಂದಿನ ಯೋಜನೆಗೆ ಇದು ಸಹಕಾರಿಯಾಗಲಿದೆ. ಹಂಪಿಯಲ್ಲಿರುವುದರ ಸದುಪಯೋಗ ಪಡೆದು ಕಮಲಾಪುರದ ಪ್ರಾಣಿ ಸಂಗ್ರಹಾಲಯವನ್ನು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿಸುವ ಮಹತ್ವದ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ಕರಪತ್ರ ಬಿಡುಗಡೆ:

ಜಿಯೋಲಾಜಿಕಲ್ ಪಾರ್ಕ್‌ನ ಸಂಪೂರ್ಣ ಮಾಹಿತಿಯನ್ನು ಪ್ರವಾಸಿಗರಿಗೆ ನೀಡಲು ತಯಾರಿಸಿರುವ ಕರಪತ್ರವನ್ನು ಇದೇ ವೇಳೆ ಶಾಸಕರು ಬಿಡುಗಡೆ ಮಾಡಿದರು.

ಯುಪಿಐ ಐಡಿಗೆ ಚಾಲನೆ:

ಕಮಲಾಪುರದ ಪ್ರಾಣಿ ಸಂಗ್ರಹಾಲಯಕ್ಕೆ ಬರುವವರು ಇನ್ಮುಂದೆ ಆನ್ ಲೈನ್ ಮೂಲಕವೇ ಪ್ರವೇಶಾತಿ ಶುಲ್ಕ ಪಾವತಿಸಬಹುದಾಗಿದೆ. ಪ್ರವಾಸಿಗರ ಪ್ರವೇಶಕ್ಕೆ ಇನ್ನಷ್ಟು ಅನುಕೂಲವಾಗಲಿ ಎಂದು ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕನ ಅಧಿಕಾರಿಗಳು ಹೊಸದಾಗಿ ರಚಿಸಿರುವ ಯುಪಿಐ ಐಡಿಗೆ ಸಹ ಶಾಸಕರು ಚಾಲನೆ ನೀಡಿದರು.

ಪ್ರಾಣಿಗಳ ವೀಕ್ಷಣೆ ನಡೆಸಿದ ಶಾಸಕರು:

ಪ್ರಾಣಿ ಸಂಗ್ರಹಾಲಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆಗಮಿಸಿದ್ದ ಶಾಸಕರು, ಇದೇ ವೇಳೆ ವಿದ್ಯಾರ್ಥಿಗಳ ಜೊತೆ ವಾಹನದಲ್ಲಿ ಸಂಚರಿಸಿ ಕೇಸರಿ ಸಿಂಹ‌ ಸೇರಿದಂತೆ ವಿವಿಧ ಪ್ರಾಣಿಗಳನ್ನು ವೀಕ್ಷಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ, ಜಿಯೋಲಾಜಿಕಲ್ ಪಾರ್ಕ್‌ನ ವೈದ್ಯಾಧಿಕಾರಿ ವಾಣಿ, ಮುಖಂಡರಾದ ದಾದಾಪೀರ, ಕಾಳಪ್ಪ, ಅಂಜಿನಪ್ಪ, ಗುಜ್ಜಲ ನಾಗರಾಜ್, ದೀಪಕ್, ಪ್ರಭಾಕರ ಮತ್ತು ಡಿಎವಿ ಸ್ಕೂಲ್ ವಿದ್ಯಾರ್ಥಿಗಳು, ಜಿಯೋಲಾಜಿಕಲ್ ಪಾರ್ಕ್‌ನ ಸಿಬ್ಬಂದಿ ಇದ್ದರು.

ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್‌ನಲ್ಲಿ ಬುಧವಾರ ಕೇಸರಿ ಹೆಸರಿನ ಗಂಡು ಸಿಂಹದ 9ನೇ ವರ್ಷದ ಹುಟ್ಟುಹಬ್ಬದ‌ ಕಾರ್ಯಕ್ರಮಕ್ಕೆ ಶಾಸಕ ಎಚ್. ಆರ್. ಗವಿಯಪ್ಪ ಚಾಲನೆ ನೀಡಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ