ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪರಿಸರಕ್ಕೆ ಹಾನಿಯಾಗದಂತೆ ಬೇಡ್ತಿ–ವರದಾ ನದಿ ತಿರುವು ಆಗಬೇಕು. ಹೀಗಾಗಿಯೇ ಈ ಹಿಂದಿನ ಯೋಜನೆಯ ಸಮಗ್ರ ವರದಿ ಬದಲಿಸಿ ಹೊಸದಾಗಿ ಸಿದ್ಧಪಡಿಸಲಾಗಿದೆ. ಆದರೂ ಜನರಲ್ಲಿ ಆತಂಕವಿರುವ ಕಾರಣ ರಾಜ್ಯ ಸರ್ಕಾರದಲ್ಲಿ ಆ ಬಗ್ಗೆ ಚರ್ಚಿಸಿ ಯಾರಿಗೂ ತೊಂದರೆಯಾಗದ ರೀತಿ ನೀರು ಕೊಂಡೊಯ್ಯಲು ಸಿದ್ಧತೆ ಮಾಡಲಾಗುವುದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕಳೆದ ವರ್ಷ ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಟನ್ ಮೆಕ್ಕೆಜೋಳ ಬೆಳೆದಿತ್ತು. ಈ ವರ್ಷ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದರೂ 54 ಲಕ್ಷ ಮೆಟ್ರಿಕ್ ಟನ್ ಬೆಳೆಯಲಾಗಿದ್ದು, 2 ಲಕ್ಷ ಮೆಟ್ರಿಕ್ ಟನ್ ನಷ್ಟ ಆಗಿದೆ. ಇಂತಹ ಸಂದರ್ಭದಲ್ಲಿ ರೈತರನ್ನು ಉಳಿಸಲು ಏನು ಮಾಡಬೇಕು ಎಂಬುದನ್ನು ಸರ್ಕಾರ ಯೋಚಿಸಬೇಕು. ಆದರೆ, ರಾಜ್ಯ ಸರ್ಕಾರಕ್ಕೆ ರೈತಪರ ಚಿಂತನೆಯಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನಡುವೆ ನಡೆಯುತ್ತಿರುವ ಪೈಪೋಟಿ, ಕಚ್ಚಾಟ ನೋಡುತ್ತಿದ್ದರೆ ಕಾಂಗ್ರೆಸ್‌ಗೆ ಹೈಕಮಾಂಡ್ ಇದೆಯೋ? ಇಲ್ಲವೋ? ಎಂಬ ಅನುಮಾನ ಬರುತ್ತಿದೆ. ಸಮಾಜವಾದಿ ಪಟ್ಟಿ ಕಟ್ಟಿಕೊಂಡು ದುಬಾರಿ ವಾಚ್ ಕೈಗೇರಿಸಿಕೊಳ್ಳುವವರ ಎಲ್ಲ ವೈಭವ ನೋಡಿದ್ದೇವೆ. ಪ್ರಸ್ತುತ ಅಂತಹವರ ಆಡಳಿತದ ಜತೆ ನಡವಳಿಕೆಯೂ ಹಳ್ಳ ಹಿಡಿದಿದೆ ಎಂದರು.