ಬೀಚಿ ಬದುಕು-ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮ
ಕನ್ನಡ ಸಾರಸ್ವತ ಲೋಕದ ಹಾಸ್ಯಬ್ರಹ್ಮ ಎಂದೇ ಖ್ಯಾತರಾದ ಬೀಚಿ ಅವರು ತಮ್ಮ ನೋವನ್ನು ನುಂಗಿ ಇಡೀ ಜಗತ್ತನ್ನೇ ನಗಿಸಿದ ಅಪರೂಪದ ಸಾಹಿತಿ. ಅವರ ಸಾಹಿತ್ಯವನ್ನು ಓದುವುದರಿಂದ ಜೀವನದ ನಿಜವಾದ ಸಾರ ಅರ್ಥವಾಗುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ಗದಗದ ಕನಕದಾಸ ಶಿಕ್ಷಣ ಸಮಿತಿಯ ಕೆಎಸ್‌ಎಸ್ ಕಾಲೇಜು ಹಾಗೂ ನರೇಗಲ್ಲನ ಬೀಚಿ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಬೀಚಿ ಬದುಕು-ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬೀಚಿ ಅವರು ಸಮಾಜದ ಅಂಕುಡೊಂಕುಗಳನ್ನು ತಮ್ಮ ನಗೆ ಮಾತುಗಳ ಮೂಲಕವೇ ತಿದ್ದಲು ಶ್ರಮಿಸಿದರು. ಸ್ವಂತ ಬದುಕಿನ ಅನುಭವಗಳನ್ನೇ ಬರಹಕ್ಕಿಳಿಸಿ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇಂದಿನ ಹಾಸ್ಯ ಭಾಷಣಕಾರರಿಗೆ ಅಪಾರ ವಿಷಯಗಳನ್ನು ಒದಗಿಸಿದ ಬೀಚಿ ಅವರ ಕೃತಿಗಳನ್ನು ಯುವಜನತೆ, ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಓದಿ ಜೀವನ ರೂಪಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಐ.ಕೆ. ಪಟ್ಟಣಶೆಟ್ಟಿ ಮಾತನಾಡಿದರು. ಡಾ. ಬಸವರಾಜ ಶರಣರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ, ದೊಡ್ಡಯ್ಯ ಅರವಟಗಿಮಠ ಉಪಸ್ಥಿತರಿದ್ದರು. ಕಾಶೀನಾಥ ಸಾಲಿಮಠ ಪ್ರಾರ್ಥಿಸಿದರು. ಮೃತ್ಯುಂಜಯ ಧಡೇಸೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಗೋಗೇರಿ ಪರಿಚಯಿಸಿದರು. ಡಾ. ಕೃಷ್ಣ ಕಾರಭಾರಿ ಸ್ವಾಗತಿಸಿ, ಡಾ. ಅರವಿಂದ ಪೂಜಾರ ನಿರೂಪಿಸಿದರು. ಮಹಾದೇವಪ್ಪ ಬೇವಿನಕಟ್ಟಿ ವಂದಿಸಿದರು.