ಯಡಗೆರೆ ಮಂಜುನಾಥ್
ಬೆಳ್ಳೂರಿನಲ್ಲಿ ಫೆ.21, 22 ರಂದು ನಡೆಯುವ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಬೆಮ್ಮನೆ ದಯಾನಂದ್ 16 ವರ್ಷಗಳ ಕಾಲ ಗಡಿ ಭಾಗದ ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಪದವಿ ಪೂರ್ವ ಕಾಲೇಜಿ ನಲ್ಲಿ ತಮಿಳು, ತೆಲುಗು ಭಾಷೆಯ ಮಕ್ಕಳಿಗೆ ಕನ್ನಡ ಬೋಧಿಸಿ ಗಡಿಯಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಿದ ಕೆಲಸ ಮಾಡಿದ್ದಾರೆ.
ಗ್ರಾಮೀಣ ಭಾಗದ ತುಂಬು ಕುಟುಂಬದ ಬೆಮ್ಮನೆಯ ಬಿ.ಎಸ್.ಪುಟ್ಟಪ್ಪಗೌಡ, ಗೋದಾವರಿ ಅವರ 2ನೇ ಪುತ್ರರಾದ ದಯಾನಂದ್ ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ಕನ್ನಡ ಬಿ.ಎ., ಮೈಸೂರು ವಿವಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದು 1985ರಲ್ಲಿ ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ವೃತ್ತಿ ಆರಂಭಿಸಿದ್ದ ನಂತರ ಬೆಂಗಳೂರಿನ ವಿ.ವಿ.ಪುರಂ ವಿಜ್ಞಾನ ಕಾಲೇಜು, ನಂತರ 1990ರಲ್ಲಿ ಕೋಲಾರ ಕೆಜಿಎಫ್ ನ ಸುಭಾಷಿಣಿ ಮಹಿಳಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಗಡಿಯಲ್ಲಿ 2006ರ ವರೆಗೆ ಕನ್ನಡ ಕೈಂಕರ್ಯ ಮಾಡಿದ್ದರು.2017 ರಿಂದ 2021 ರ ವರೆಗೆ ಹರಿಹರಪುರ ಅ.ರಾ.ಸ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದು ಒಟ್ಟು 35 ವರ್ಷ ಉಪನ್ಯಾಸಕರಾಗಿ ಕನ್ನಡಸೇವೆ ಮಾಡಿ ನಿವೃತ್ತಿ ನಂತರ ಹರಿಹರಪುರದ ನೂತನ ಅ.ರಾ.ಸ ಪದವಿ ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿ ಪ್ರಸ್ತುತ ಅದೇ ಕಾಲೇಜಿನ ಆಡಳಿತ ಮಂಡಳಿ ನಿರ್ವಹಣಾ ಸಮಿತಿ ಸದಸ್ಯರಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಬೆಮ್ಮನೆಯಲ್ಲಿ ಕೃಷಿ ಕೆಲಸ, ಓದುವ, ಬರೆಯುವ ಹವ್ಯಾಸ ಮುಂದುವರಿಸಿದ್ದು ತೋಟದ ಮನೆಯಲ್ಲಿ ಪುಟ್ಟ ಗ್ರಂಥಾಲಯ ಇವರ ಕನ್ನಡ ಕಾಳಜಿಗೆ ಅಡಿಪಾಯ.
ಕೋಗಿಲಹಳ್ಳಿ ಕೃಷ್ಣಪ್ಪ ಸಂಪಾದಕತ್ವದ ಚಿನ್ನದ ಗರಿ ಕೃತಿ, ಡಾ.ತಿಮ್ಮಯ್ಯ ಜೀವನ ಚರಿತ್ರೆ, ಹಾಸ್ಯ ಆನಂದ ಬಿಡಿ ಲೇಖನಗಳ ಕೃತಿಯಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಬೆಮ್ಮನೆ ಕುಟುಂಬದವರಿಂದ ದತ್ತಿ ನಿಧಿ ಪ್ರಾರಂಭಿಸಿದ್ದಾರೆ. ಪ್ರತಿ ವರ್ಷ ಸಾಹಿತಿ ತೇಜಸ್ವಿ ಹೆಸರಲ್ಲಿ ಮನೆಯಂಗಳದಲ್ಲಿ ದತ್ತಿ ಉಪನ್ಯಾಸ ನಡೆಯಲಿದೆ.