ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯ ನಡುವೆಯೇ ಪಕ್ಷ ಸಂಘಟನೆಗೆ ವೇಗ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಹಲವು ಸಭೆಗಳನ್ನು ನಡೆಸಿದರು.
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯ ನಡುವೆಯೇ ಪಕ್ಷ ಸಂಘಟನೆಗೆ ವೇಗ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಹಲವು ಸಭೆಗಳನ್ನು ನಡೆಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳು, ಕೆಪಿಸಿಸಿ ಸಂಯೋಜಕರೊಂದಿಗೆ ಸಭೆ ನಡೆಸಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಜತೆಗೆ, 2028ರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸುವಂತೆ ಸೂಚನೆ ನೀಡಿದರು.
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿರುವ 86 ಕ್ಷೇತ್ರಗಳ ಕುರಿತಂತೆ ಆಂತರಿಕ ಸಮೀಕ್ಷೆ ನಡೆಸಲಾಗಿದೆ. ಅದರಂತೆ 2028ರ ಚುನಾವಣೆಯಲ್ಲಿ ಸೋತ ಕ್ಷೇತ್ರಗಳಲ್ಲಿ 60 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವ ಸಾಧ್ಯತೆಗಳಿವೆ. ಹೀಗಾಗಿ ಪರಾಜಿತ ಅಭ್ಯರ್ಥಿಗಳು ಈಗಿನಿಂದಲೇ 2028ರ ಚುನಾವಣೆಗೆ ಸಿದ್ಧರಾಗಬೇಕು ಎಂದು ತಿಳಿಸಿದ್ದೇನೆ.
ಉಳಿದ 26 ಕ್ಷೇತ್ರಗಳಲ್ಲಿ ಪಕ್ಷ ಸಂಘಟಿಸುವ ಕುರಿತು ಎಐಸಿಸಿ ನಾಯಕರ ಜತೆ ಚರ್ಚಿಸಿ ಕಾರ್ಯಯೋಜನೆ ಸಿದ್ಧಪಡಿಸಲಾಗುವುದು. ಹಾಗೆಯೇ, ಶೀಘ್ರದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ತಯಾರಾಗುವಂತೆ ಪರಾಜಿತ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ ಎಂದರು.
1 ವಾರ ಕಾರ್ಯಕರ್ತರೊಂದಿಗೆ ಸಭೆ:
ಕಾರ್ಯಕರ್ತರೊಂದಿಗೆ ಚರ್ಚಿಸಲು ಮಾ.23ರಿಂದ ಏ.1ರವರೆಗೆ ವಿಧಾನಸಭಾ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗುವುದು. ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಗಾದಲ್ಲಿ ಸಭೆ ನಡೆಯಲಿದೆ. ಎಲ್ಲ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ನಾನು ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಪ್ರತಿದಿನಕ್ಕೆ 2-3 ಕ್ಷೇತ್ರಗಳಂತೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಲು ನಿರ್ಧರಿಸಿದ್ದೇನೆ.
ಈ ಸಭೆಯಲ್ಲಿ ಮಂಡಳಿ, ಸಂಘ, ಸಂಸ್ಥೆ, ಸಮಿತಿಗಳಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡ ಕಾರ್ಯಕರ್ತರನ್ನು ಸನ್ಮಾನಿಸಲಾಗುವುದು. ಆಮೂಲಕ ಅವರ ಜವಾಬ್ದಾರಿಯನ್ನು ಮನವರಿಕೆ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಪಕ್ಷದೊಳಗಿನ ಸಮಿತಿಗಳನ್ನು ಪುನಾರಚನೆ ಮಾಡಲಾಗುವುದು. ಶಾಸಕರು ತಮ್ಮ ಮನೆಗಳಲ್ಲಿ ಪಕ್ಷದ ಸಭೆ ನಡೆಸುವಂತಿಲ್ಲ. ಬದಲಿಗೆ ಪ್ರತ್ಯೇಕವಾಗಿ ಪಕ್ಷದ ಕಚೇರಿಯಲ್ಲಿ ಸಭೆ ಮಾಡಬೇಕು ಎಂದು ಸೂಚಿಸಲಾಗಿದೆ. ಈ ವರ್ಷವಿಡೀ ಪಕ್ಷ ಸಂಘಟನೆಗೆ ಮೀಸಲಿಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸೂಚಿಸಿದ್ದಾರೆ.
ಈ ವರ್ಷ ಪಕ್ಷದ ಮರುಸಂಘಟನೆಯತ್ತ ಎಲ್ಲರೂ ಗಮನಹರಿಸಬೇಕು. ಹಲವು ವರ್ಷಗಳಿಂದ ಒಂದೇ ಜವಾಬ್ದಾರಿಯನ್ನು ಹೊಂದಿರುವವರಿಗೆ ಬೇರೆ ಜವಾಬ್ದಾರಿ ನೀಡಿ, ಅವರ ಸ್ಥಾನಕ್ಕೆ ಬೇರೆಯವರನ್ನು ನೇಮಿಸಲಾಗುವುದು. ನಾವು ಯಾರ ಅಧಿಕಾರವನ್ನೂ ಕಸಿದು ಕಳುಹಿಸುವುದಿಲ್ಲ. ಪಕ್ಷದ ಸಮಿತಿಗಳ ರಚನೆ, ಪದಾಧಿಕಾರಿಗಳ ನೇಮಕವನ್ನು ಶೀಘ್ರದಲ್ಲಿ ಮಾಡಲಾಗುವುದು ಎಂದು ವಿವರಿಸಿದರು.
ರಾಜಕೀಯ ನಿರ್ಧಾರಕ್ಕೆಒಂದು ರಾತ್ರಿ ಸಾಕು
ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡುವುದು ಒಂದು ತಿಂಗಳು ತಡವಾಗಿದೆ. ಆ ವಿಚಾರವಾಗಿ ಕಳೆದ ತಿಂಗಳ ಅಂತ್ಯದಲ್ಲಿಯೇ ದೆಹಲಿಗೆ ತೆರಳಿಬೇಕಾಗಿತ್ತು. ಮುಖ್ಯಮಂತ್ರಿ ಅವರು ಚೇತರಿಸಿಕೊಂಡ ನಂತರ ಅದನ್ನು ಮಾಡುತ್ತೇವೆ. ರಾಜಕೀಯದಲ್ಲಿ ರಾತ್ರಿ ಬೆಳಗಾಗುವುದರೊಳಗೆ ನಿರ್ಧಾರ ಮಾಡಲಾಗುತ್ತದೆ. ಹೀಗಾಗಿ ಯಾವುದೇ ನಿರ್ಧಾರಕ್ಕೆ ಒಂದು ರಾತ್ರಿ ಸಾಕು ಎಂದರು.
ಪಕ್ಷ ಮುನ್ನಡೆಸುವೆ
ಚುನಾವಣೆ ಸಂದರ್ಭದಲ್ಲಿ ನಾನು ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷವನ್ನು ಮುನ್ನಡೆಸುವುದು ನನ್ನ ಕರ್ತವ್ಯ. ಹುದ್ದೆಗಳು ಪಕ್ಷವನ್ನು ಮುನ್ನಡೆಸುವಂತೆ ಮಾಡುವುದಿಲ್ಲ. ಬದಲಿಗೆ ನಾಯಕತ್ವ, ಬದ್ಧತೆ, ದೂರದೃಷ್ಟಿ ಪಕ್ಷ ಮುನ್ನಡೆಸುವುದಕ್ಕೆ ಮುಖ್ಯ. ಪಕ್ಷ ನೀಡಿರುವ ಶಕ್ತಿಯಿಂದ ನಾವು ನಾಯಕರಾಗಿದ್ದೇವೆ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ.